Advertisement

‘ಜೀರ್ಣೋದ್ಧಾರದ ಯೋಗ-ಭಾಗ್ಯ ನಮ್ಮದು’

09:54 PM Mar 23, 2019 | |

ವೇಣೂರು : ದೇಗುಲಗಳ ಜೀರ್ಣೋದ್ಧಾರ ಕಾರ್ಯದಲ್ಲಿ ಭಾಗಿಯಾಗಲು ಯೋಗ, ಭಾಗ್ಯ ಬೇಕು. ಅದೀಗ ನಮಗೆ ಲಭಿಸಿದೆ. ದ್ವೇಷ, ಅಸೂಯೆ, ತಾರತಮ್ಯ ಇಲ್ಲದೆ ಭದ್ರಕಾಳಿ ದೇವಿಗೆ ದೇಗುಲ ನಿರ್ಮಾಣ ಆಗಿದೆ. ಇಲ್ಲಿಯ ಪ್ರಧಾನ ದೇವರ ದೇಗುಲ ನಿರ್ಮಾಣಕ್ಕೂ ಸಂಕಲ್ಪ ಮಾಡಬೇಕಿದೆ. ಈ ಮೂಲಕ ಭವ್ಯ ದೇಗುಲ ನಿರ್ಮಾಣ ಆಗಲಿ ಎಂದು ಶ್ರೀಕ್ಷೇತ್ರ ಕಟೀಲಿನ ಪ್ರಧಾನ ಆಸ್ರಣ್ಣ ವೇ|ಮೂ| ಅನಂತ ಪದ್ಮನಾಭ ಅಸ್ರಣ್ಣ ಹೇಳಿದರು.

Advertisement

ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ಜರಗಿದ ಶ್ರೀ ಭದ್ರ ಮಹಾಕಾಳಿ ದೇವಿಯ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು. ಧಾರ್ಮಿಕ ಸಭೆಯ ಅಧ್ಯಕ್ಷತೆ ವಹಿಸಿದ್ದ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರು, ಅಳದಂಗಡಿ ಅರಮನೆ ತಿಮ್ಮಣ್ಣರಸ ಡಾ| ಪದ್ಮಪ್ರಸಾದ ಅಜಿಲರು ಮಾತನಾಡಿ, ಭಕ್ತರು ಹಾಗೂ ದಾನಿಗಳ ಸಹಕಾರದಿಂದ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯವೂ ಶೀಘ್ರ ನೆರವೇರುವಂತಾಗಲಿ ಎಂದರು.

ಜೀರ್ಣೋದ್ಧಾರ ಸಮಿತಿಯ ತಾಂತ್ರಿಕ ನಿರ್ವಾಹಕ, ಲೋಕೋಪಯೋಗಿ ಇಲಾಖೆಯ ಎಂಜಿನಿಯರ್‌ ಶಿವಪ್ರಸಾದ್‌ ಅಜಿಲ, ಮಂಗಳೂರಿನ ಉದ್ಯಮಿ ರಾಜಗೋಪಾಲ ರೈ, ಕುಕ್ಕೇಡಿ ಕೋಡಿಕೊಡಂಗೆಯ ರಾಧಾಕೃಷ್ಣ, ಮೂಡುಬಿದಿರೆ ನಾರಾಯಣ ಸಾಮಿಲ್‌ನ ಭಾನುಮತಿ ಶೀನಪ್ಪ, ಉದ್ಯಮಿಗಳಾದ ಆನಂದ ದೇವಾಡಿಗ ದುಬೈ, ಸುಬ್ಬಯ್ಯ ಶೆಟ್ಟಿ, ಜೀರ್ಣೋದ್ಧಾರ ಸಮಿತಿ ಪ್ರ. ಕಾರ್ಯದರ್ಶಿ ವಿ. ಪ್ರಭಾಕರ ಹೆಗ್ಡೆ ಹಟ್ಟಾಜೆ ಹಾಗೂ ಮತ್ತಿತರರು ಉಪಸ್ಥಿತರಿದ್ದರು. ತಂತ್ರಿ ಶ್ರೀಪಾದ ಪಾಂಗಾಣ್ಣಾಯ ಹಾಗೂ ಪ್ರಧಾನ ಅರ್ಚಕ ಟಿ.ವಿ. ವಿಷ್ಣುಮೂರ್ತಿ ಭಟ್‌ ಹಾಗೂ ತಂಡದವರು ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು. ವ್ಯವಸ್ಥಾಪನ ಹಾಗೂ ಜೀರ್ಣೋದ್ಧಾರ ಸಮಿತಿ ಸದಸ್ಯರು ಸಹಕರಿಸಿದರು.

ವೆಬ್‌ಸೈಟ್‌ ಬಿಡುಗಡೆ, ಸಮ್ಮಾನ
ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಗಳ ವಿವರಗಳನ್ನು ತಲುಪಿ ಸಲು ನಿರ್ಮಿಸಲಾದ ವೆಬ್‌ಸೈಟನ್ನು ಡಾ| ಪದ್ಮಪ್ರಸಾದ ಅಜಿಲರು ಅನಾವರಣಗೊಳಿಸಿದರು. ಜೀರ್ಣೋದ್ಧಾರಕ್ಕೆ ರೂ. 1 ಲಕ್ಷಕ್ಕಿಂತ ಮೇಲ್ಪಟ್ಟು ಧನಸಹಾಯ ನೀಡಿದವರನ್ನು ಸಮ್ಮಾನಿಸಲಾಯಿತು. ಶ್ರಮದಾನ ಮೂಲಕ ಸಹಕರಿಸಿದ ಪವಿತ್ರ ಜ್ಞಾನವಿಕಾಸ ಕೇಂದ್ರ ಗುಂಡೂರಿ, ಅನುಶ್ರೀ ಜ್ಞಾನ ವಿಕಾಸಕೇಂದ್ರ ಬಜಿರೆ ಹಾಗೂ ವೇಣೂರು ಪ್ರಗತಿಬಂಧು ಒಕ್ಕೂಟವನ್ನು ಗೌರವಿಸಲಾಯಿತು. ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಪಿ.ಧರಣೇಂದ್ರ ಕುಮಾರ್‌ ಸ್ವಾಗತಿಸಿ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎ. ಜಯರಾಮ ಶೆಟ್ಟಿ ಪ್ರಸ್ತಾವಿಸಿ, ಉಪನ್ಯಾಸಕ ಮಹಾವೀರ ಜೈನ್‌ ಮೂಡುಕೋಡಿ ನಿರೂಪಿಸಿ, ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಸೋಮಯ್ಯ ಹನೈನಡೆ ವಂದಿಸಿದರು.

ಸಹಾಯಹಸ್ತ ಅಗತ್ಯ
ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎ. ಜಯರಾಮ ಶೆಟ್ಟಿ ಮಾತನಾಡಿ, 1984ರಲ್ಲಿ ಜೀರ್ಣೋದ್ಧಾರಗೊಂಡಿದ್ದ ದೇವಸ್ಥಾನವನ್ನು ಸರಿಸುಮಾರು 35 ವರ್ಷಗಳ ಬಳಿಕ ಇದೀಗ ಮತ್ತೆ ಜೀರ್ಣೋದ್ಧಾರಕ್ಕೆ ಸಂಕಲ್ಪಿಸಲಾಗಿದೆ. ಇದರ ಪೂರ್ವಭಾವಿಯಾಗಿ ಕ್ಷೇತ್ರದ ಶಕ್ತಿದೇವಿ ಭದ್ರಕಾಳಿ ದೇವಿಗೆ ನೂತನ ಶಿಲಾಮಯ ಗುಡಿ ನಿರ್ಮಿಸಿ ಪ್ರತಿಷ್ಠಾಪಿಸಲಾಗಿದೆ. ದೇಗುಲ ನಿರ್ಮಾಣಕ್ಕೆ ಭಕ್ತರ, ದಾನಿಗಳ ಸಹಾಯಹಸ್ತ ಅಗತ್ಯ ಬೇಕಿದೆ ಎಂದು ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next