Advertisement

ಉದ್ಘಾಟನೆಗೂ ಮುನ್ನ ಹಡವಿನಗದ್ದೆ  ವೆಂಟೆಡ್‌ ಡ್ಯಾಮ್‌ ಕುಸಿತದ ಭೀತಿ

01:30 AM Sep 26, 2018 | Karthik A |

ಬೈಂದೂರು: ಜನರ ತೀವ್ರ ಬೇಡಿಕೆ ಹಿನ್ನೆಲೆಯಲ್ಲಿ ಸರಕಾರದಿಂದ ಮಂಜೂರಾಗಿ ಕಾಮಗಾರಿ ಶುರುವಾದ ಯಡ್ತರೆ ಗ್ರಾಮದ ಹಡವಿನಗದ್ದೆ ಕ್ರಸ್ಟ್‌ ಗೇಟ್‌ (ವೆಂಟೆಂಡ್‌ ಡ್ಯಾಮ್‌) ಉದ್ಘಾಟನೆಗೂ ಮುನ್ನ ಕುಸಿಯುವ ಭೀತಿ ಎದುರಿಸುತ್ತಿದೆ. ಇದರಿಂದಾಗಿ ಮಹ‌ತ್ವಾಕಾಂಕ್ಷಿ ಯೋಜನೆಯೊಂದು ಇಲಾಖೆಯ ನಿರ್ಲಕ್ಷ ದಿಂದಾಗಿ ನದಿಪಾಲಾಗುವ ಸಾಧ್ಯತೆಗಳಿವೆ.

Advertisement

ಕೃಷಿಕರ ಪಾಲಿಗೆ ನಿರಾಸೆ 
ಯಡ್ತರೆ ಗ್ರಾಮದ ಹಡವಿನಗದ್ದೆ ಬಳಿ ತೂದಳ್ಳಿ ಹೊಳೆ ಹರಿಯುತ್ತದೆ. 1980ರಲ್ಲಿ ನದಿ ನೀರನ್ನು ಸದ್ಬಳಕೆ ಮಾಡುವ ಉದ್ದೇಶದಿಂದ ಅಣೆಕಟ್ಟನ್ನು ನಿರ್ಮಿಸಿ ಕಾಲುವೆ ಮೂಲಕ ಆಲಂದೂರು, ಕೇಸ್ನಿ ಮುಂತಾದ ಊರುಗಳಿಗೆ ನೀರು ಸರಬರಾಜು ಮಾಡಲಾಗಿತ್ತು.ಇದು ನಾಲ್ಕೈದು ಊರುಗಳ ರೈತರ ಬದುಕು ಹಸನಾಗಿಸಿತ್ತು. ಕಾಲಕ್ರಮೇಣ ನೀರಿನ ಸೆಳೆತದ ಪರಿಣಾಮ ಅಣೆಕಟ್ಟಿನ ಒಂದೊಂದೆ ಕಂಬಗಳು ನದಿ ಪಾಲಾಗಿ ಸಂಪೂರ್ಣ ಬಿದ್ದುಹೋಗಿತ್ತು. ಬಳಿಕ ಬೇಡಿಕೆಗಳ ಮೇರೆಗೆ 2016-17ನೇ ಸಾಲಿನಲ್ಲಿ ರಾಜ್ಯ ಸರಕಾರದ ಸಣ್ಣ ನೀರಾವರಿ ಇಲಾಖೆಯಿಂದ 1.51 ಕೋಟಿ ಅನುದಾನ ಬಿಡುಗಡೆಯಾಗಿ ಹೊಸ ಅಣೆಕಟ್ಟೆಯ ಬಹುತೇಕ ಕಾಮಗಾರಿ ಪೂರ್ಣಗೊಂಡಿತ್ತು.

ಕಾಮಗಾರಿ ನೆನೆಗುದಿಗೆ 
ಸಾಮಾನ್ಯವಾಗಿ ಇಲಾಖೆ ನಿರ್ದೇಶನದಂತೆ ಕಾಮಗಾರಿ ನಡೆಯಬೇಕು ಮತ್ತು ಗುತ್ತಿಗೆದಾರರು ನಿಗದಿತ ಸಮಯದ ಒಳಗೆ ಕಾಮಗಾರಿ ಪೂರ್ಣಗೊಳಿಸ ಬೇಕು. ಆದರೆ ಹಡವಿನಗದ್ದೆ ಕಿಂಡಿ ಅಣೆಕಟ್ಟು ಕಾಮಗಾರಿಯಲ್ಲಿ ಇಂಜಿನಿಯರ್‌ ಹಾಗೂ ಗುತ್ತಿಗೆದಾರರ ಜಟಾಪಟಿಯಿಂದಾಗಿ ಒಂದು ವರ್ಷದಿಂದ ಕಾಮಗಾರಿ ತಟಸ್ಥಗೊಂಡಿದೆ. ಅರೆಬರೆ ಕಾಮಗಾರಿಯಿಂದಾಗಿ ಮಳೆಗಾಲದಲ್ಲಿ ನದಿ ನೀರಿನ ಸೆಳೆತ ಹೆಚ್ಚಿದ ಪರಿಣಾಮ ಸೇತುವೆಯೂ ನದಿ ಪಾಲಾಗುವ ಸಾಧ್ಯತೆಗಳಿವೆ. ಆದರೆ ಈ ವಿಚಾರವನ್ನು ಮೇಲಧಿಕಾರಿಗಳು ಗಮನಕ್ಕೆ ತೆಗೆದುಕೊಳ್ಳದಿರುವುದು ಅಚ್ಚರಿ ಪಡುವಂತಾಗಿದೆ.

ಸದ್ಯ ವೆಂಟೆಂಡ್‌ ಡ್ಯಾಮ್‌ ಅಪೂರ್ಣಗೊಂಡಿದ್ದರಿಂದ ರೈತರು ಆತಂಕ ಪಡು ವಂತಾಗಿದೆ. ಕ್ರಸ್ಟ್‌ ಗೇಟ್‌ಗಳು ನೀರಿನ ರಭಸಕ್ಕೆ ಬಾಗಿ ಹೋಗಿವೆ.ಸೇತುವೆ ನಿರ್ಮಾಣಕ್ಕೆ ಸಲಕರಣೆಗಳನ್ನು ಇಡಲು ಜಾಗ ನೀಡಿದ ಖಾಸಗಿಯವರ ತೋಟಗಳು  ಗುತ್ತಿಗೆದಾರರ ನಿರ್ಲಕ್ಷದಿಂದಾಗಿ ಸಂಪೂರ್ಣ ನದಿ ಪಾಲಾಗಿದೆ. ಮಳೆಗಾಲದಲ್ಲಿ ನೀರಿನ ಸೆಳೆತದಿಂದಾಗಿ ಡ್ಯಾಂ ಬಲಪಾರ್ಶ್ವದ ಗೋಡೆ ಕುಸಿದು ಹೋಗಿದೆ. ಮಳೆಗಾಲದ ಒಳಗೆ ಇದನ್ನು ದುರಸ್ತಿ ಮಾಡದಿದ್ದರೆ ಸಂಪೂರ್ಣ ಕೊಚ್ಚಿಹೋಗುವ ಸಾಧ್ಯತೆ ಗಳಿವೆ. ಒಂದು ವರ್ಷದಿಂದ ಕಾಮಗಾರಿ ತಟಸ್ಥಗೊಂಡರೂ, ಇಲಾಖೆ ಕ್ರಮ ಕೈಗೊಳ್ಳದಿರುವುದು ನಿರ್ಲಕ್ಷ್ಯತನವನ್ನು ಎತ್ತಿ ತೋರಿಸಿದೆ. ಹೀಗಾಗಿ ಸಾರ್ವಜನಿಕರು ಲೋಕಾಯುಕ್ತಕ್ಕೆ ದೂರು ನೀಡುವ ಸಿದ್ಧತೆ ನಡೆಸುತ್ತಿದ್ದಾರೆ.

ಗುತ್ತಿಗೆದಾರರ ನಿರ್ಲಕ್ಷ
ಗುತ್ತಿಗೆದಾರರ ನಿರ್ಲಕ್ಷದಿಂದಾಗಿ ಈ ರೀತಿಯ ಸಮಸ್ಯೆಯಾಗಿದೆ. ಕಾಮಗಾರಿ ಕಳಪೆಯಾಗಿರುವ ಜೊತೆಗೆ ಇಲಾಖೆಯ ನಿರ್ದೇಶನ ಸರಿಯಾಗಿ ಪಾಲಿಸದೆ ರಾಜಕೀಯ ಪ್ರಭಾವ ಬೀರುವುದರ ವಿರುದ್ಧ  ಈಗಾಗಲೇ ಗುತ್ತಿಗೆದಾರರಿಗೆ ನೋಟಿಸ್‌ ನೀಡಲಾಗಿದೆ.
– ಆಲ್ವಿನ್‌, ಸಣ್ಣ ನೀರಾವರಿ ಇಲಾಖೆ

Advertisement

ಇಲಾಖೆ ಸ್ಪಂದಿಸುತ್ತಿಲ್ಲ
ಇಲಾಖೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಕಾಮಗಾರಿ ಪರಿಪೂರ್ಣವಾಗಿ ನಡೆಸಿದರೂ ಯಾವುದೇ ಹಣವನ್ನು ಇದುವರೆಗೆ ಬಿಡುಗಡೆ ಮಾಡಿಲ್ಲ. ಹೀಗಿದ್ದಾಗ ಕಾಮಗಾರಿ ನಡೆಸುವುದಾದರು ಹೇಗೆ? ಆದ್ದರಿಂದ ಇದಕ್ಕೆ ಇಲಾಖೆ ಹಾಗೂ ಎಂಜಿನಿಯರ್‌ ಅವರೇ ಜವಾಬ್ದಾರರು.
– ಗೋಕುಲ್‌ ಶೆಟ್ಟಿ, ಗುತ್ತಿಗೆದಾರರು

— ಅರುಣ ಕುಮಾರ್‌ ಶಿರೂರು

Advertisement

Udayavani is now on Telegram. Click here to join our channel and stay updated with the latest news.

Next