ದಾವಣಗೆರೆ: ಆಂಧ್ರ ಪ್ರದೇಶದಿಂದ ಒಣ ಮೆಣಸಿನಕಾಯಿ ಮಾರಾಟ ಮಾಡಲು ಬಂದಿದ್ದವರು ಅಪಘಾತದಲ್ಲಿ ಸಾವನ್ನಪ್ಪಿದ ಘಟನೆ ನಗರದಲ್ಲಿ ನಡೆದಿದೆ.
ಆಂಧ್ರದಿಂದ ಹಾವೇರಿಯ ಬ್ಯಾಡಗಿಗೆ ಮೆಣಸಿನಕಾಯಿ ಮಾರಾಟ ಮಾಡಲು ಬಂದಿದ್ದ ಬಡ ರೈತರಿಗೆ ದಾವಣಗೆರೆ ಬಳಿ ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಜವರಾಯ ಕಾದು ಕುಳಿತಿದ್ದ. ಮೆಣಸಿನಕಾಯಿ ಹೊತ್ತು ತರುತ್ತಿದ್ದ ಬುಲೆರೋ ಟೆಂಪೋದ ಟೈಯರ್ ಸ್ಪೋಟವಾಗಿ ವಾಹನ ಪಲ್ಟಿಯಾಗಿದ್ದು, ಸ್ಥಳದಲ್ಲೇ ಮೂರು ಜನ ಸಾವನ್ನಪ್ಪಿದ್ದಾರೆ. ಉಳಿದಂತೆ ಆರು ಜನರಿಗೆ ಗಾಯಗಳಾಗಿವೆ.
ಅಪಘಾತಕ್ಕೀಡಾದವರು ಆಂಧ್ರದ ಕರ್ನೂಲ್ ಜಿಲ್ಲೆಯ ಮಂತ್ರಾಲಯಂ ತಾಲೂಕಿನ ಸಿಂಗರಾಜನಹಳ್ಳಿ ಗ್ರಾಮದ ನಿವಾಸಿಗಳಾಗಿದ್ದು, ಮುಸ್ತಾನ್ (50), ಎಸ್ ಟಿ ವೀರಣ್ಣ (30), ಪೆದ್ದ ವೆಂಕಣ್ಣ (38) ಮೃತ ದುರ್ದೈವಿಗಳಾಗಿದ್ದಾರೆ.
ಗಾಯಾಳುಗಳನ್ನು ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದು, ಓರ್ವನನ್ನು ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಬಡ ರೈತರು ತಾವು ಬೆಳೆದ ಒಣ ಮೆಣಸಿನಕಾಯಿಯನ್ನು ಬ್ಯಾಡಗಿ ಮಾರುಕಟ್ಟೆಗೆ ಮಾರಾಟ ಮಾಡಿ ಜೀವನ ನಡೆಸುತ್ತಿದ್ದರು. ಪ್ರತಿ ಬಾರಿಯಂತೆ ತಾವು ಬೆಳೆದ ಒಣ ಮೆಣಸಿನಕಾಯಿಯನ್ನು ಬುಲೇರೋ ವಾಹನದಲ್ಲಿ ಹಾಕಿಕೊಂಡು ಬರುವಾಗ ರಾಷ್ಟ್ರೀಯ ಹೆದ್ದಾರಿ 48 ರ ಪಕ್ಕದಲ್ಲಿರುವ ಪಂಜಾಬಿ ಡಾಬಾದ ಬಳಿ ವಾಹನದ ಟಯರ್ ಬ್ಲಾಸ್ಟ್ ಆಗಿ ಪಲ್ಟಿಯಾಗಿದ್ದು, ಮೇಲೆ ಇದ್ದವರು ರಸ್ತೆಗೆ ಬಿದ್ದು ಮೂರು ಜನ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ದಾವಣಗೆರೆಯ ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.