ಕುಮಟಾ: ಲಾಕ್‌ಡೌನ್ ಸಂದರ್ಭದಲ್ಲಿ ವಾಹನದ ವ್ಯವಸ್ಥೆಯಿಲ್ಲದೆ ಮಂಗಳೂರಿನಿಂದ ಮಧ್ಯಪ್ರದೇಶಕ್ಕೆ 24 ಕಾರ್ಮಿಕರು ಕಾಲ್ನಡಿಗೆಯ ಮೂಲಕ ಹೊರಟಿದ್ದರು. ಈ ವಿಚಾರ ತಿಳಿದ ಉಪವಿಭಾಗಾಧಿ ಕಾರಿ ಎಂ. ಅಜಿತ ಹಾಗೂ ಪುರಸಭಾ ಮುಖ್ಯಾಧಿಕಾರಿ ಸುರೇಶ ಎಂ.ಕೆ. ವಾಹನದ ವ್ಯವಸ್ಥೆ ಕಲ್ಪಿಸಿ ರಾಜ್ಯದ ಗಡಿಭಾಗದ ವರೆಗೆ ಅವರನ್ನು ಸುರಕ್ಷಿತವಾಗಿ ತಲುಪಿಸಿದ್ದಾರೆ.
ಮಂಗಳೂರಿನಿಂದ ಬಂದ ವಲಸೆ ಕಾರ್ಮಿಕರು ತಾಲೂಕಿನ ಹಂದಿಗೋಣದ ಬಳಿ ವಿಶ್ರಾಂತಿ ಪಡೆಯುತ್ತಿರುವ ಬಗ್ಗೆ ಉಪವಿಭಾಗಾಧಿಕಾರಿ ಎಂ. ಅಜಿತ ಅವರಿಗೆ ಖಚಿತ ಮಾಹಿತಿ ಲಭಿಸಿತ್ತು. ಈ ಬಗ್ಗೆ
ಪರಿಶೀಲಿಸುವಂತೆ ಪುರಸಭಾ ಮುಖ್ಯಾಧಿಕಾರಿ ಸುರೇಶ ಎಂ.ಕೆ. ಅವರಿಗೆ ಸೂಚಿಸಿದರು. ತಕ್ಷಣವೇ ಅಲ್ಲಿಗೆ ಧಾವಿಸಿದ ಮುಖ್ಯಾಧಿಕಾರಿ, ವಿಶ್ರಾಂತಿ ಪಡೆಯುತ್ತಿದ್ದ 12 ಜನ ಕಾರ್ಮಿಕರ ಆರೋಗ್ಯ ವಿಚಾರಿಸಿ, ವಿಶ್ವಾಸಕ್ಕೆ ತೆಗೆದುಕೊಂಡರು. ನಂತರ ಪಟ್ಟಣದ ಪುರಭವನದ ವರೆಗೆ ನಡೆದುಕೊಂಡು ಬರುವಂತೆ ಅವರಿಗೆ ತಿಳಿಸಿದ್ದರು. ಆದರೆ ಅಲ್ಲಿಗೆ ಬರುವ ಮುನ್ನವೇ ಅವರು ಯಾವುದೋ ವಾಹನವನ್ನು ಹತ್ತಿ ಪರಾರಿಯಾಗಲು ಯತ್ನಿಸಿದ್ದರು. ಪೊಲೀಸರ ಸಹಾಯದಿಂದ ತಕ್ಷಣ ಅವರನ್ನು ಬೆನ್ನಟ್ಟಿದ ಎಂ.ಕೆ. ಸುರೇಶ, ಅವರನ್ನು ವಾಪಸ್ ಕರೆತಂದು ರಾತ್ರಿ ಊಟ ಹಾಗೂ ವಸತಿ ವ್ಯವಸ್ಥೆಯನ್ನು ಪುರಭವನದಲ್ಲಿ ಕಲ್ಪಿಸಿದರು.
ನಂತರ ಕೂಲಂಕುಷವಾಗಿ ಅವರನ್ನು ವಿಚಾರಿಸಿದಾಗ 12 ಜನರ ಇನ್ನೊಂದು ತಂಡವೂ ಹಿಂದಿನಿಂದ ಬರುತ್ತಿರುವ ಬಗ್ಗೆ ಮಾಹಿತಿ ನೀಡಿದರು. ನಂತರ ಜಿಲ್ಲಾಡಳಿತದ ಅನುಮತಿ ಪಡೆದು ಎರಡೂ ತಂಡಗಳಿಗೆ ಪ್ರತ್ಯೇಕ ವಾಹನದ ವ್ಯವಸ್ಥೆ ಕಲ್ಪಿಸಿ, ಕರ್ನಾಟಕದ ಗಡಿ ಭಾಗವಾದ ಬೆಳಗಾವಿವರೆಗೆ ಅವರನ್ನು ಕಳುಹಿಸಿಕೊಡಲಾಯಿತು ಎಂದು ಪುರಸಭಾ ಮುಖ್ಯಾಧಿಕಾರಿ ಸುರೇಶ ಎಂ.ಕೆ. ತಿಳಿಸಿದ್ದಾರೆ. ಮಂಗಳೂರಿನಿಂದ ಕುಮಟಾದ ವರೆಗೆ ಆಗಮಿಸುವಾಗ ಸಿಗುವ ಎಲ್ಲ ಚೆಕ್‌ಪೋಸ್ಟ್‌ಗಳನ್ನು ಅವರು ಹೇಗೆ ದಾಟಿ ಬಂದರು ಎಂಬುದು ಈಗ ಯಕ್ಷಪ್ರಶ್ನೆಯಾಗಿದೆ.
ಲಾಕ್‌ಡೌನ್‌ಗೂ ಮುನ್ನ ಮಂಗಳೂರಿಗೆ ಕೂಲಿ ಕೆಲಸಕ್ಕೆಂದು ಆಗಮಿಸಿದ್ದ ಅವರು ವಾಹನ ವ್ಯವಸ್ಥೆ ಇಲ್ಲದೆ ಹತಾಶರಾಗಿ 1700 ಕಿಮೀ ದೂರದ ಮಧ್ಯಪ್ರದೇಶಕ್ಕೆ ಕಾಲ್ನಡಿಗೆಯಲ್ಲೇ ಹೊರಟಿದ್ದರು. ಮಾನವೀಯ ದೃಷ್ಟಿಯಿಂದ ಅವರಿಗೆ ಆಶ್ರಯ ನೀಡಿದ್ದೇವೆ. ಬಳಿಕ ಜಿಲ್ಲಾಧಿಕಾರಿ ಅನುಮತಿ ಪಡೆದು ಪ್ರತ್ಯೇಕ ವಾಹನದ ಮೂಲಕ ಬೆಳಗಾವಿಗೆ ಕಳುಹಿಸಿಕೊಡಲಾಗಿದೆ. –
ಸುರೇಶ ಎಂ.ಕೆ., ಪುರಸಭಾ ಮುಖ್ಯಾಧಿಕಾರಿ