Advertisement
ಭಾರತೀಯ ಸಾಹಿತ್ಯದಲ್ಲಿ ಧಾರ್ಮಿಕ-ಸಾಂಸ್ಕೃತಿಕವಾಗಿ ಹಿರೇಜಂತಗಲ್ ಸ್ಥಾನ ಪಡೆದಿದೆ. ವಿಜಯನಗರ ಅರಸರು ರಾಜ್ಯದೆಲ್ಲೆಡೆ ಶೈವ ಮಂದಿರ ನಿರ್ಮಾಣಕ್ಕೆ ಆದ್ಯತೆ ನೀಡಿದ್ದರು. ತಾಲೂಕಿನ ಹನುಮನಹಳ್ಳಿ ಹತ್ತಿರ ಋಷಿಮುಖ ಪರ್ವತಕ್ಕೆ ಹೊಂದಿಕೊಂಡಿರುವ ಚಂದ್ರಮೌಳೇಶ್ವರ, ಹಿರೇಜಂತಗಲ್‌ನಲ್ಲಿರುವ ಪ್ರಸನ್ನ ಪಂಪಾ ವಿರೂಪಾಕ್ಷ ದೇವಾಲಯಗಳು ಹಂಪಿಯಲ್ಲಿರುವ ವಿರೂಪಾಕ್ಷೇಶ್ವರ ದೇವಾಲಯದಷ್ಟೇ ಮಹತ್ವ ಪಡೆದಿವೆ.
Related Articles
Advertisement
ಗಂಗಾವತಿ ಪರಿಸರದಲ್ಲಿ ಪ್ರೌಢದೇವರಾಯನ ಕಾಲದಲ್ಲಿ ನಿರ್ಮಾಣಗೊಂಡ ದೇವಾಲಯಗಳೇ ಹೆಚ್ಚಿವೆ. ಆನೆಗೊಂದಿಯ ಜೈನಬಸದಿ, ಕನಕಗಿರಿಯ ಕನಕಾಚಲ ಲಕ್ಷ್ಮಿ ನರಸಿಂಹ ದೇವಾಲಯ ಪ್ರಮುಖವಾಗಿವೆ. ಹಿರೇಜಂತಗಲ್ ಪ್ರಸನ್ನ ಪಂಪಾ ವಿರೂಪಾಕ್ಷ ದೇವಾಲಯ ಸಂಪೂರ್ಣ ವಿಜಯನಗರ ವಾಸ್ತುಶೈಲಿಯಲ್ಲಿದ್ದು, ಹಂಪಿ ದೇವಾಲಯಗಳನ್ನು ನೆನಪಿಸುತ್ತದೆ.
ಎರಡು ಮಹಾದ್ವಾರ ಮಂಟಪಗಳು, ಮುಖಮಂಟಪ, ಸಭಾಮಂಟಪ ಮತ್ತು ಎರಡು ಗರ್ಭಗೃಹ(ವಿರೂಪಾಕ್ಷ ಮತ್ತು ಪಂಪಾಂಬಿಕೆ)ಹೊಂದಿ ವಿಶಾಲವಾಗಿದೆ. ದೇವಾಲಯದ ಪ್ರಧಾನ ದ್ವಾರ ಮಂಟಪವು ತನ್ನ ರಚನಾ ವಿನ್ಯಾಸದಿಂದ ಎಲ್ಲರನ್ನೂ ಸೆಳೆಯುತ್ತದೆ.
ವಿಜಯನಗರ ಕಾಲದಲ್ಲಿ ನಿರ್ಮಾಣಗೊಂಡ ದೇವಾಲಯಗಳ ಮಂಟಪಗಳ ಕಂಬಗಳ ಮೇಲಿರುವಂತೆ ಸಿಂಹ, ಹಂಸ, ಶಂಖವಾದಕ, ಶಂಖು, ಬೆಣ್ಣೆಕೃಷ್ಣ, ಯಕ್ಷ, ಭಕ್ತ, ಶಿವಲಿಂಗ, ಬೇಡತಿ, ಆನೆ, ಲಿಂಗ ಮತ್ತು ಸರ್ಪದ ಚಿತ್ರವನ್ನು ಹಿರೇಜಂತಗಲ್ ದೇವಾಲಯದಲ್ಲಿ ಕಾಣಬಹುದಾಗಿದೆ.
ಎರಡನೆಯ ದ್ವಾರ ಮಂಟಪವಿರುವುದು ಪ್ರಾದೇಶಿಕವಾಗಿ ಈ ದೇವಾಲಯದ ವೈಶಿಷ್ಟÂವಾಗಿದೆ. ಇದು ವಾಸ್ತು ರಚನೆಯಲ್ಲಿ ಮೊದಲಿನ ಮಂಟಪದಂತೆಯೇ ಇದೆಯಾದರೂ ಬಾಗಿಲ ಚೌಕಟ್ಟಿನ ಹಿಂಭಾಗದಲ್ಲಿ ಒಳಮಂಟಪವಿರುವುದು ವಿಶೇಷ. ಇಲ್ಲಿಯ ಕಂಬದ ಮೇಲೆ ವ್ಯಕ್ತಿ ಟೊಪ್ಪಿಗೆಯಾಕಾರದ ಕಿರೀಟವಿಟ್ಟುಕೊಂಡಿರುವುದು ಕಾಣಬಹುದಾಗಿದೆ. ಪ್ರಧಾನ (ವಿರೂಪಾಕ್ಷ) ಗರ್ಭಗುಡಿ ಮೇಲೆ ಇಟ್ಟಿಗೆ ಗಾರೆಯಿಂದ ನಿರ್ಮಿಸಿದ ಮಧ್ಯಮ ಪ್ರಮಾಣದ ದ್ರಾವಿಡಶೈಲಿ ಏಕತಲ ಶಿಖರವಿದೆ. ಸ್ಥೂಪಿಯ ಕೆಳಗೆ ಶಿಖರದಲ್ಲಿ ನಾಲ್ಕೂ ಮೂಲೆಗಳಲ್ಲಿ ನಂದಿಯ ಶಿಲ್ಪಗಳಿವೆ.
ಚಂಡಿಕೇಶ್ವರ ಗುಡಿ: ದೇವಾಲಯದ ಹೊರಭಾಗದ ಬಲಗಡೆಯಲ್ಲಿ ಚಂಡಿಕೇಶ್ವರನ ಚಿಕ್ಕಗುಡಿ ಇದೆ. ಚಂಡಿಕೇಶ್ವರನ ಚಿಕ್ಕ ಮೂರ್ತಿ ಇದೆ. ಬಲಗೈಯಲ್ಲಿ ಡಮರುಗ, ಎಡಗೈಯಲ್ಲಿ ವ್ಯಾಖ್ಯಾನ ಮುದ್ರೆ ಇದೆ. ತಲೆ ಮೇಲೆ ಕರಂಡು ಕಿರೀಟವಿದೆ. ಚಂಡಿಕೇಶ್ವರ ಶಿವನ ಮಹಾಭಕ್ತನಾಗಿದ್ದನೆಂದೂ ತನ್ನ ತಂದೆ ಕಾಲಿನಿಂದ ಶಿವಲಿಂಗವನ್ನು ಒದ್ದುದ್ದಕ್ಕಾಗಿ ಅವನ ಕಾಲನ್ನೇ ಕಡಿದು ಹಾಕಿದನೆಂದು ಇದನ್ನು ಮೆಚ್ಚಿ ಶಿವ ತಾನು ಧರಿಸಿದ್ದ ಮಾಲೆಯನ್ನು ಅವನಿಗೆ ಹಾಕಿ ತನ್ನ ಗೃಹ ಕೆಲಸದ ಮೇಲ್ವಿಚಾರಕನನ್ನಾಗಿ ಚಂಡಿಕೇಶ್ವರನನ್ನು ನೇಮಕ ಮಾಡಿದನೆಂಬ ಕಥೆ ಇದೆ.
ಪರಿವಾರ ದೇವತಾ ಶಿಲ್ಪಗಳು: ದೇವಾಲಯದಲ್ಲಿ ಹಲವಾರು ಪರಿವಾರ ದೇವತಾ ಶಿಲ್ಪಗಳಿವೆ. ಧಾರ್ಮಿಕ ಪರಂಪರೆ ಹಾಗೂ ಮೂರ್ತಿ ಶಿಲ್ಪಕಲಾ ದೃಷ್ಟಿಯಿಂದ ಗಮನ ಸೆಳೆಯುತ್ತವೆ. ದಕ್ಷಿಣಾಮೂರ್ತಿ, ಕಾಲಭೆ„ರವ, ವೀರಭದ್ರ, ಗಣೇಶ, ಕಾರ್ತಿಕೇಯ, ಸೂರ್ಯ, ಮಹಿಷಾಸುರ ಮರ್ದಿನಿ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ.
ಜಾತ್ರೆ ಉತ್ಸವಗಳು:
ಹಂಪಿ ವಿರೂಪಾಕ್ಷ ದೇವಾಲಯದಲ್ಲಿ ಆಚರಿಸುವಂತೆ ಹಿರೇಜಂತಗಲ್ ಪ್ರಸನ್ನ ಪಂಪಾ ವಿರೂಪಾಕ್ಷೇಶ್ವರ ದೇವಾಲಯದಲ್ಲೂ ಜಾತ್ರೆ-ಉತ್ಸವಗಳು ನಡೆಯುತ್ತಿದ್ದು, ಸಮುದಾಯದ ನಂಬಿಕೆ-ಆಚರಣೆಗಳನ್ನು ಬಿಂಬಿಸುವ ಜಾತ್ರೆ ಆಚರಣೆಗಳು ಸಂಸ್ಕೃತಿ ದೃಷ್ಟಿಯಿಂದ ಮಹತ್ವ ಪಡೆಯುತ್ತವೆ. ಇವುಗಳನ್ನು ದೇಶಿಯ ಸಂಸ್ಕೃತಿಯ ಸಮ್ಮೇಳನಗಳೆಂದೇ ಕರೆಯಬಹುದಾಗಿದೆ. ಜಾತ್ರೆ ಪ್ರತಿ ವರ್ಷ ಮಾಘಶುದ್ಧ ಸಪ್ತಮಿಯಂದು ಜರುಗುತ್ತದೆ. ಈ ಸಂದರ್ಭದಲ್ಲಿ ಹೋಮ ಪುಣ್ಯಾಹವಾಚನ, ನಂದಿ ಧ್ವಜ ಸ್ಥಾಪನೆ, ಕಂಕಣ ಕಟ್ಟುವ ಮತ್ತು ಕಳಶ ಪ್ರತಿಷ್ಠಾಪನೆ ಸಂಪ್ರದಾಯವಿದೆ. ಮಾಘಶುದ್ಧ 2ನೇ ದಿನ(ಬಿದಿಗೆ)ಪುಷ್ಪ ಮಂಟಪದಲ್ಲಿ ಪ್ರಸನ್ನ ಪಂಪಾ ವಿರೂಪಾಕ್ಷನ ಮೂರ್ತಿ ಕೂಡಿಸಿ ಉತ್ಸವ ಜರುಗಿಸಲಾಗುತ್ತದೆ.
ಸಪ್ತಮಿಯವರೆಗೆ ಪ್ರತಿ ದಿನ ಮಯೂರೋತ್ಸವ ಅಶ್ವವಾಹನೋತ್ಸವ ಭಕ್ತರ ಸಮ್ಮುಖದಲ್ಲಿ ಜರುಗುತ್ತದೆ. ರಥ(ತೇರಿನ)ಗಡ್ಡೆಯು ನಿರ್ಮಾಣವಾಗಿ ಒಂದು ಶತಮಾನ ಕಳೆದಿದೆ.