Advertisement

ಭಾರೀ ಪ್ರಮಾಣದ ದಂಡ ವಸೂಲಿಗೆ ಸಾರ್ವಜನಿಕರ ಅಸಮಾಧಾನ 

05:02 AM Mar 11, 2019 | |

ಮಹಾನಗರ: ಬೆಂಗಳೂರಿನಂತೆ ಮಂಗಳೂರಿನಲ್ಲಿಯೂ ನೋ ಪಾರ್ಕಿಂಗ್‌ ಸ್ಥಳದಲ್ಲಿ ನಿಲ್ಲಿಸುವ ವಾಹನಗಳನ್ನು ಟೋಯಿಂಗ್‌ ಮೂಲಕ ತೆರವುಗೊಳಿಸಿ ವಾಹನ ಮಾಲಕರಿಗೆ ಭಾರೀ ಪ್ರಮಾಣದಲ್ಲಿ ದಂಡ ವಿಧಿಸುವ ವ್ಯವಸ್ಥೆ ಜಾರಿಗೆ ಬಂದಿದೆ. ಆದರೆ ಸಾರ್ವಜನಿಕ ವಲಯದಲ್ಲಿ ಇದಕ್ಕೆ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿವೆ.

Advertisement

ನಗರದಲ್ಲಿ ಪ್ರಸ್ತುತ ವಾಹನ ನಿಲುಗಡೆಗೆ ಪ್ರತ್ಯೇಕ ವಲಯ ಅಥವಾ ಸೂಕ್ತ ಜಾಗವನ್ನು ಪಾಲಿಕೆಯಾಗಲಿ ಅಥವಾ ಸಂಚಾರ ಪೊಲೀಸರು ನಿಗದಿಪಡಿಸಿಲ್ಲ. ಹೀಗಿರುವಾಗ, ವಾಹನ ನಿಲುಗಡೆಗೆ ಸೂಕ್ತ ಸ್ಥಳಾವಕಾಶ ಒದಗಿಸದೆ ಏಕಾಏಕಿ ನೋ ಪಾರ್ಕಿಂಗ್‌ ಹೆಸರಿನಲ್ಲಿ ಸಾವಿರಕ್ಕೂ ಅಧಿಕ ಮೊತ್ತದಲ್ಲಿ ದಂಡ ವಸೂಲಿ ಮಾಡಲು ಹೊರಟಿರುವುದು ಸರಿಯಲ್ಲ ಎನ್ನುವುದು ಕೆಲವರ ವಾದವಾಗಿದೆ.

ದ್ವಿಚಕ್ರ ವಾಹನಗಳಿಗೆ 750 ರೂ. ಹಾಗೂ ಕಾರುಗಳಿಗೆ 1,100 ರೂ. ನಿಗದಿ ಪಡಿಸಿರುವ ದಂಡ ಶುಲ್ಕ ಬಹಳಷ್ಟು ಜಾಸ್ತಿಯಾಯಿತು ಎಂದು ಕೆಲವು ಮಂದಿ ವಾಹನ ಮಾಲಕರು ಹೇಳುತ್ತಿದ್ದು, ಶುಲ್ಕ ಕಡಿಮೆ ಮಾಡಬೇಕು ಎಂಬ ಒತ್ತಾಯ ಕೇಳಿ ಬರುತ್ತಿದೆ. ಬೆಂಗಳೂರಿನಲ್ಲಿಯೂ ಇದೇ ಪ್ರಮಾಣದ ದಂಡ ಶುಲ್ಕ ಇದೆ. ಇದು ರಾಜ್ಯ ಸರಕಾರ ನಿಗದಿ ಪಡಿಸಿದ ದರ. ನಾವು ಇದನ್ನು ಬದಲಾವಣೆ ಮಾಡಲು ಸಾಧ್ಯವಾಗದು ಎಂಬ ಅಸಹಾಯಕತೆಯನ್ನು ಪೊಲೀಸರು ವ್ಯಕ್ತಪಡಿಸುತ್ತಾರೆ.

ನಗರದಲ್ಲಿ ವಾಹನಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಪಾರ್ಕಿಂಗ್‌ ಸಮಸ್ಯೆ ಕೂಡ ಅಷ್ಟೇ ಇದೆ. ಅಧಿಕೃತ ಪಾರ್ಕಿಂಗ್‌ ತಾಣಗಳು ಕಡಿಮೆ ಇದ್ದು, ಕೆ.ಎಸ್‌. ರಾವ್‌ ರಸ್ತೆಯೊಂದನ್ನು ಬಿಟ್ಟು ಉಳಿದಂತೆ ಬಹುತೇಕ ಕಡೆ ಪ್ರಮುಖ ರಸ್ತೆಗಳ ಬದಿ ವಾಹನಗಳನ್ನು ನಿಲ್ಲಿಸಲಾಗುತ್ತಿದೆ.

ಕಾಂಕ್ರೀಟ್‌ ಕಾಮಗಾರಿಯ ಸಂದರ್ಭದಲ್ಲಿ ವಿಸ್ತರಣೆಗೊಂಡ ರಸ್ತೆಗಳ ಭಾಗಗಳೆಲ್ಲವೂ ವಾಹನ ಪಾರ್ಕಿಂಗ್‌ಗೆ ಒದಗಿಸಲಾಗಿದೆ. ಬಹುತೇಕ ಬಹು ಮಹಡಿ ಕಟ್ಟಡಗಳ ತಳ ಅಂತಸ್ತುಗಳಲ್ಲಿ ವಾಹನ ಪಾರ್ಕಿಂಗ್‌ಗೆ ಮೀಸಲಿರಿಸಿದ ಜಾಗದಲ್ಲಿ ಅಂಗಡಿಗಳನ್ನು ತೆರೆದು ವ್ಯಾಪಾರ ನಡೆಯುತ್ತಿದೆ. ಇದರಿಂದ ರಸ್ತೆ ಬದಿ ವಾಹನ ನಿಲ್ಲಿಸುವುದು ಅನಿವಾರ್ಯ. 

Advertisement

ಇದರ ವಿರುದ್ಧ ಹಲವು ಬಾರಿ ಕಾರ್ಯಾಚರಣೆ ನಡೆದಿದೆ. ಅಲ್ಲದೆ ಈ ರೀತಿ ಪಾರ್ಕಿಂಗ್‌ ಜಾಗವನ್ನು ವ್ಯಾಪಾರಕ್ಕೆ ಒದಗಿಸಿರುವ ಕಟ್ಟಡಗಳನ್ನು ಗುರುತಿಸಿ ಪೊಲೀಸರು ಪಟ್ಟಿ ತಯಾರಿಸಿ ಪಾಲಿಕೆಗೆ ಸಲ್ಲಿಸಿ ಹಲವು ತಿಂಗಳುಗಳೇ ಕಳೆದಿವೆ. ಆದರೆ ಇದುವರೆಗೆ ಪ್ರಯೋಜನ ಆಗಿಲ್ಲ.

ಇಂತಹ ಪರಿಸ್ಥಿತಿ ಇರುವಾಗಲೇ ನಗರದಲ್ಲಿ ಪೊಲೀಸರು ಟೋಯಿಂಗ್‌ ವ್ಯವಸ್ಥೆಯನ್ನು ಜಾರಿಗೊಳಿಸಿದ್ದಾರೆ. 

ಸರಕಾರ ನಿಗದಿ ಪಡಿಸಿದ ಶುಲ್ಕ
ಹೊರ ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ, ಟೋಯಿಂಗ್‌ ವಾಹನಕ್ಕೆ ನಾಲ್ಕು ಸಿಬಂದಿ ಇದ್ದಾರೆ. ಒಂದು ದ್ವಿಚಕ್ರ ವಾಹನ ಎತ್ತಿದರೆ ವಸೂಲು ಮಾಡುವ 750 ರೂ. ದಂಡ ಶುಲ್ಕದಲ್ಲಿ 325 ರೂ. ಮಾತ್ರ ಗುತ್ತಿಗೆದಾರರಿಗೆ ಲಭಿಸುತ್ತದೆ. ಉಳಿದ 425 ರೂ. ಸರಕಾರಕ್ಕೆ ಹೋಗುತ್ತದೆ. ನಗರದಲ್ಲಿ. ಅಧಿಕೃತ ಪಾರ್ಕಿಂಗ್‌ ಸ್ಥಳಗಳನ್ನು ಬಣ್ಣ ಹಾಕಿ ಗುರುತಿಸಿ ವಾಹನ ಚಾಲಕ/ಮಾಲಕರಿಗೆ ಅನುಕೂಲ ಮಾಡಿಕೊಡ ಲಾಗುವುದು. ಪಾರ್ಕಿಂಗ್‌ಗೆ ಕಾದಿರಿಸಿದ ಜಾಗದಲ್ಲಿ ವ್ಯಾಪಾ ರಕ್ಕೆ ಅವಕಾಶ ಕಲ್ಪಿಸಿರುವ ತಾಣಗಳನ್ನು ಗುರುತಿಸಿ ಅದರ ಪಟ್ಟಿಯನ್ನು ಪಾಲಿಕೆಗೆ ನೀಡಲಾಗಿದೆ.
 - ಮಂಜುನಾಥ ಶೆಟ್ಟಿ,
ಎಸಿಪಿ, ಟ್ರಾಫಿಕ್‌

ಶುಲ್ಕ ಮರು ನಿಗದಿ ಪಡಿಸಿ
ನಗರದಲ್ಲಿ ವಾಹನ ಪಾರ್ಕಿಂಗ್‌ಗೆ ಸಮಸ್ಯೆ ಇರುವುದು ನಿಜ. ಆದರೆ ಮಂಗಳೂರನ್ನು ಬೆಂಗಳೂರಿಗೆ ಹೋಲಿಸುವುದು ಸರಿಯಲ್ಲ. ನಿಗದಿ ಪಡಿಸಿರುವ ಟೋಯಿಂಗ್‌ ಶುಲ್ಕ ಜಾಸ್ತಿ ಆಯಿತು ಎಂದು ಸಾರ್ವಜನಿಕರು ಹೇಳುತ್ತಿರುವುದು ಗಮನಕ್ಕೆ ಬಂದಿದೆ. ಇದನ್ನು ತತ್‌ಕ್ಷಣ ಜಾರಿಗೊಳಿಸುವುದು ಸರಿಯಲ್ಲ; ಹೊಸ ವ್ಯವಸ್ಥೆ ಜಾರಿಗೊಳಿಸುವಾಗ ಜನರಿಗೆ ಮುಂಚಿತವಾಗಿ ಮಾಹಿತಿ ನೀಡಬೇಕು. ಅವರಿಗೆ
ಹೊರೆಯಾಗದ ರೀತಿಯಲ್ಲಿ ಶುಲ್ಕವನ್ನು ಮರು ನಿಗದಿ ಪಡಿಸಬೇಕು. ಈ ಬಗ್ಗೆ ಪೊಲೀಸ್‌ ಕಮಿಷನರ್‌, ಜಿಲ್ಲಾಧಿಕಾರಿ, ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಮಾಡಲಾಗುವುದು.
 - ವೇದವ್ಯಾಸ ಕಾಮತ್‌, ಶಾಸಕ 

 ಟೋಯಿಂಗ್‌ ಶುಲ್ಕ
ಇದು ಪೊಲೀಸರು ನಿಗದಿ ಪಡಿಸಿದ ಟೋಯಿಂಗ್‌ ಶುಲ್ಕ ಅಲ್ಲ; ಸರಕಾರವೇ ಅಧಿಸೂಚನೆ ಹೊರಡಿಸಿರುವುದು. ನಗರದಲ್ಲಿ ವಾಹನ ಪಾರ್ಕಿಂಗ್‌ಗೆ ಸಾಕಷ್ಟು ಜಾಗ ಇಲ್ಲದಿರುವುದು ನಮ್ಮ ಗಮನಕ್ಕೆ ಬಂದಿದೆ. ಆದರೆ ರಸ್ತೆಯಲ್ಲಿ ವಾಹನ ನಿಲುಗಡೆ ಮಾಡಿ ಇತರ ವಾಹನಗಳ ಸಂಚಾರಕ್ಕೆ ಅಡ್ಡಿ ಉಂಟು ಮಾಡುವುದು ಸರಿಯಲ್ಲ. ನಗರದಲ್ಲಿ ನಿಜವಾಗಿಯೂ ಸಂಚಾರಕ್ಕೆ ಅಡಚಣೆ ಉಂಟಾಗುವ ರೀತಿಯಲ್ಲಿ ರಸ್ತೆಯಲ್ಲಿ ನಿಲ್ಲಿಸಿದ ವಾಹನಗಳನ್ನು ಮಾತ್ರ ಟೋಯಿಂಗ್‌ ಮೂಲಕ ಎತ್ತಂಗಡಿ ಮಾಡಲಾಗುತ್ತಿದೆ.
– ಸಂದೀಪ್‌ ಪಾಟೀಲ್‌,
ಮಂಗಳೂರು ಪೊಲೀಸ್‌ ಕಮಿಷನರ್‌

 ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಲಿ
ಸಂಚಾರ ನಿಯಮ ಪಾಲಿಸುವುದು ನಮ್ಮ ಕರ್ತವ್ಯ. ಆದರೆ ಟೋಯಿಂಗ್‌ ನಂತಹ ವ್ಯವಸ್ಥೆ ತಂದು ದುಬಾರಿ ಶುಲ್ಕ ವಿಧಿಸಿ ಅದನ್ನು ಜಾರಿಗೊಳಿಸುವ ಮೊದಲು ಸುಸಜ್ಜಿತ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಲಿ. ಪ್ರಮುಖ ಕಾಂಪ್ಲೆಕ್ಸ್‌ಗಳಲ್ಲಿ ಸರಿಯಾದ ಪಾರ್ಕಿಂಗ್‌ ವ್ಯವಸ್ಥೆ ಇಲ್ಲ. ಹಾಗಾಗಿ ರಸ್ತೆ ಬದಿ ವಾಹನ ನಿಲ್ಲಿಸುವುದು ಅನಿವಾರ್ಯ.
– ಸುಧೀರ್‌ ಎಲ್‌.
ಕೊಂಚಾಡಿ, (ಚತುಶ್ಚಕ್ರ ವಾಹನ ಮಾಲಕರು)

ಮಧ್ಯಮ ವರ್ಗಕ್ಕೆ  ಹೊರೆ
ಟೋಯಿಂಗ್‌ ಶುಲ್ಕ ದುಬಾರಿಯಾಗಿದ್ದು, ಮಧ್ಯಮ ವರ್ಗದ ಜನರಿಗೆ ಹೊರೆಯಾಗಿದೆ. ಅದನ್ನು ಕಡಿಮೆ ಮಾಡಲೇಬೇಕು. ಪಾಲಿಕೆಯು ಪಾರ್ಕಿಂಗ್‌ ವ್ಯವಸ್ಥೆ ಇದೆಯೇ ಇಲ್ಲವೇ ಎನ್ನುವುದನ್ನು ಸರಿಯಾಗಿ ಗಮನಿಸದೆ ಕಟ್ಟಡಗಳಿಗೆ ಲೈಸನ್ಸ್‌ ಕೊಡುತ್ತಿದೆ. ಹಾಗಾಗಿ ಪಾರ್ಕಿಂಗ್‌ ಸಮಸ್ಯೆ ತಲೆ ದೋರಿದೆ. 
 - ಅನುಪ್‌,
ಮೇರಿಹಿಲ್‌ , (ದ್ವಿಚಕ್ರ ವಾಹನ ಮಾಲಕರು)

ಶುಲ್ಕ ಕಡಿಮೆ ಮಾಡಲಿ
ನಗರದಲ್ಲಿ ವಾಹನಗಳ ನಿಲುಗಡೆಗೆ ಸರಿಯಾದ ವ್ಯವಸ್ಥೆ ಇಲ್ಲ. ಹಾಗಿರುವಾಗ ದುಬಾರಿ ಟೋಯಿಂಗ್‌ ಶುಲ್ಕ ವ್ಯವಸ್ಥೆ ಜಾರಿ ಮಾಡುವುದು ಸಮರ್ಪಕ ಎನಿಸುವುದಿಲ್ಲ. ಟೊಯಿಂಗ್‌ ದಂಡ ಶುಲ್ಕವನ್ನು ಕಡಿಮೆ ಮಾಡಲೇಬೇಕು.
– ನಿಶಿತ್‌ ಕುಮಾರ್‌, ಬೋಂದೆಲ್‌
(ದ್ವಿಚಕ್ರ ವಾಹನ ಮಾಲಕರು)

ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next