Advertisement

15ನೇ ಉಪರಾಷ್ಟ್ರಪತಿಯಾಗಿ ಎಂ.ವೆಂಕಯ್ಯ ನಾಯ್ಡು ಪ್ರಮಾಣ ವಚನ

07:30 AM Aug 12, 2017 | Team Udayavani |

ನವದೆಹಲಿ: ದೇಶದ 15ನೇ ಉಪರಾಷ್ಟ್ರಪತಿಯಾಗಿ ಎಂ.ವೆಂಕಯ್ಯ ನಾಯ್ಡು ಅವರು ಶುಕ್ರವಾರ ಅಧಿಕಾರ ಸ್ವೀಕರಿಸಿದ್ದಾರೆ. ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ನಾಯ್ಡು ಅವರಿಗೆ ಪ್ರಮಾಣ ವಚನ ಬೋಧಿಸಿದ್ದಾರೆ.

Advertisement

ಶುಭ್ರ ಶ್ವೇತ ವಸ್ತ್ರದ ಶರಟು, ಪಂಚೆಯಲ್ಲಿ ಮಿಂಚಿದ ನಾಯ್ಡು, ಹಿಂದಿಯಲ್ಲಿ ದೇವರ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದರು. ರಾಷ್ಟ್ರಪತಿ ಭವನದ ದರ್ಬಾರ್‌ ಹಾಲ್‌ನಲ್ಲಿ ಶುಕ್ರವಾರ ನಡೆದ ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ಮಾಜಿ ಉಪರಾಷ್ಟ್ರಪತಿ ಹಮೀದ್‌ ಅನ್ಸಾರಿ, ಲೋಕಸಭಾ ಸ್ಪೀಕರ್‌ ಸುಮಿತ್ರಾ ಮಹಾಜನ್‌, ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌, ರಾಜ್ಯಸಭೆಯ ವಿಪಕ್ಷ ನಾಯಕ ಗುಲಾಂ ನಬಿ ಆಜಾದ್‌, ಬಿಜೆಪಿ ಹಿರಿಯ ನೇತಾರ ಎಲ್‌.ಕೆ.ಅಡ್ವಾಣಿ, ಕೇಂದ್ರ ಸರ್ಕಾರದ ಸಚಿವರುಗಳು, ವಿವಿಧ ರಾಜಕೀಯ ಪಕ್ಷಗಳ ನಾಯಕರು, ಅಧಿಕಾರಿ ವರ್ಗ ಹಾಜರಿದ್ದರು. 

ರಾಜ್ಯಸಭೆಯಲ್ಲಿ ಸ್ವಾಗತ: ರಾಜ್ಯಸಭೆಯ ನೂತನ ಸಭಾಧ್ಯಕ್ಷ ನಾಯ್ಡು ಅವರಿಗೆ ಶುಕ್ರವಾರ ಸದನ ಸ್ವಾಗತ ಕೋರಿತು. ಇದೇ ವೇಳೆ ಹಲವು ಸದಸ್ಯರು ರಾಜ್ಯಸಭೆಯಲ್ಲಿ ಮಂಡನೆ ಯಾದ ಮಸೂದೆಗಳನ್ನು ಚರ್ಚೆಯಿಲ್ಲದೇ ತರಾತುರಿಯಲ್ಲಿ ಪಾಸು ಮಾಡುವುದು ಬೇಡ ಎಂಬ ಅಭಿಪ್ರಾಯ ವ್ಯಕ್ತಪಡಿ ಸಿದರು. ಸಣ್ಣ ಪಕ್ಷಗಳು ಸದನದಲ್ಲಿ ಮಾತನಾಡಲು ತಮಗೂ ಸೂಕ್ತ ಅವಕಾಶ ನೀಡಬೇಕು ಎಂದು ಕೇಳಿಕೊಂಡವು. 

ನಾಯ್ಡು ಅವರನ್ನು ಸ್ವಾಗತಿಸಿ ಮಾತನಾಡಿದ ಪ್ರಧಾನಿ ಮೋದಿ ಅವರು, “ತೀರ ಗ್ರಾಮೀಣ ಹಿನ್ನೆಲೆಯಿಂದ ಬಂದ ವಿನಮ್ರ ಸ್ವಭಾವದ ವ್ಯಕ್ತಿಯೋರ್ವರು ಅತ್ಯುನ್ನತ ಸಾಂವಿ ಧಾನಿಕ ಹುದ್ದೆಗೆ ಏರುವಂತಾಗಿದೆ. ಇದೇ ಪ್ರಜಾಪ್ರಭುತ್ವದ ಶ್ರೇಷ್ಠತೆ’ ಎಂದು ಬಣ್ಣಿಸಿದರು. ಇನ್ನು ವಿಪಕ್ಷ ನಾಯಕ ಗುಲಾಂ ನಬಿ ಆಜಾದ್‌ ಮಾತನಾಡಿ, “ನಾಯ್ಡು ಅವರು ಈಗ ಸ್ವತಂತ್ರ್ಯ ವ್ಯಕ್ತಿಯಾಗಿದ್ದು, ಪಕ್ಷದವರಾಗಿ ಉಳಿದಿಲ್ಲ. ಅಧ್ಯಕ್ಷರಾಗಿ ಸಮತೋಲಿತವಾಗಿ ನಡೆದುಕೊಳ್ಳಬೇಕಿದೆ’ ಎಂದರು. 

ವಿಚಾರಗಳ ಮಂಥನ, ನಿರ್ಧಾರ ಆಗಬೇಕಿದೆ; ಕಲಾಪ ಭಂಗವಲ್ಲ
ರಾಜ್ಯಸಭೆ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದ ವೆಂಕಯ್ಯ ನಾಯ್ಡು ಅವರು, “ರಾಜ್ಯಸಭೆಯಲ್ಲಿ ವಿಚಾರಗಳ ಮಂಥನ, ನಿರ್ಧಾರ ಆಗಬೇಕಿದೆಯೇ ಹೊರತು ಕಲಾಪ ಭಂಗವಲ್ಲ ಎಂದು ಹೇಳಿದ್ದಾರೆ. ಅಲ್ಲದೇ ತರಾತುರಿಯಲ್ಲಿ ಮಸೂದೆಗಳನ್ನು ಪಾಸು ಮಾಡು ವುದಕ್ಕೂ ತಾವು ವಿರೋಧವಾಗಿದ್ದು, ಇದು ಕಲಾಪಕ್ಕೆ ಅಡ್ಡಿ ಇಲ್ಲದೇ ಇದ್ದರೆ ಸಾಂಗವಾಗಿ ನೆರವೇರಲಿದೆ ಎಂದಿದ್ದಾರೆ. ಅಲ್ಲದೇ ವಿವಿಧ ಪಕ್ಷಕ್ಕೆ ಸೇರಿದ ಸದಸ್ಯ ರಷ್ಟೇ ಇಲ್ಲಿದ್ದು, ಶತ್ರುಗಳಲ್ಲ. ನಾವು ದೇಶ ಬಲಿಷ್ಠಪ ಡಿಸಲು ಒಟ್ಟಾಗಿ ಕೆಲಸ ಮಾಡಬೇಕಿದೆ’ ಎಂದಿದ್ದಾರೆ.

Advertisement

ಅಧಿವೇಶನಕ್ಕೆ ತೆರೆ
ಮುಂಗಾರು ಅಧಿವೇಶನದಲ್ಲಿ ರಾಜ್ಯಸಭೆ ಕಲಾಪ ನಡೆದಿದ್ದು ಶೇ.79.95
ಲೋಕಸಭೆಯಲ್ಲಿ ಕಲಾಪ ನಡೆದಿದ್ದು ಶೇ.77.94
ಲೋಕಸಭೆಯಲ್ಲಿ ಮಂಡನೆಯಾದ ಮಸೂದೆಗಳು 17
ಈ ಪೈಕಿ ಅಂಗೀಕಾರಗೊಂಡಿದ್ದು 14
ರಾಜ್ಯಸಭೆಯಲ್ಲಿ ಅಂಗೀಕಾರಗೊಂಡಿದ್ದು 09

ಕಾರ್ಪೊರೇಟ್‌ ಸಾಲ ಮಾಫಿ ಮಾಡಿದ್ದು ಸರ್ಕಾರವಲ್ಲ: ಜೇಟ್ಲಿ 
ಕಾರ್ಪೊರೇಟ್‌ಗಳು ಮಾಡಿರುವ ಸಾಲದ ಪೈಕಿ ಒಂದೇ ಒಂದು ರೂಪಾಯಿಯನ್ನೂ ಸರ್ಕಾರ ಮಾಫಿ ಮಾಡಿಲ್ಲ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಶುಕ್ರವಾರ ಸ್ಪಷ್ಟಪಡಿಸಿದ್ದಾರೆ. ಲೋಕಸಭೆಯಲ್ಲಿ ಈ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, “ಕಾರ್ಪೊರೇಟ್‌ ಸಾಲವನ್ನು ಮಾಫಿ ಮಾಡಿದ್ದು ಸರ್ಕಾರವಲ್ಲ. ಅದು ಆಯಾ ಬ್ಯಾಂಕುಗಳ ವೈಯಕ್ತಿಕ ನಿರ್ಧಾರ. ಈ ಬಗ್ಗೆ ಮಾತನಾಡುವವರು ಮೊದಲು ಸರಿಯಾದ ಅಂಕಿಅಂಶಗಳನ್ನು ತಿಳಿದುಕೊಳ್ಳಲಿ,’ ಎಂದು ಹೇಳಿದ್ದಾರೆ. ಇದೇ ವೇಳೆ, ಶುಕ್ರವಾರ ಮುಂಗಾರು ಅಧಿವೇಶನ ಮುಕ್ತಾಯವಾಗಿದ್ದು, ಲೋಕಸಭೆ ಮತ್ತು ರಾಜ್ಯಸಭೆ ಕಲಾಪಗಳನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next