ಪಣಜಿ: ‘ತೆಹೆಲ್ಕಾ’ ಪತ್ರಿಕೆಯ ಮಾಜಿ ಪ್ರಧಾನ ಸಂಪಾದಕ ತರುಣ್ ತೇಜ್‌ಪಾಲ್ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣದ ವಿಚಾರಣೆಯನ್ನು ಮುಕ್ತಾಯಗೊಳಿಸಿರುವ ಗೋವಾ ಸೆಷನ್ಸ್ ನ್ಯಾಯಾಲಯ ತೀರ್ಪನ್ನು ಮೇ 12ರಂದು ಕಾಯ್ದಿರಿಸಿದೆ.
ಮಂಗಳವಾರ ಈ ಬಗ್ಗೆ ಹೇಳಿರುವ ಕೋರ್ಟ್, ಮೇ 12 ರಂದು ತೀರ್ಪು ಪ್ರಕಟಿಸಲಾಗುತ್ತಿದೆ ಎಂದು ತಿಳಿಸಿದೆ. ಈ ಮೊದಲು ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಇಂದು ತೀರ್ಪು ಪ್ರಕಟಿಸಬೇಕಿತ್ತು. ಆದರೆ, ನ್ಯಾಯಾಧೀಶೆ ಕ್ಷಮಾ ಜೋಶಿ ಅವರು ತೀರ್ಪನ್ನು ಮೇ 12 ಕ್ಕೆ ಪ್ರಕಟಿಸುವುದಾಗಿ ಹೇಳಿದ್ದಾರೆ.
ಸರ್ಕಾರದ ಪರ ವಕೀಲ ಫ್ರಾನ್ಸಿಸ್ಕೊ ಟವರೆಸ್ ಪ್ರತಿಕ್ರಿಯೆ ನೀಡಿ, ‘ಯಾವ ಕಾರಣವನ್ನೂ ನೀಡದೇ ನ್ಯಾಯಾಧೀಶರು ತೀರ್ಪನ್ನು ಮುಂದೂಡಿದ್ದಾರೆ‘ ಎಂದು ತಿಳಿಸಿದ್ದಾರೆ.
ತೆಹಲ್ಕಾದ ಸಂಸ್ಥಾಪಕ -ಸಂಪಾದಕ ತರುಣ್ ತೇಜ್‌ಪಾಲ್ 2013 ನವೆಂಬರ್ ತಿಂಗಳಿನಲ್ಲಿ ಥಿಂಕ್ ಫೆಸ್ಟ್ ಕಾರ್ಯಕ್ರಮದ ವೇಳೆ ಲೈಂಗಿಕ ದೌರ್ಜನ್ಯವೆಸಗಿದ್ದರು ಎಂದು ಅದೇ ಸಂಸ್ಥೆಯ ಕಿರಿಯ ಸಹೋದ್ಯೋಗಿಯೊಬ್ಬರು ಆರೋಪಿಸಿದ್ದರು. ಪಂಚತಾರಾ ಹೋಟೆಲ್‌ನ ಲಿಫ್ಟ್‌ನಲ್ಲಿ ತರುಣ್ ಲೈಂಗಿಕ ದೌರ್ಜನ್ಯವೆಸಗಿದ್ದರು ಎಂದು ಸಂತ್ರಸ್ತೆ ದೂರು ನೀಡಿದ್ದರು.
2013ರಲ್ಲಿ ತರುಣ್ ತೇಜ್‌ಪಾಲ್ ವಿರುದ್ಧ ದೂರು ದಾಖಲಾಗಿತ್ತು. 2013 ರ ನವೆಂಬರ್ 30 ರಂದು ತರುಣ್ ಬಂಧನವಾಗಿತ್ತು.