ವೇಣೂರು: ಕಳೆದ ನಾಲ್ಕೂವರೆ ವರ್ಷಗಳಿಂದ ಸಾವಿರಾರು ಕೋಟಿ ರೂ. ಅನುದಾನ ತರಿಸಿ ಶಾಸಕ ಹರೀಶ್ ಪೂಂಜ ಅಭಿವೃದ್ಧಿಯಲ್ಲಿ ಬೆಳ್ತಂಗಡಿ ಕ್ಷೇತ್ರವನ್ನು ಅಭಿವೃದ್ಧಿಯ ಹರಿಕಾರರಾಗಿ ರಾಜ್ಯದಲ್ಲೇ ಮಾದರಿ ಕ್ಷೇತ್ರವನ್ನಾಗಿ ಮಾಡಿದ್ದಾರೆ ಎಂದು ಭಾಜಪ ರಾಜ್ಯಧ್ಯಕ್ಷ, ದ.ಕ. ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.
ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದ ಹಿನ್ನೆಲೆಯಲ್ಲಿ ವೇಣೂರು ಮುಖ್ಯಪೇಟೆ ಹೆದ್ದಾರಿಯ ಅಭಿವೃದ್ಧಿ ಕಾಮಗಾರಿಗೆ ಬುಧವಾರ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.
ಬ್ರಹ್ಮಕಲಶ ನೆರವೇರುವ ದೇವಸ್ಥಾನಗಳ ಕ್ಷೇತ್ರದ ಪರಿಸರದಲ್ಲಿ ಮೂಲ ಸೌಲಭ್ಯ ಒದಗಿಸಬೇಕೆನ್ನುವ ಆಶಯ ಇಲ್ಲಿಯ ಶಾಸಕದ್ದು. ಲಕ್ಷಾಂತರ ಮಂದಿ ಭಕ್ತರು ಆಗಮಿಸುವ ಸಂದರ್ಭ ಯಾವುದೇ ಮೂಲಸೌಲಭ್ಯಗಳಿಗೆ ದಕ್ಕೆಯಾಗಬಾರದೆನ್ನುವ ಶಾಸಕರ ಆಶಯದಂತೆ ಸರಕಾರ ಹೆದ್ದಾರಿ ಅಭಿವೃದ್ಧಿಗೆ ಅನುದಾನ ಒದಗಿಸಿದೆ ಎಂದರು.
ಶಾಸಕ ಹರೀಶ್ ಪೂಂಜ, ವೇಣೂರು ಗ್ರಾ.ಪಂ. ಅಧ್ಯಕ್ಷ ನೇಮಯ್ಯ ಕುಲಾಲ್, ಹೊಸಂಗಡಿ ಗ್ರಾ.ಪಂ. ಅಧ್ಯಕ್ಷ ಕರುಣಾಕರ ಪೂಜಾರಿ, ಕುಕ್ಕೇಡಿ ಗ್ರಾ.ಪಂ. ಅಧ್ಯಕ್ಷ ಜನಾರ್ಧನ ಪೂಜಾರಿ, ವೇಣೂರು ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪಿ.ಯನ್. ಪುರುಷೋತ್ತಮ ರಾವ್, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಜಯಂತ್ ಕೋಟ್ಯಾನ್, ವೇಣೂರು ಗ್ರಾ.ಪಂ.ನ ಅಭಿವೃದ್ಧಿ ಅಧಿಕಾರಿ ನಾಗೇಶ್ ಎಂ., ಹೆದ್ದಾರಿ ಲೋಕೋಪಯೋಗಿ ಇಲಾಖೆಯ ಎಂಜಿನಿಯರ್ ಗುರುಪ್ರಸಾದ್ ಎಂ., ಸಹಾಯಕ ಎಂಜಿನಿಯರ್ ಶಿವಕುಮಾರ್, ಬಿಜೆಪಿ ಅಲ್ಪಸಂಖ್ಯಾಕ ಮೋರ್ಚಾದ ಅಧ್ಯಕ್ಷ ಅರುಣ್ ಕ್ರಾಸ್ತ, ವೇಣೂರು ಪ್ರಾ.ಕೃ.ಪ.ಸ. ಸಂಘದ ಅಧ್ಯಕ್ಷ ಸುಂದರ ಹೆಗ್ಡೆ ಬಿ.ಇ. ಸ್ವಾಗತಿಸಿ, ವಂದಿಸಿದರು.