Advertisement

ವೇಣುಗೋಪಾಲ್‌ ಬಿಜೆಪಿಯ ಅತ್ಯುತ್ತಮ ರಾಯಭಾರಿ: ಮುರಳೀಧರರಾವ್‌

07:00 AM Sep 13, 2017 | Team Udayavani |

ಬೆಂಗಳೂರು: ಎಐಸಿಸಿ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ಬಿಜೆಪಿಯ ಪಾಲಿಗೆ ಅತ್ಯುತ್ತಮ ರಾಯಭಾರಿಯಾಗಿದ್ದು, ಹಿಂದಿನ ಬಿಜೆಪಿ ಸರ್ಕಾರ ಮತ್ತು ಈಗಿನ ಕಾಂಗ್ರೆಸ್‌ ಸರ್ಕಾರದ ಭ್ರಷ್ಟಾಚಾರ ಮತ್ತು ಆಡಳಿತ ವೈಫ‌ಲ್ಯದ ಕುರಿತು ಬಹಿರಂಗ ಚರ್ಚೆಗೆ ಬರುವಂತೆ ಅವರು ಹಾಕಿರುವ ಸವಾಲು ಸ್ವೀಕರಿಸಿದ್ದೇವೆ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರರಾವ್‌ ಹೇಳಿದ್ದಾರೆ.

Advertisement

ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಹಿರಂಗ ಚರ್ಚೆ ಕುರಿತಾಗಿ ವೇಣುಗೋಪಾಲ್‌ ಅವರು ಹಾಕಿರುವ ಸವಾಲು ಸ್ವೀಕರಿಸಿದ್ದೇವೆ. ದಿನಾಂಕ ಮತ್ತು ಸ್ಥಳವನ್ನು ಅವರು ನಿಗದಿಪಡಿಸಲಿ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಮುಂದೆ ನಿಂತು ಚರ್ಚೆ ಆರಂಭಿಸಲಿ ಎಂದು ಪ್ರತಿಸವಾಲು ಹಾಕಿದರು.

ವೇಣುಗೋಪಾಲ್‌ ಅವರು ಬಿಜೆಪಿಯ ಪಾಲಿಗೆ ಅತ್ಯುತ್ತಮ ರಾಯಭಾರಿ. ಅವರೇ ಮುಂದೆ ನಿಂತು ಬಿಜೆಪಿಯನ್ನು ಗೆಲ್ಲಿಸಲಿದ್ದಾರೆ. ಅದಕ್ಕೆ ಸೂಕ್ತ ವೇದಿಕೆಯನ್ನು ಅವರೇ ಸೃಷ್ಟಿಸುತ್ತಿದ್ದಾರೆ. ಈ ಕಾರಣಕ್ಕಾಗಿಯೇ ಅವರು ಭ್ರಷ್ಟಾಚಾರ ಕುರಿತ ಚರ್ಚೆಗೆ ಆಹ್ವಾನ ನೀಡಿದ್ದಾರೆ ಎಂದು ವ್ಯಂಗ್ಯವಾಡಿದರು.

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಭ್ರಷ್ಟಾಚಾರ ಎಂಬುದು ನಾಚಿಕೆ ಇಲ್ಲದೆ ನಡೆಯುವ ದಂಧೆಯಾಗಿದೆ. ಕಾಂಗ್ರೆಸ್‌ನವರಿಗೆ ಇದು ಹವ್ಯಾಸ ಎನ್ನುವಂತಾಗಿದೆ. ಈ ಕಾರಣಕ್ಕಾಗಿಯೇ ಬಿಜೆಪಿ ಭ್ರಷ್ಟಾಚಾರ ಮುಕ್ತ ಕರ್ನಾಟಕಕ್ಕಾಗಿ ರಥಯಾತ್ರೆ ಹಮ್ಮಿಕೊಂಡಿದೆ. ಭ್ರಷ್ಟಾಚಾರ ಮುಕ್ತ ಕರ್ನಾಟಕವಾಗಬೇಕಾದರೆ ಕಾಂಗ್ರೆಸ್‌ ಮುಕ್ತ ಕರ್ನಾಟಕ ಆಗಬೇಕಿದ್ದು, ಇದಕ್ಕೆ ಸಿದ್ಧತೆ ನಡೆಯುತ್ತಿದೆ ಎಂದು ಹೇಳಿದರು.

ಚುನಾವಣೆಗೆ ಬಿಜೆಪಿ ಸಿದ್ಧ:
ಮುಂಬರುವ ವಿಧಾನಸಭೆ ಚುನಾವಣೆಗೆ ನಮ್ಮ ಸಿದ್ಧತೆಗಳು ಪ್ರಮುಖ ಹಂತಕ್ಕೆ ಬಂದು ತಲುಪಿವೆ. ಚುನಾವಣಾ ಸಿದ್ಧತೆ ಜತೆಗೆ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಹೋರಾಟಕ್ಕೂ ನಾವು ಸಜ್ಜಾಗಿದ್ದು, ಯಾವುದೇ ಸಂದರ್ಭದಲ್ಲಿ ಚುನಾವಣೆ ಎದುರಾದರೂ ಅದಕ್ಕೆ ಬಿಜೆಪಿ ಸಿದ್ಧವಾಗಿದೆ. ನಾವು ಅತಿ ಬೇಗ ಚುನಾವಣೆಯಾದರೆ ಉತ್ತಮ ಎಂದು ಬಯಸುತ್ತಿದ್ದೇವೆ. ಜನರಲ್ಲೂ ಅದೇ ಭಾವನೆಯಿದ್ದು, ಆದರೆ, ಸರ್ಕಾರ ನಡೆಸುವವರು ಇದಕ್ಕೆ ಮನಸ್ಸು ಮಾಡಬೇಕಷ್ಟೆ ಎಂದರು.

Advertisement

ರಾಜ್ಯ ಬಿಜೆಪಿಯಲ್ಲಿ ಒಗ್ಗಟ್ಟು ಬಂಡೆಯಂತೆ ಗಟ್ಟಿಯಾಗಿದೆ. ಕೇಡರ್‌ ಬಲ ಮತ್ತು ಬೂತ್‌ ಮಟ್ಟದಲ್ಲಿ ಸಂಘಟನೆ ವಿಚಾರದಲ್ಲಿ ಕಾಂಗ್ರೆಸ್‌ ನಮ್ಮ ಹತ್ತಿರವೂ ಸುಳಿಯುವ ಮಟ್ಟಕ್ಕೆ ಇಲ್ಲ. ಇದೆಲ್ಲವನ್ನೂ ಗಮನಿಸಿಯೇ ಮುಂಬರುವ ವಿಧಾನಸಭೆ ಚುನಾವಣೆಗೆ ಬಿಜೆಪಿ “150 ಪ್ಲಸ್‌- ನಾಟ್‌ ಲೆಸ್‌’ ಎಂದು ಸಿದ್ಧವಾಗುತ್ತಿದೆ. ಆ ಮೂಲಕ ಅಮಿತ್‌ ಶಾ ಮತ್ತು ನರೇಂದ್ರ ಮೋದಿ ಅವರ ಮಿಷನ್‌ ಸೌತ್‌ ಟು 2019ಗೆ ಕರ್ನಾಟಕವನ್ನು ರೂಪಿಸಲಾಗುತ್ತಿದೆ ಎಂದರು.

ಭ್ರಷ್ಟ ಅಧಿಕಾರಿಗಳಿಗೆ ಸ್ಥಾನವಿಲ್ಲ:
ರಾಜ್ಯ ಸರ್ಕಾರದ ಭ್ರಷ್ಟಾಚಾರದಲ್ಲಿ ಕೆಲವು ಅಧಿಕಾರಿಗಳೂ ಶಾಮೀಲಾಗಿದ್ದಾರೆ ಎಂಬ ಮಾತು ಕೇಳಿಬರುತ್ತಿದ್ದು, ಮುಂದೆ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಅಂತಹ ಅಧಿಕಾರಿಗಳನ್ನು ಸಹಿಸಿಕೊಳ್ಳುವುದಿಲ್ಲ. ನಮ್ಮ ಸರ್ಕಾರದಲ್ಲಿ ಅಂಥವರಿಗೆ ಅವಕಾಶವಿಲ್ಲ ಎಂದು ಮುರಳೀಧರರಾವ್‌ ಇದೇ ವೇಳೆ ಎಚ್ಚರಿಕೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next