Advertisement

ರಸ್ತೆ ಕುಸಿತ: ಕರಾವಳಿಯಲ್ಲಿ ತರಕಾರಿ ಕೊರತೆ ?

02:50 AM Aug 23, 2018 | Team Udayavani |

ಕುಂದಾಪುರ: ಶಿರಾಡಿ, ಸಂಪಾಜೆ ಘಾಟಿ ಬಂದ್‌ ಹಾಗೂ ಚಾರ್ಮಾಡಿಯಲ್ಲೂ ಕುಸಿತ ಭಯ ಕಾಡುತ್ತಿರುವ ಹಿನ್ನೆಲೆಯಲ್ಲಿ ಕರಾವಳಿ ಭಾಗದಲ್ಲಿ ತರಕಾರಿ ಪೂರೈಕೆಯಲ್ಲಿ ವ್ಯತ್ಯಯವಾಗುವ ಸಂಭವವಿದೆ. ದರ ಏರಿಕೆ ಸಾಧ್ಯತೆ ಇದೆ. ಮೈಸೂರು,  ಬೆಂಗಳೂರು ಗ್ರಾಮಾಂತರ ಭಾಗದಿಂದ ತರಕಾರಿ ಸಾಗಣೆ ವಾಹನಗಳು ಚಾರ್ಮಾಡಿ ಘಾಟಿಯ ಮೂಲಕವೇ ಬರಬೇಕು. ಉಡುಪಿ ಹಾಗೂ ದ.ಕ. ಜಿಲ್ಲೆಗೆ ಚಿಕ್ಕಮಗಳೂರಿನಿಂದಲೂ ತರಕಾರಿ ಬರುತ್ತಿದ್ದು, ಚಾರ್ಮಾಡಿ ಘಾಟಿಯಲ್ಲೂ ವಾಹನ ಸಂಚಾರ ನಿಷೇದಿಸಿದರೆ ತರಕಾರಿ ಕೊರತೆ ಹೆಚ್ಚಲಿದೆ.

Advertisement

ಚಿಕ್ಕಮಗಳೂರು ಮೂಲ
ಶೇ. 80ರಷ್ಟು ತರಕಾರಿ ಚಿಕ್ಕಮಗಳೂರು ಭಾಗದ್ದಾಗಿದ್ದು, ಬೀನ್ಸ್‌, ಬೆಂಡೆಕಾಯಿ, ಕ್ಯಾರೆಟ್‌, ಟೊಮೇಟೊ, ಸೌತೆಕಾಯಿ, ನವಿಲುಕೋಸು, ಮುಳ್ಳುಸೌತೆ, ಚೀನಿಕಾಯಿ, ಮೂಲಂಗಿ, ಕುಂಬಳಕಾಯಿ, ಹೀರೆಕಾಯಿ, ಬದನೆಕಾಯಿ, ತೊಂಡೆಕಾಯಿ, ನೀರುಳ್ಳಿ, ಬಟಾಟೆ, ಕೋಸನ್ನು ಪೂರೈಸಲಾಗುತ್ತಿದೆ. ನ್ಯಾಮತಿ, ಬೆಂಗಳೂರು, ಹಾಸನ ಕಡೆಯಿಂದಲೂ ತರಕಾರಿ ಬರುತ್ತಿದೆ. ಚಾರ್ಮಾಡಿ ಸಂಚಾರ ನಿಷೇಧವಾಗಿದ್ದಾಗ ಕುದುರೆಮುಖ- ಎಸ್‌ಕೆ ಬಾರ್ಡರ್‌, ಜಯಪುರ ಶೃಂಗೇರಿ ಮುಖಾಂತರ ಚಿಕ್ಕಮಗಳೂರಿಗೆ ತರಕಾರಿ ವಾಹನಗಳು ಹೋಗುತ್ತಿ ದ್ದವು. ಈ ರಸ್ತೆಯೂ ಖಾತ್ರಿಯಿಲ್ಲದಾಗಿದೆ.

ಹುಣಸೂರಿನಿಂದ ಕಾಯಿಮೆಣಸು, ಶೇಂಗಾ, ಮರಗೆಣಸು; ವಿರಾಜಪೇಟೆಯಿಂದ ಸಿಹಿಗೆಣಸು ಬರುತ್ತಿತ್ತು. ಈಗ ಆ ಮಾರ್ಗವೂ ಇಲ್ಲ. ಮಂಗಳೂರಿಗೆ ಟೊಮೇಟೊ ಸರಬರಾಜಿನ ಮೂಲ ಕೋಲಾರ. ಬಳಿಕ ಚೆನ್ನರಾಯಪಟ್ಟಣ, ಕಬ್ಜಳ್ಳಿಯ ಸರದಿ. ಹಳೆಬೀಡಿನಿಂದಲೂ ಕೆಲವು ತರಕಾರಿ ಬರುತ್ತಿದ್ದು, ಅದಕ್ಕೂ ಚಾರ್ಮಾಡಿ ರಸ್ತೆಯೇ ಆಧಾರ. ಚಾರ್ಮಾಡಿಯಲ್ಲಿ ಬೆಳ್ತಂಗಡಿ ಕಡೆಯಿಂದ ವಾಹನಗಳನ್ನು ಬಿಡದಿದ್ದಾಗ ದುಪ್ಪಟ್ಟು ಬಾಡಿಗೆ ತೆತ್ತು ಚಿಕ್ಕಮಗಳೂರಿನ ವಾಹನಗಳಲ್ಲಿ ತರಕಾರಿ ಹಾಕಿದ್ದೂ ಇದೆ ಎನ್ನುತ್ತಾರೆ ಉಜಿರೆಯ ತರಕಾರಿ ವ್ಯಾಪಾರಿ ಭರತ್‌ ಜೈನ್‌.

ಹೊಡೆತ
ಚಾರ್ಮಾಡಿ ಬಿಟ್ಟರೆ ನ್ಯಾಮತಿಯಿಂದ ಆಗುಂಬೆ ಮೂಲಕ ತರಕಾರಿ ಬರುತ್ತದೆ. ಆದರೆ ಅಲಸಂಡೆ, ಕ್ಯಾಬೇಜ್‌, ಬೀಟ್‌ ರೂಟ್‌, ಟೊಮೇಟೊ ಮಾತ್ರ. ಉಳಿದವುಗಳ ಕೊರತೆ ಸಂಭವಿಸಲಿದೆ ಎಂಬುದು ವ್ಯಾಪಾರಿಗಳ ಆತಂಕ.

ಉಡುಪಿಗೆ
ಉಡುಪಿ ಮಾರುಕಟ್ಟೆಗೆ ಆಗುಂಬೆ ಮೂಲಕ ಶಿವಮೊಗ್ಗ, ನ್ಯಾಮತಿ, ಚಿಕ್ಕಮಗಳೂರಿನಿಂದ ತರಕಾರಿ ತರಲಾಗುತ್ತದೆ. ಕುಂದಾಪುರ ಮೂಲಕ ಪುಣೆ ಯಿಂದ ನೀರುಳ್ಳಿ, ಬಟಾಟೆ, ಬೆಳಗಾವಿಯಿಂದ ಬೀನ್ಸ್‌, ಬೆಂಡೆಕಾಯಿ, ಶೇಂಗಾ, ಕ್ಯಾಪ್ಸಿಕಮ್‌, ನುಗ್ಗೆ, ತೊಂಡೆಕಾಯಿ ಬರುತ್ತವೆ.

Advertisement

ಕುಂದಾಪುರ ಮಾತ್ರ
ಚಾರ್ಮಾಡಿ ರಸ್ತೆ ಕೈ ಕೊಟ್ಟರೆ ತರಕಾರಿ ಸರಬರಾಜಿಗೆ ಆಧಾರ ಕುಂದಾಪುರ ರಸ್ತೆ, ಆಗುಂಬೆ ಘಾಟಿ. ಘಾಟಿ ರಸ್ತೆ ಹದಗೆಟ್ಟಾಗ, ಸಂಚಾರ ನಿರ್ಬಂಧಕ್ಕೆ ಒಳಗಾದರೆ ವ್ಯಾಪಾರಿ ಹಾಗೂ ಗ್ರಾಹಕರಿಗೆ ಸಮಸ್ಯೆಯಾಗಲಿದೆ. ಚಿಕ್ಕಮಗಳೂರೇ ಪ್ರಧಾನ ಕೇಂದ್ರವಾದ ಕಾರಣ ಏಜೆಂಟರು ಹೇಳಿದ ದರ ತೆತ್ತು ವ್ಯಾಪಾರಸ್ಥರು ಖರೀದಿಸುವ ಸ್ಥಿತಿ ಇದೆ. ನವಂಬರ್‌ ಬಳಿಕ ಸ್ಥಳೀಯವಾಗಿ ತೊಂಡೆ, ಅಲಸಂಡೆ, ಕುಂಬಳ, ಬದನೆ ಇತ್ಯಾದಿ ಸಿಗುತ್ತವೆ. ಚಿಕ್ಕಮಗಳೂರು ತರಕಾರಿಯ ಮೇಲಿನ ಅವಲಂಬನೆ ಕೊಂಚ ಕಡಿಮೆಯಾಗಲಿದೆ ಎನ್ನುತ್ತಾರೆ ವ್ಯಾಪಾರಿಗಳು. 

ಹೇಳಿದ ದರ ಕೊಡಬೇಕಿದೆ
ಬೆಳಗಾವಿ, ನ್ಯಾಮತಿ ಕಡೆಯಿಂದ ಬರುವ ತರಕಾರಿ ಕಡಿಮೆ. ಚಿಕ್ಕಮಗಳೂರು ಕಡೆಯದ್ದೇ ಹೆಚ್ಚು. ಆದ್ದರಿಂದ ಅಲ್ಲಿಂದ ತರುವವರು ಹೇಳುವ ದರ ಕೊಟ್ಟು ಖರೀದಿಸುತ್ತಿದ್ದೇವೆ. ನವೆಂಬರ್‌ ವರೆಗೂ ಅವರ ಅವಲಂಬನೆ ಇರುತ್ತದೆ.
– ಯಶವಂತ್‌ ಪಾಂಡೆ, ಕುಂದಾಪುರ, ತರಕಾರಿ ವ್ಯಾಪಾರಸ್ಥರು.

ಚಿಕ್ಕಮಗಳೂರಿನಿಂದ ದೂರದ ರಸ್ತೆಗಳ ಮೂಲಕ ಸಾಗಿಸಬೇಕಾಗುತ್ತದೆ. ಹಾಗಾಗಿ ದರ ಏರಿಕೆ ಅನಿವಾರ್ಯವಾಗಿದೆ. ತರಕಾರಿ ವಾಹನಗಳಿಗೂ ಹಾಲಿನ ವಾಹನದಂತೆ ವಿನಾಯಿತಿ ದೊರೆಯಬೇಕು.
– ಬಸವರಾಜ, ಹೋಲ್‌ ಸೇಲ್‌ ಮಾರಾಟಗಾರರು, ಚಿಕ್ಕಮಗಳೂರು

— ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next