ಬೆಂಗಳೂರು: ಪ್ರೇಯಸಿ ಕೈ ಕೊಟ್ಟಳು ಎಂಬ ಕಾರಣ ಹೇಳಿ ಫಿನಾಯಿಲ್ ಕುಡಿದು ಕಳೆದ ಎರಡು ದಿನಗಳ ಹಿಂದೆ ಹೈಡ್ರಾಮ ಸೃಷ್ಟಿಸಿದ್ದ ಚಿತ್ರನಟ ಹುಚ್ಚ ವೆಂಕಟ್, ಬುಧವಾರ ಪತ್ರಿಕಾಗೋಷ್ಟಿಯಲ್ಲಿಯೇ ಪತ್ರಕರ್ತರ ಜೊತೆ ವಾಗ್ವಾದಕ್ಕಿಳಿದರು.
ಬುಧವಾರ ಮಧ್ಯಾಹ್ನ ಪ್ರಸ್‌ಕ್ಲಬ್‌ನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ವೆಂಕಟ್, “ನಾನು ಆತ್ಮಹತ್ಯೆಗೆ ಯತ್ನಿಸಲು ನಟಿ ರಚನಾ ಕಾರಣ. ನನ್ನನ್ನು ಪ್ರೀತಿಸಿ ಮೋಸ ಮಾಡಿದ್ದಾಳೆ. ಆಕೆ ಹಾಗೂ ನಾನು ಸೂಪರ್ ಜೋಡಿ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ ನಂತರ ಪರಸ್ಪರ ಪ್ರೀತಿಸುತ್ತಿದ್ದೆವು.
ಆಕೆಯ ಕುಟುಂಬ ಮನೆ ಬದಲಿಸದಾಗ ಹಣಕಾಸು ನೆರವನ್ನೂ ನೀಡಿದ್ದೆ. ಈ ನಡುವೆ ಮನೆಯಲ್ಲಿ ನಮ್ಮ ಮದುವೆ ವಿಚಾರ ಮಾತನಾಡುವುದಾಗಿ ರಚನಾ ಹೇಳಿದ್ದಳು. ಬಳಿಕ ಖಾಸಗಿ ಕಂಪನಿಗೆ ಆಕೆ ಕೆಲಸಕ್ಕೆ ಸೇರಿದ ನಂತರವೂ ಅನೂನ್ಯವಾಗಿದ್ದೆವು. ಆದರೆ ಇತ್ತೀಚೆಗೆ ದೆಹಲಿಗೆ ತೆರಳಿದ ನಂತರ ಬದಲಾಗಿಬಿಟ್ಟಿದ್ದಾಳೆ,’ ಎಂದು ಕಥೆ ಹೇಳಿದರು.
ಅಷ್ಟಕ್ಕೇ ಸುಮ್ಮನಾಗದ ವೆಂಕಟ್, “ಆಕೆ ಪ್ರೀತಿ ನಿರಾಕರಿಸಿದ್ದೇ ನಾನು ಆತ್ಮಹತ್ಯೆಗೆ ಯತ್ನಿಸುವಂತೆ ಮಾಡಿತು. ಆಕೆ ನನಗೆ ಪ್ರೇಮಪತ್ರ ಬರೆದಿರುವುದು ಇಲ್ಲಿದೆ ಎಂದು ತೋರಿಸಿ ವಿವರಣೆ ನೀಡಿ ಅವಳು ಬಿಟ್ಟುಹೋದ ನಂತರ ದಿನವೂ ಮದ್ಯ ಸೇವಿಸುತ್ತೀದ್ದೇನೆ,’ ಎಂಬಿತ್ಯಾದಿ ಅನಗತ್ಯ ವಿಚಾರ ಪ್ರಸ್ತಾಪಿಸುತ್ತಿದ್ದಂತೆ ಪತ್ರಕರ್ತರು ನೇರ ವಿಷಯವನ್ನು ಹೇಳಿ ಎಂದು ತಾಕೀತು ಮಾಡಿದರು.
ಇದೇ ವಿಚಾರವಾಗಿ ವೆಂಕಟ್ ಹಾಗೂ ಪತ್ರಕರ್ತರ ನಡುವೆ ಮಾತಿಗೆ ಮಾತು ಬೆಳೆದು ಜೋರು ಜಗಳ ಆರಂಭವಾಯಿತು. “ನೀವು ಆತ್ಮಹತ್ಯೆಗೆ ಯತ್ನಿಸುತ್ತಿರುವುದನ್ನು ಮಾಧ್ಯಮಗಳಿಗೆ ಏಕೆ ಮೆಸೇಜ್ ಮಾಡುತ್ತೀರ? ಹೆಣ್ಣುಮಕ್ಕಳ ವ್ಯಕ್ತಿತ್ವಕ್ಕೆ ಮಸಿ ಬಳಿಯುಂತೆ ಏಕೆ ಆರೋಪಗಳನ್ನು ಮಾಡುತ್ತೀರಾ?’ ಎಂದು ತರಾಟೆಗೆ ತೆಗೆದುಕೊಳ್ಳುತ್ತಿದ್ದಂತೆ ವ್ಯಗ್ರನಾದ ವೆಂಕಟ್, “ಅದು ನನ್ನಿಷ್ಟ.
ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ. ಕೇಳಲು ನೀವ್ಯಾರು,’ ಎಂದು ವಿಚಿತ್ರವಾಗಿ ವರ್ತಿಸಿ ಗಲಾಟೆ ಆರಂಭಿಸಿದ. ಸುಮಾರು ಹೊತ್ತಿನ ಜಟಾಪಟಿಯ ನಂತರ ಹಿರಿಯ ಪತ್ರಕರ್ತರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಪುನಃ ಪತ್ರಕರ್ತರ ಬಳಿ ಕ್ಷಮೆ ಕೋರಿ ಮಾತಿಗೆ ಕುಳಿತ ವೆಂಕಟ್, ಕಣ್ಣೀರಿಡುತ್ತಾ, “ನನಗೆ ನೀವು ಬೆಂಬಲವಾಗಿದ್ದೀರಿ,’ ಎಂದು ಹೇಳಿದ.
ಕೆಲ ಹೊತ್ತಿನ ಬಳಿಕ ಪತ್ರಕರ್ತರು-ವೆಂಕಟ್ ನಡುವೆ ಮತ್ತೆ ಜಗಳ ಆರಂಭವಾಯಿತು. ಈ ಹಿನ್ನೆಲೆಯಲ್ಲಿ ಪತ್ರಿಕಾಗೋಷ್ಟಿಯನ್ನೇ ರದ್ದುಗೊಳಿಸಿದ ಹಿರಿಯ ಪತ್ರಕರ್ತರು, ವೆಂಕಟ್‌ನನ್ನು ಹೊರ ಕಳುಹಿಸಿದರು.