Advertisement

ಮೊದಲ ದಿನವೇ ಟೋಲ್‌ಗ‌ಳಲ್ಲಿ ವಾಹನ ದಟ್ಟಣೆ

11:22 PM Dec 15, 2019 | Lakshmi GovindaRaj |

ಬೆಳಗಾವಿ/ಮಂಗಳೂರು/ದಾವಣಗೆರೆ/ದೇವನಹಳ್ಳಿ: ಕೇಂದ್ರ ಸರ್ಕಾರದ ನಿರ್ದೇಶನದಂತೆ ಭಾನುವಾರದಿಂದ ಬೆಳಗಾವಿ ಜಿಲ್ಲೆಯ ಹಿರೇಬಾಗೇವಾಡಿ ಟೋಲ್‌ನಲ್ಲಿ 10 ಲೇನ್‌ಗಳ ಪೈಕಿ ನಾಲ್ಕು ಲೇನ್‌, ಹತ್ತರಗಿ ಟೋಲ್‌ನಲ್ಲಿಯ 12 ಲೇನ್‌ಗಳ ಪೈಕಿ ಆರು ಲೇನ್‌ ಹಾಗೂ ಕೊಗನೊಳ್ಳಿ ಟೋಲ್‌ ನಾಕಾದಲ್ಲಿ 12 ಲೇನ್‌ಗಳ ಪೈಕಿ ಆರು ಲೇನ್‌ಗಳನ್ನು ಫಾಸ್ಟ್‌ಟ್ಯಾಗ್‌ಗೆ ನಿಗದಿ ಪಡಿಸಲಾಗಿದೆ.

Advertisement

ದ.ಕ. ಮತ್ತು ಉಡುಪಿ ಜಿಲ್ಲೆಗಳ ಐದು ಟೋಲ್‌ಗ‌ಳಲ್ಲಿ ಪ್ರಥಮ ದಿನ ನಗದು ಪಾವತಿ ಲೇನ್‌ನಲ್ಲಿ ಒಂದಷ್ಟು ವಾಹನದಟ್ಟಣೆ ಉಂಟಾಗಿ ಸಮಸ್ಯೆಯಾಯಿತು. ಸಾಸ್ತಾನ ಟೋಲ್‌ನಲ್ಲಿ ನಗದು ಪಾವತಿ ಲೇನ್‌ನಲ್ಲಿ ವಾಹನದಟ್ಟಣೆ ಅಧಿಕವಾಗಿತ್ತು. ಇಲ್ಲಿ ನಗದು ಪಾವತಿಗೆ 4, ಸ್ಥಳೀಯರಿಗೆ 2 ಫಾಸ್ಟ್‌ಟ್ಯಾಗ್‌ಗೆ 4 ಲೇನ್‌ಗಳಿದ್ದವು. ವಾಹನದಟ್ಟಣೆಯನ್ನು ನಿಯಂತ್ರಿಸುವ ಸಲುವಾಗಿ ಹೆಚ್ಚುವರಿಯಾಗಿ 15 ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

ಸೂಚನೆ ನೀಡಿದರೂ ಫಾಸ್ಟ್‌ಟ್ಯಾಗ್‌ ಲೇನ್‌ನಲ್ಲಿ ಸಂಚರಿಸಿದ, ಫಾಸ್ಟ್‌ಟ್ಯಾಗ್‌ ಅಳವಡಿಸದ ವಾಹನಗಳಿಗೆ ದುಪ್ಪಟ್ಟು ಟೋಲ್‌ ವಿಧಿಸಲಾಯಿತು. ಈ ಸಂದರ್ಭ ಟೋಲ್‌ನ ಸಿಬ್ಬಂದಿ ಜತೆ ಜಟಾಪಟಿ ನಡೆಸಿದ ಘಟನೆಯೂ ನಡೆದಿದೆ. ಸುಮಾರು ಶೇ. 25ರಿಂದ 30ರಷ್ಟು ವಾಹನಗಳು ಭಾನುವಾರ ಫಾಸ್ಟ್‌ಟ್ಯಾಗ್‌ನಲ್ಲಿ ಸಂಚರಿಸಿವೆ. ದಾವಣಗೆರೆಯಲ್ಲಿ ಫಾಸ್ಟ್‌ಟ್ಯಾಗ್‌ಗೆ ಪ್ರಾರಂಭಿಕ ಹಂತದಲ್ಲೇ ಹಲವಾರು ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡವು.

ಫಾಸ್ಟ್‌ಟ್ಯಾಗ್‌ ಆ್ಯಕ್ಟಿವೇಷನ್‌ ಆಗಲಿಕ್ಕೆ 1-2 ದಿನಗಳ ಕಾಲಾವಕಾಶ ಬೇಕು. ಆದರೆ, ಅನೇಕರಿಗೆ ಆ ಬಗ್ಗೆ ಮಾಹಿತಿಯೇ ಇಲ್ಲ. ಫಾಸ್ಟ್‌ಟ್ಯಾಗ್‌ ಸ್ಟಿಕ್ಕರ್‌ಗಳನ್ನು ತಮ್ಮ ವಾಹನದಲ್ಲಿ ಅಂಟಿಸಿಕೊಂಡರೆ ಮಗಿಯಿತು ಎಂದೇ ಅನೇಕರು ತಿಳಿದುಕೊಂಡಿದ್ದಾರೆ. ಫಾಸ್ಟ್‌ಟ್ಯಾಗ್‌ ಸ್ಟಿಕ್ಕರ್‌ ಅಳವಡಿಸಿಕೊಂಡಿದ್ದರೂ ಟೋಲ್‌ಗ‌ಳಲ್ಲಿ ರೀಡಿಂಗ್‌ ತೋರಿಸದೇ ಇರುವ ಕಾರಣಕ್ಕೆ ಟೋಲ್‌ಗ‌ಳಲ್ಲಿ ಮುಂದೆ ಹೋಗುವುದಕ್ಕೆ ಅವಕಾಶ ನೀಡಲಾಗುತ್ತಿಲ್ಲ. ಹಾಗಾಗಿ ಕೆಲವು ಕಡೆ ಮಾತಿನ ಚಕಮಕಿ-ವಾಗ್ವಾದ ಸಹ ನಡೆದಿವೆ.

ಫಾಸ್ಟ್‌ಟ್ಯಾಗ್‌ ಆ್ಯಕ್ಟಿವೇಷನ್‌ ಆಗಲಿಕ್ಕೆ 1-2 ದಿನಗಳ ಕಾಲಾವಕಾಶ ಬೇಕು ಎಂಬ ಸಾಮಾನ್ಯ ಮಾಹಿತಿ ನೀಡದೇ ಇರುವುದು ಗೊಂದಲಕ್ಕೆ ಕಾರಣವಾಗುತ್ತಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ರಾಷ್ಟ್ರೀಯ ಹೆದ್ದಾರಿ-7ರ ಸಾದಹಳ್ಳಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿನ ಟೋಲ್‌ ಸಂಗ್ರಹ ಕೇಂದ್ರದ ಬಳಿ ಗಂಟೆಗಟ್ಟಲೇ ಸಂಚಾರ ದಟ್ಟಣೆ ಉಂಟಾಗಿತ್ತು. ಇದರಿಂದ ಸಾವಿರಾರು ವಾಹನ ಸವಾರರು ಪರದಾಟ ನಡೆಸಬೇಕಾಯಿತು.

Advertisement

ಫಾಸ್ಟ್‌ಟ್ಯಾಗ್‌ ಸಾಲಿನಲ್ಲಿ ಹೆಚ್ಚು ವಾಹನಗಳು ಕಂಡು ಬರಲಿಲ್ಲ. ಆದರೆ, ಹಣ ಪಾವತಿಸುವ ಸಾಲುಗಳಲ್ಲಿ ನೂರಾರು ವಾಹನಗಳು ಸಾಲುಗಟ್ಟಿ ನಿಂತಿದ್ದವು. ಇದರಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುವ ಪ್ರಯಾಣಿಕರು, ನಿಗದಿತ ವೇಳೆಗೆ ವಿಮಾನ ನಿಲ್ದಾಣ ತಲುಪಲಾಗದೇ, ಸಂಕಷ್ಟ ಅನುಭವಿಸಿದರು. ಈ ಮಧ್ಯೆ, ಸೋಮವಾರದಿಂದ ಸಮಸ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next