ಹೊಸದಿಲ್ಲಿ: ಸಿಜೆಐ ದೀಪಕ್ ಮಿಶ್ರಾ ಮಹಾಭಿಯೋಗಕ್ಕೆ ಕಾಂಗ್ರೆಸ್ ಸೇರಿದಂತೆ ಏಳು ಪಕ್ಷಗಳು ನೀಡಿದ್ದ ನೋಟಿಸ್ ತಿರಸ್ಕರಿಸಿದ ಸಭಾಪತಿ ವೆಂಕಯ್ಯ ನಾಯ್ಡು ಕ್ರಮಕ್ಕೆ ನ್ಯಾಯಾಂಗ ವಲಯದಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಹಿರಿಯ ವಕೀಲ ಸೋಲಿ ಸೊರಾಬ್ಜಿ ಸೇರಿದಂತೆ ಹಲವರು ಇದು ಸೂಕ್ತ ಕ್ರಮ ಎಂದಿದ್ದಾರೆ. ನಾಯ್ಡು ಸರಿಯಾದ ನಿರ್ಧಾರ ಕೈಗೊಂಡಿದ್ದಾರೆ. ಅವರು ನ್ಯಾಯಾಂಗ ತಜ್ಞರ ಸಲಹೆ ಪಡೆದು ಅದಕ್ಕೆ ಅನುಗುಣವಾಗಿ ನಿರ್ಧಾರ ಕೈಗೊಂಡಿದ್ದಾರೆ. ಈ ವಿಚಾರವನ್ನು ತುಂಬಾ ದಿನಗಳವರೆಗೆ ಅನಿಶ್ಚಿತತೆಯಲ್ಲಿ ಇಡುವುದು ಒಳ್ಳೆಯದಲ್ಲ. ಒಂದೊಮ್ಮೆ ಈ ಸಂಬಂಧ ಸುಪ್ರೀಂ ಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದರೂ ಅದರಲ್ಲಿ ವಿಪಕ್ಷಗಳು ಯಶಸ್ಸು ಕಾಣುವುದು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ಅಲ್ಲದೆ ಈ ಬಗ್ಗೆ ಮಾತನಾಡಿದ ಹಿರಿಯ ವಕೀಲ ಫಾಲಿ ಎಸ್ ನಾರಿಮನ್ ಕೂಡ, ಸಿಜೆಐ ಸೇವಾವಧಿ 4-5 ವರ್ಷಗಳಿದ್ದರೆ ಆಗ, ಮಹಾಭಿಯೋಗದ ವಿಚಾರವನ್ನು ಚರ್ಚಿಸಬಹುದಾಗಿತ್ತು. ಆಗ ಅದಕ್ಕೆ ಅರ್ಥವೂ ಇರುತ್ತಿತ್ತು. ನ್ಯಾಯಾಂಗದ ಘನತೆಯನ್ನು ಕುಂದಿಸುವುದೇ ಕಾಂಗ್ರೆಸ್‌ನ ಉದ್ದೇಶವಾದಂತಿದೆ ಎಂದು ಹೇಳಿದ್ದಾರೆ.
ಇನ್ನೊಂದೆಡೆ ಲೋಕಸಭೆ ಮಾಜಿ ಸ್ಪೀಕರ್ ಸೋಮನಾಥ್ ಚಟರ್ಜಿ, ನಾಯ್ಡು ಕ್ರಮ ಗಡಿಬಿಡಿಯದ್ದು ಎಂದು ಟೀಕಿಸಿದ್ದಾರೆ. ನೋಟಿಸ್ ತಿರಸ್ಕರಿಸುವ ಕ್ರಮ ಕೆಟ್ಟ ಉದಾಹರಣೆಯಾಗಿ ದಾಖಲಾಗಿದೆ. ಇದು ಪ್ರಜಾಪ್ರಭುತ್ವಕ್ಕೆ ಒಳ್ಳೆಯದಲ್ಲ ಎಂದಿದ್ದಾರೆ. ತುರ್ತಾಗಿ ಕ್ರಮ ಕೈಗೊಳ್ಳುವುದರ ಬದಲಿಗೆ ಸಂವಿಧಾನದ ನಿಯಮಾವಳಿಗಳನ್ನು ಅವರು ಪಾಲಿಸಬೇಕಿತ್ತು ಎಂದಿದ್ದಾರೆ. ಆದರೆ ಕಾಂಗ್ರೆಸ್ ಮುಖಂಡ ಹಾಗೂ ಕಾನೂನು ಖಾತೆಯ ಮಾಜಿ ಸಚಿವ ಸಲ್ಮಾನ್ ಖುರ್ಷಿದ್, ಈ ನಿರ್ಧಾರದ ವಿರುದ್ಧ ಮೇಲ್ಮನವಿ ಸಲ್ಲಿಸಬಹುದಾಗಿದೆ ಎಂದಿದ್ದಾರೆ. ಮಹಾಭಿಯೋಗ ನೋಟಿಸ್ ನೀಡುವ ಯಾವುದೇ ಪ್ರಕ್ರಿಯೆಯಲ್ಲಿ ಖುರ್ಷಿದ್ ಭಾಗವಹಿಸಿರಲಿಲ್ಲ.
ಪಕ್ಷಪ್ರಿಯ ವಕೀಲರ ದ್ವಂದ್ವ ನಿಲುವು: ವಿವಿಧ ಪಕ್ಷದಲ್ಲಿ ಗುರುತಿಸಿಕೊಂಡಿರುವ ನ್ಯಾಯವಾದಿಗಳು ವಿಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಸಂಸದ ಹಾಗೂ ವಕೀಲ ಕೆ ಟಿ ಎಸ್ ತುಳಸಿ ನಾಯ್ಡು ಕ್ರಮವನ್ನು ವಿರೋಧಿಸಿದ್ದರೆ, ಬಿಜೆಪಿ ನಾಯಕ ಹಾಗೂ ವಕೀಲ ಅಮನ್ ಸಿನ್ಹಾ ಸ್ವಾಗತಿಸಿದ್ದಾರೆ. ಇನ್ನೊಂದೆಡೆ ಬಾರ್ ಕೌನ್ಸಿಲ್‌ನ ಚೇರ್ಮನ್ ಮನನ್ ಕುಮಾರ ಮಿಶ್ರಾ, ನಾಯ್ಡು ಕ್ರಮ ಸರಿಯಾದದ್ದು ಎಂದಿದ್ದಾರೆ.
ಕೋರ್ಟ್‌ಗೆ ಕಾಲಿಡಲ್ಲ ಎಂದ ಸಿಬಲ್: ನ್ಯಾ.ಮಿಶ್ರಾ ನಿವೃತ್ತಿಯಾಗುವವರೆಗೆ ನಾನು ಸುಪ್ರೀಂಕೋರ್ಟ್‌ನ ವಿಚಾರಣೆಗಳಿಗೆ ಹಾಜರಾಗುವುದಿಲ್ಲ ಎಂದು ಕಾಂಗ್ರೆಸ್ ಮುಖಂಡ, ಹಿರಿಯ ವಕೀಲ ಕಪಿಲ್ ಸಿಬಲ್ ಹೇಳಿದ್ದಾರೆ. ಮಹಾಭಿಯೋಗ ನೋಟಿಸ್ ನೀಡುವಿಕೆ ಪ್ರಕ್ರಿಯೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದ ಸಿಬಲ್, ನೋಟಿಸ್ ತಿರಸ್ಕಾರಗೊಳ್ಳುತ್ತಿದ್ದಂತೆ ಈ ಹೇಳಿಕೆ ನೀಡಿದ್ದಾರೆ. ಮಿಶ್ರಾ ಅಕ್ಟೋಬರ್‌ನಲ್ಲಿ ನಿವೃತ್ತರಾಗಲಿದ್ದಾರೆ. ಅಲ್ಲದೆ ಈ ಹಿಂದೆ ಯಾವ ಸಭಾಪತಿಯೂ ಆರಂಭಿಕ ಹಂತದಲ್ಲೇ ಮಹಾಭಿಯೋಗ ನೋಟಿಸ್ ತಿರಸ್ಕರಿಸಿರಲಿಲ್ಲ. ಇದು ಸರಿಯಾದ ಕ್ರಮವಲ್ಲ. ನೋಟಿಸ್ ತಿರಸ್ಕರಿಸಿರುವುದರಿಂದ ಅವರ ಮೇಲಿನ ಆರೋಪಗಳ ತನಿಖೆಗೆ ಅವಕಾಶ ನೀಡದಂತಾಗಿದೆ ಎಂದಿದ್ದಾರೆ.
ತಿರಸ್ಕಾರಕ್ಕೆ ಕಾರಣಗಳು
1. ನೋಟಿಸ್‌ನಲ್ಲಿನ ಅಂಶಗಳು ಸಂದೇಹ, ಊಹೆ, ಕಲ್ಪನೆಯ ಆಧಾರದಲ್ಲಿವೆ.
2. ನ್ಯಾಯಾಂಗ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ಈ ಪ್ರಕರಣವನ್ನು ನೀಡಿದ ದಾಖಲೆಗಳ ಆಧಾರದಲ್ಲಿ ಯಾವುದೇ ರೀತಿಯಲ್ಲೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ.
3. ಕೋರ್ಟ್ ವಿರುದ್ಧ ರಾಜಕೀಯ ಅವಿಶ್ವಾಸ, ಅಗೌರವ ತೋರಿಸಿ ಅವರ ಕೆಲಸಕ್ಕೂ ಅಡ್ಡಿ ಮಾಡಿ ನ್ಯಾಯಾಂಗದ ಬುನಾದಿಯನ್ನೇ ನಾಶ ಮಾಡುವ ಕ್ರಮ ಇದಾಗಿದೆ.
4. ಸಾಮಾನ್ಯ ಜನರಿಂದ ಕೋರ್ಟ್ ಮೇಲಿನ ವಿಶ್ವಾಸ ಕಳೆದು ಹೋದರೆ, ಪ್ರಜಾಪ್ರಭುತ್ವ ಮತ್ತು ನ್ಯಾಯಾಂಗ ವ್ಯವಸ್ಥೆಯೇ ಕುಸಿದು ಹೋಗುತ್ತದೆ.
5. ಈ ಪ್ರಕರಣದಲ್ಲಿ ಸಂಸದರು ತಮಗೆ ಸಂಬಂಧಿಸಿದ ಪ್ರಕರಣವನ್ನು ಪ್ರಸ್ತಾಪಿಸುತ್ತಿದ್ದಾರೋ ಎಂಬುದು ನಿಖರವಾಗಿಲ್ಲ. ಎಲ್ಲ ಮೇಲ್ನೋಟದ ಆಧಾರವನ್ನೇ ಬಳಕೆ ಮಾಡಲಾಗಿದೆ.
6. ಮೂರನೇ ವ್ಯಕ್ತಿಗಳ ನಡುವಿನ ಅನುಮಾನಾತ್ಮಕ ಸಂಗತಿಗಳ ಚರ್ಚೆಗಳನ್ನು ಇಲ್ಲಿ ತಂದಿರಿಸಲಾಗಿದ್ದು, ಇಲ್ಲಿನವರ್ಯಾರೂ ಸಿಜೆಐ ವಿರುದ್ಧ ಸಾಕ್ಷ್ಯಗಳ ಕಲೆಹಾಕಿಲ್ಲ.
7. ಸರಿಯಾದ ಆಧಾರ ಮತ್ತು ಪರಿಶೀಲನೆಗೊಳಪಟ್ಟ ಅಂಶಗಳನ್ನು ನನ್ನ ಮುಂದೆ ತಂದಿಡದೇ, ದುರುಪಯೋಗ ಮತ್ತು ಅಸಮರ್ಥ ಕಾರಣವನ್ನು ನೀಡಿ ಮಹಾಭಿಯೋಗ ಪ್ರಸ್ತಾವ ಸಲ್ಲಿಸಲಾಗಿದೆ. ಇಂಥವುಗಳನ್ನು ಒಪ್ಪಿಕೊಳ್ಳಲೂ ಸಾಧ್ಯವಿಲ್ಲ ಮತ್ತು ಒಪ್ಪಿಕೊಂಡರೆ ಅದು ಬೇಜವಾಬ್ದಾರಿ ಕ್ರಮವಾಗುತ್ತದೆ.
ಪ್ರಾಯೋಜಿತ ದಾವೆಯ ಮೂಲಕ ದೇಶವನ್ನು ಮುನ್ನಡೆಸಲು ಕಾಂಗ್ರೆಸ್ ಬಯಸಿದೆ. ಜಡ್ಜ್ ಬಿ.ಎಚ್. ಲೋಯಾ ಅವರ ಸಾವನ್ನು ಬಳಸಿಕೊಂಡು ಕಾಂಗ್ರೆಸ್ ರಾಜಕೀಯ ದಾಳ ಉರುಳಿಸುತ್ತಿದೆ. ಇದೇ ಕಾರಣಕ್ಕೆ ಜನರು ಕಾಂಗ್ರೆಸ್ ಅನ್ನು ಪದೇ ಪದೆ ಸೋಲಿಸಿದ್ದಾರೆ.
– ರವಿಶಂಕರ್ ಪ್ರಸಾದ್, ಕೇಂದ್ರ ಕಾನೂನು ಸಚಿವ
ಸಿಬಲ್ ವೀಡಿಯೋ ವೈರಲ್
ಮಹಾಭಿಯೋಗದ ವಿರುದ್ಧ ಮಾತನಾಡಿದ ಸಿಬಲ್ ಹಳೆಯ ವಿಡಿಯೋವೊಂದು ಇದೀಗ ವೈರಲ್ ಆಗಿದೆ. ಕಾಂಗ್ರೆಸ್‌ನ ಬಂಡಾಯ ಮುಖಂಡ ಶೆಹಜಾದ್ ಪೂನಾ ವಾಲಾ ಈ ವೀಡಿಯೋ ಟ್ವೀಟ್ ಮಾಡಿದ್ದಾರೆ. 50 ಸದಸ್ಯರ ಸಹಿ ಮಾಡಿದ ಮಾತ್ರಕ್ಕೆ ಯಾವುದೇ ಜಡ್ಜ್ ಮಹಾಭಿಯೋಗ ನೋಟಿಸ್ ನೀಡುವುದು ಸರಿಯಲ್ಲ ಎಂದೂ ಅವರು ಹೇಳಿದ್ದರು.