Advertisement

ನಿಯಮ ಉಲ್ಲಂಘನೆಯಿಂದ ವಾಹನ ದಟ್ಟಣೆ

12:51 PM Oct 07, 2018 | Team Udayavani |

ಬೆಂಗಳೂರು: ಸಂಚಾರ ನಿಯಮ ಪಾಲಿಸದಿರುವುದು, ಮೂಲ ಸೌಕರ್ಯಗಳ ಸಮರ್ಪಕ ಬಳಕೆ ಮಾಡಿಕೊಳ್ಳದಿರುವುದು ಸೇರಿದಂತೆ ಹಲವು ಅಂಶಗಳು ನಗರದಲ್ಲಿ ಸಂಚಾರ ದಟ್ಟಣೆ ಸಮಸ್ಯೆಗೆ ಕಾರಣ ಎಂದು ಇನ್‌ಫೋಸಿಸ್‌ ಪ್ರತಿಷ್ಠಾನದ ಅಧ್ಯಕ್ಷೆ ಡಾ.ಸುಧಾಮೂರ್ತಿ ತಿಳಿಸಿದ್ದಾರೆ.

Advertisement

ಬೆಂಗಳೂರು ಪ್ರಸ್‌ಕ್ಲಬ್‌ ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡಿದ ಅವರು, ಇಂಗ್ಲೆಂಡ್‌ನ‌ಲ್ಲೂ ಇಲ್ಲಿಗಿಂತ ಹೆಚ್ಚು ವಾಹನಗಳಿವೆ. ಆದರೆ, ಅಲ್ಲಿ ನಿಯಮಗಳ ಪಾಲನೆ ಆಗುತ್ತದೆ. ಇಲ್ಲಿ ಅದು ಆಗುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಬೆಂಗಳೂರಿನ ಮಟ್ಟಿಗೆ ಹೇಳುವುದಾದರೆ, ಅತ್ಯಲ್ಪ ಸಮಯದಲ್ಲಿ ಅಸಾಧ್ಯವಾದ ಜನದಟ್ಟಣೆ ನಗರಕ್ಕೆ ಬಂದಿರುವುದು ಸಮಸ್ಯೆಗೆ ಮತ್ತೂಂದು ಕಾರಣ. ಇಷ್ಟು ದೊಡ್ಡ ಜನಸಂಖ್ಯೆ ಇದ್ದಿದ್ದರೆ ಜಗತ್ತಿನ ಇತರ ಪ್ರಮುಖ ನಗರಗಳೂ ಇದಕ್ಕಿಂತಲೂ ಹೆಚ್ಚು ಹಾಳಾಗುತ್ತಿದ್ದವು ಎಂದರು.

ಪಿಪಿಪಿಗೆ ಒತ್ತುಕೊಡಿ: ಸರ್ಕಾರಕ್ಕೆ ಸಲಹೆ ಕೊಡುವಷ್ಟು ದೊಡ್ಡವಳು ನಾನಲ್ಲ. ಆದರೆ, ಸಾಧ್ಯವಾದಷ್ಟು ಖಾಸಗಿ ಸಾರ್ವಜನಿಕ ಸಹಭಾಗಿತ್ವದಲ್ಲಿ ತನ್ನ ಯೋಜನೆಗಳನ್ನು ಅನುಷ್ಠಾನಗೊಳಿಸಲು ಸರ್ಕಾರ ಪ್ರಯತ್ನಿಸಬೇಕು. ಇದರಿಂದ ಸರ್ಕಾರದ ಮೇಲೆ ಹೊರೆ ಕಡಿಮೆ ಆಗುವುದರ ಜತೆಗೆ ತ್ವರಿತ ಗತಿಯ ಅನುಷ್ಠಾನ ಆಗಲಿದೆ.

ಉದಾಹರಣೆಗೆ ಇತ್ತೀಚೆಗೆ ಇನ್ಫೋಸಿಸ್‌ ಸಂಸ್ಥೆಯು “ನಮ್ಮ ಮೆಟ್ರೋ’ ಯೋಜನೆಯ ಒಂದು ನಿಲ್ದಾಣ ನಿರ್ಮಿಸಲು ಒಪ್ಪಂದ ಮಾಡಿಕೊಂಡಿದೆ. ಇಂತಹ ಒಪ್ಪಂದಗಳು ಆಗಬೇಕು. ತದನಂತರ ಅವುಗಳ ನಿರ್ವಹಣೆಯನ್ನೂ ಸರ್ಕಾರ ಸಮರ್ಪಕವಾಗಿ ಮಾಡಬೇಕು ಎಂದು ಹೇಳಿದರು.

Advertisement

ಭೇದ ಮಾಡುವುದು ಸರಿಯಲ್ಲ: ಐಟಿ ಕಂಪನಿಯಲ್ಲಿ ಕನ್ನಡಿಗರ ಕೊರತೆ ಇದೆ ಎಂಬ ಪ್ರಶ್ನೆಗೆ, “ಐಟಿ ಕ್ಷೇತ್ರ ಜಾಗತಿಕಮಟ್ಟದಲ್ಲಿ ವ್ಯವಹಾರ ಮಾಡುವಂತಹದ್ದು. ಅದರಲ್ಲೂ ಅವು ಮುಖ್ಯವಾಗಿ ಖಾಸಗಿ ಕಂಪನಿಗಳಾಗಿವೆ.

ಹಾಗಾಗಿ, ಉಳಿದೆಲ್ಲ ಕ್ಷೇತ್ರಗಳಿಗಿಂತ ಇಲ್ಲಿ ಹೆಚ್ಚು ಜ್ಞಾನದ ಅವಶ್ಯಕತೆ ಇರುತ್ತದೆ. ಕಠಿಣ ಪರಿಶ್ರಮ, ಜ್ಞಾನ ಹೊಂದಿದವರು ಯಾರು ಬೇಕಾದರೂ ಕೆಲಸ ಗಿಟ್ಟಿಸಿಕೊಳ್ಳಬಹುದು. ಆದರೆ, ಮನುಷ್ಯನ ಸ್ವಭಾವ; ಎಲ್ಲವನ್ನೂ ನಾವು ಗಡಿ, ಭಾಷೆ, ಜಾತಿ, ವರ್ಣಗಳಿಂದ ಭೇದ ಮಾಡುತ್ತೇವೆ. ಇದು ಸರಿ ಅಲ್ಲ ಎಂದರು.

ದುಡ್ಡಿನ ಹಿಂದೆ ಬೀಳಬೇಡಿ: ನಾನು ಯಾವುದೇ ರೋಲ್‌ ಮಾಡೆಲ್‌ ಅಲ್ಲ. ನನಗೆ ಅನಿಸಿದ್ದು ಮಾಡಿದ್ದೇನೆ ಅಷ್ಟೇ. ಸನ್ಮಾನ ಇದ್ದವರಿಗೆ ಅಪಮಾನವೂ ಇರುತ್ತದೆ. ಹಾಗಾಗಿ, ಇವೆರಡಕ್ಕೂ ಮಹತ್ವ ಕೊಡಬಾರದು ಎಂದ ಸುಧಾ ಮೂರ್ತಿ, ದುಡ್ಡಿನ ಹಿಂದೆ ಓಡಿದರೆ ದುಡ್ಡು ನಿಮ್ಮಿಂದ ದೂರ ಹೋಗುತ್ತದೆ.

ನೀವು ಕೆಲಸದ ಹಿಂದೆ ಬಿದ್ದರೆ, ದುಡ್ಡು ನಿಮ್ಮ ಹಿಂದೆ ಓಡಿ ಬರುತ್ತದೆ. ಎಲ್ಲದಕ್ಕೂ ಆತ್ಮತೃಪ್ತಿ ಇರಬೇಕೇ ಹೊರತು, ಆತ್ಮರತಿ ಬೇಡ ಎಂದು ಯುವಕರಿಗೆ ಸಲಹೆ ಮಾಡಿದರು. “ಅನುಭವದ ಸರಮಾಲೆಗಳೇ ನನ್ನ ಪುಸ್ತಕಗಳು. ಯಾವುದೇ ಉದ್ದೇಶ ಇಟ್ಟುಕೊಂಡು ನಾನು ಪುಸ್ತಕ ಬರೆದಿಲ್ಲ,

ಇನ್ನು ಯಾವುದೇ ಸಭೆ-ಸಮಾರಂಭಗಳಿಗೆ ನಾನು ಹೋಗುವುದು ಕಡಿಮೆ. ಜನ್ಮದಿನಾಚರಣೆ, ಮದುವೆಯಂತಹ ಸಂಭ್ರಮಗಳಿಗಂತೂ ಹೋಗುವುದೇ ಇಲ್ಲ. ಆ ಸಮಯವನ್ನು ನಾನು ಪುಸ್ತಕ ಬರೆಯಲು ಬಳಸಿಕೊಳ್ಳುತ್ತೇನೆ. ಹೆಚ್ಚು ಪ್ರಯಾಣ ಮಾಡುವುದರಿಂದ ಆ ಸಮಯದಲ್ಲೂ ನಾನು ಓದುವುದು-ಬರೆಯುವುದರಲ್ಲಿ ತೊಡಗುತ್ತೇನೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. 

ಅವರು ಬೆಂಗಳೂರಿನ ಕೀರ್ತಿ ಬೆಳಗಿಸಿದರು: “ನಾರಾಯಣ ಮೂರ್ತಿ ಬೆಂಗಳೂರು ಹಾಳುಮಾಡಿದರು ಎಂದು ಕೆಲವರು ಹೇಳುತ್ತಾರೆ. ಆದರೆ, ವಾಸ್ತವವಾಗಿ ಅವರು ಜಾಗತಿಕ ಮಟ್ಟದಲ್ಲಿ ಬೆಂಗಳೂರು ಬೆಳಗುವಂತೆ ಮಾಡಿದರು. ಸಾಫ್ಟ್ವೇರ್‌ ಕಂಪನಿಯನ್ನು ಪುಣೆ ಅಥವಾ ಹೈದರಾಬಾದ್‌ನಲ್ಲಿ ತೆರೆಯಬಹುದಿತ್ತು.

ಆದರೆ, ನಾರಾಯಣಮೂರ್ತಿ ಬೆಂಗಳೂರು ಆಯ್ಕೆ ಮಾಡಿಕೊಂಡರು. ಇದರಿಂದ ಇಲ್ಲಿ ಸಾಕಷ್ಟು ಉದ್ಯೋಗಗಳು ಸೃಷ್ಟಿಯಾದವು. ದೇಶದ ನಾನಾ ಭಾಗಗಳಿಂದ ಯುವಕರು ಉದ್ಯೋಗ ಅರಸಿ ಬಂದರು. ಇದರಿಂದ ಜಾಗತಿಕ ಮಟ್ಟದಲ್ಲಿ ನಗರ ಖ್ಯಾತಿ ಪಡೆಯಿತು’ ಎಂದು ಪತಿ ನಾರಾಯಣ ಮೂರ್ತಿ ಅವರನ್ನು ಸುಧಾ ಮೂರ್ತಿ ಅವರು ಸಮರ್ಥಿಸಿಕೊಂಡರು.

ಯೋಗ, ಈಜು ಕಲಿಯಲಿಲ್ಲ ಎಂಬ ಕೊರಗು: ಯೋಗ ಹಾಗೂ ಈಜು ಕಲಿಯಬೇಕು ಎನ್ನುವುದು ನನ್ನ ಆಸೆಯಾಗಿತ್ತು. ಇವೆರಡೂ ಸಾಧ್ಯವಾಗಲಿಲ್ಲ ಎಂಬ ಕೊರಗು ನನಗೆ ಈಗಲೂ ಕಾಡುತ್ತಿದೆ ಎಂದು ಸುಧಾಮೂರ್ತಿ ಹೇಳಿದರು. ಚಿಕ್ಕಂದಿನಲ್ಲಿ ಯೋಗ ಹೇಳಿಕೊಡುವ ವ್ಯವಸ್ಥೆ ಇರಲಿಲ್ಲ.

ಇನ್ನು ನಮ್ಮಲ್ಲಿ ಕುಡಿಯುವ ನೀರಿಗೇ ಕೊರತೆ ಇತ್ತು. ಈಜುವುದು ಅದರಲ್ಲೂ ಮಹಿಳೆಯರು ಈಜು ಕಲಿಯುವುದು ದೂರದ ಮಾತು. ಹಾಗಾಗಿ ಇವೆರಡೂ ಸಾಧ್ಯವಾಗಲಿಲ್ಲ. ಈಗ ಟೀಚರ್‌ ಮೂಲಕ ಯೋಗ ಕಲಿಯುತ್ತಿದ್ದೇನೆ. ಆದರೆ, ಟೀಚರ್‌ ಬಾರದೆ ಇರುವ ದಿನ ನಾನು ಹೆಚ್ಚು ಖುಷಿಯಿಂದ ಇರುತ್ತೇನೆ ಎಂದು ಡಾ.ಸುಧಾ ಮೂರ್ತಿ ಅವರು ಚಟಾಕಿ ಹಾರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next