Advertisement
ದೀಪಾವಳಿ ಹಿನ್ನೆಲೆಯಲ್ಲಿ ಏರಿಕೆ ಕಂಡಿದ್ದ ಹೂವು, ಹಣ್ಣು ಸೇರಿದಂತೆ ತರಕಾರಿ ಬೆಲೆ ಕಡಿಮೆಯಾಗುವುದಿರಲಿ, ಹಬ್ಬದ ದಿನಗಳಿಗಿಂತಲೂ ಹೆಚ್ಚಾಗಿದೆ. ದೀಪಾವಳಿಯಂದೇ ಕಡಿಮೆ ದರಕ್ಕೆ ಸಿಗುತ್ತಿದ್ದ ತರಕಾರಿ ಬೆಲೆ ಗಗನಕ್ಕೇರದೆ. ಚಿಲ್ಲರೆ ತರಕಾರಿ ದರ ಮೂರುಪಟ್ಟು ಹೆಚ್ಚಾಗಿದೆ.
Related Articles
Advertisement
ಮುಂದಿನ 15 ದಿನಗಳ ವರೆಗೂ ಇದೇ ದರ ಮುಂದುವರೆಯುವ ಸಾಧ್ಯತೆ ಇದ್ದು, ಜತೆಗೆ ಮಹಾರಾಷ್ಟ್ರದಿಂದಲೂ ಟೊಮೆಟೋ ಮಾರುಕಟ್ಟೆಗೆ ಬರುತ್ತಿದ್ದು, ಇದರಿಂದ ಬೆಲೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಕಡಿಮೆ ಎಂದು ಬೆಂಗಳೂರು ಹಣ್ಣು ಮತ್ತು ತರಕಾರಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಗೋಪಿ ತಿಳಿಸಿದ್ದಾರೆ.
ಚಿಲ್ಲರೆ ಮಾರಾಟ ದುಬಾರಿ: ನಗರದ ಹೆಬ್ಟಾಳ, ಸಂಜಯನಗರ, ವೈಟ್‌ಫೀಲ್ಡ್, ಬನಶಂಕರಿ, ಮಲ್ಲೇಶ್ವರಂ, ಜಯನಗರ, ರಾಜಾಜಿನಗರ, ಶಿವಾಜಿನಗರ, ಹಲಸೂರು, ಮಡಿವಾಳ ಮುಂತಾದ ಕಡೆಗಳಲ್ಲಿ ತರಕಾರಿ ಚಿಲ್ಲರೆ ಮಾರಾಟ ಮಾಡುವ ವ್ಯಾಪಾರಿಗಳು ಹಾಗೂ ರಸೂಲ್ ಮಾರುಕಟ್ಟೆಯಲ್ಲಿ ತರಕಾರಿ ಬೆಲೆ 1:3 ರಷ್ಟು ಏರಿಕೆ ಮಾಡಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಂತಾಗಿದೆ.
ಹಬ್ಬದ ಹಿನ್ನೆಲೆಯಲ್ಲಿ ಮಾಂಸಹಾರ ಸೇವನೆ ಕಡಿಮೆ ಇರುತ್ತದೆ. ಆದ್ದರಿಂದ ತರಕಾರಿ ಬೆಲೆ ಹೆಚ್ಚಾಗಿದೆ. ಜತೆಗೆ ಮಳೆಯೂ ಸುರಿದಿದ್ದು, ತರಕಾರಿ ಸರಬರಾಜು ಕಡಿಮೆ ಇದೆ. ಆದ್ದರಿಂದ ಸಾಮಾನ್ಯವಾಗಿಯೇ ಬೆಲೆ ಏರಿಕೆಯಾಗಿದೆ ಎನ್ನುತ್ತಾರೆ ರಸೆಲ್ ಮಾರುಕಟ್ಟೆಯ ತರಕಾರಿ ವ್ಯಾಪಾರಿಗಳಾದ ಫಜಲ್ ರೆಹಮಾನ್ ಮತ್ತು ಮುರುಗನ್.
ಹೋಲ್‌ಸೇಲ್‌ನಲ್ಲಿ ಬೆಲೆ ಕಡಿಮೆ: ಚಿಲ್ಲರೆ ಮಾರುಕಟ್ಟೆ ದರ ಹೆಚ್ಚಾಗಿದ್ದರೂ ಸಹ ಸಗಟು ಮಾರುಕಟ್ಟೆ ದರ ಮಾತ್ರ ಕಡಿಮೆ ಇದೆ. ಆದರೆ ಇದರ ಲಾಭ ಮಾತ್ರ ಗ್ರಾಹಕರಿಗೆ ದೊರೆಯುತ್ತಿಲ್ಲ. ತೆಂಗಿನಕಾಯಿ ಸೇರಿದಂತೆ ವಿವಿಧ ತರಕಾರಿಗಳ ಬೆಲೆ ಹೋಲ್‌ಸೇಲ್‌ನಲ್ಲಿ ಶೇ.50ಕ್ಕಿಂತ ಕಡಿಮೆ ಇದೆ. ಆದರೆ, ಚಿಲ್ಲರೆ ತರಕಾರಿ ವ್ಯಾಪಾರಿಗಳು ದ್ವಿಗುಣ ಬೆಲೆಗೆ ತರಕಾರಿ ಮಾರಾಟ ಮಾಡುತ್ತಿದ್ದಾರೆ.
ಕೆ.ಆರ್.ಮಾರುಕಟ್ಟೆಯ ಹೋಲ್‌ಸೇಲ್ ಮಾರಾಟದಲ್ಲಿ ಟೊಮೆಟೋ ಪ್ರತಿ ಕೆಜಿಗೆ ಗಾತ್ರದ ಆಧಾರದ ಮೇಲೆ 20 ರೂ.ಗಳಿಂದ 33 ರೂ.ಇದೆ. ಕ್ಯಾರೆಟ್ 40 ರೂ., ಬೀನ್ಸ್ 30ರಿಂದ 35 ರೂ., ಕ್ಯಾಪ್ಸಿಕಂ 40 ರೂ., ಬೆಂಡೆಕಾಯಿ 20 ರೂ., ಹೀರೆಕಾಯಿ 20 ರೂ., ಮೂಲಂಗಿ 15ರಿಂದ 20 ರೂ., ಕೊತ್ತಂಬರಿ ಒಂದು ಕಟ್ಟು 35ರಿಂದ 40 ರೂ., ನುಗ್ಗೆಕಾಯಿ ಒಂದಕ್ಕೆ 8ರಿಂದ 9 ರೂ.ಇದೆ.
ಈರುಳ್ಳಿಗೂ ಡಿಮ್ಯಾಂಡ್: ಯಶವಂತಪುರ ಎಪಿಎಂಸಿ ಮಾರುಕಟ್ಟೆಗೆ ಸೋಮವಾರ ಸುಮಾರು 600 ಲಾರಿಗಳಲ್ಲಿ 1.19 ಲಕ್ಷ ಮೂಟೆ ಈರುಳ್ಳಿ ಬಂದಿದೆ. ಪ್ರತಿ ಚೀಲದಲ್ಲಿ 60 ಕೆಜಿ ಈರುಳ್ಳಿ ಇದ್ದು, ಸಾಧಾರಣ ಗುಣಮಟ್ಟದ ಚೀಲಕ್ಕೆ 1 ಸಾವಿರದಿಂದ 1200 ರೂ.ವರೆಗೂ ಬೆಲೆ ಇದ್ದರೆ. ಮಧ್ಯಮ ಗುಣಮಟ್ಟದ ಚೀಲಕ್ಕೆ 1300ರಿಂದ 1500 ರೂ. ಹಾಗೂ ಅತ್ಯುತ್ತಮ ಗುಣಮಟ್ಟದ ಈರುಳ್ಳಿಗೆ 1500ರಿಂದ 1800 ರೂ.ನಂತೆ ಮಾರಾಟ ಮಾಡಲಾಗುತ್ತಿದೆ.
ಈರುಳ್ಳಿ ಬಿತ್ತನೆ ಮಾಡಿದಾಗ ಮಳೆ ಇರಲಿಲ್ಲ. ವಿಪರ್ಯಾಸವೆಂದರೆ ಈರುಳ್ಳಿ ಕೊಯ್ಲಿಗೆ ಬರುವ ಸಮಯದಲ್ಲಿ ವಿಪರೀತ ಮಳೆಯಾಗಿದ್ದು, ಹೆಚ್ಚು ಭಾಗ ಗುಣಮಟ್ಟವಲ್ಲದ ಈರುಳ್ಳಿ ಬಂದಿದೆ. ಚಿತ್ರದುರ್ಗ, ಗದಗ, ಬಾಗಲಕೋಟೆ, ಮಹಾರಾಷ್ಟ್ರದಿಂದ ಈರುಳ್ಳಿ ಮಾರುಕಟ್ಟೆಗೆ ಬರುತ್ತಿದ್ದು, ಗುಣಮಟ್ಟದ ಈರುಳ್ಳಿ ಬಾಂಗ್ಲಾ, ಪಶ್ಚಿಮ ಬಂಗಾಲ, ಆಂಧ್ರಪ್ರದೇಶ, ತಮಿಳುನಾಡಿಗೆ ರಫ್ತು ಮಾಡಲಾಗುತ್ತಿದೆ.
ಅತ್ಯುತ್ತಮ ಗುಣಮಟ್ಟದ ಈರುಳ್ಳಿಯನ್ನು ಮಲೇಷ್ಯಾ ಮತ್ತು ಸಿಂಗಾಪುರಕ್ಕೆ ಯಶವಂತಪುರ ಎಪಿಎಂಸಿಯಿಂದ ರಫ್ತು ಮಾಡಲಾಗುತ್ತಿದೆ. ಉತ್ತಮ ಗುಣಮಟ್ಟದ ಈರುಳ್ಳಿಗೆ ಮಾರುಕಟ್ಟೆಯಲ್ಲಿ ಪ್ರತಿ ಕೆಜಿಗೆ 40 ರೂ.ಇದೆ ಎಂದು ಯಶವಂತಪುರ ಎಪಿಎಂಸಿ ಈರುಳ್ಳಿ, ಆಲೂಗಡ್ಡೆ ವರ್ತಕರ ಸಂಘದ ಅಧ್ಯಕ್ಷ ಲೋಕೇಶ್ ಮಾಹಿತಿ ನೀಡಿದ್ದಾರೆ.
* ಸಂಪತ್ ತರೀಕೆರೆ