Advertisement

ಅನ್ನದಾತ ಸುಖೀಯಾಗಿದ್ದರೆ ನಾಡಿಗೆ ಒಳ್ಳೆಯದು

03:05 PM Jan 22, 2021 | Team Udayavani |

ಚನ್ನಮ್ಮನ ಕಿತ್ತೂರು: ಜಗತ್ತಿಗೆ ಅನ್ನ ನೀಡುವ ಅನ್ನದಾತ ರೈತ, ಇವನು ಸುಖೀಯಾಗಿರಬೇಕು. ಇವನು ಸುಖೀಯಾಗಿದ್ದರೆ ಇಡೀ ನಾಡಿಗೆ ಒಳ್ಳೆಯದೆಂದು ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆ ಹೇಳಿದರು.

Advertisement

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೆರೆ ಸಂಜೀವಿನಿ ಕಾರ್ಯಕ್ರಮದಡಿ ಪುನಶ್ಚೇತನಗೊಳಿಸಿದ ಸಮೀಪದ ಹಿರೇನಂದಿಹಳ್ಳಿ ಗ್ರಾಮದ ಮಠದ ಕೆರೆ ಹಸ್ತಾಂತರ ಕಾರ್ಯಕ್ರಮ ಹಾಗೂ ಸ್ವಸಹಾಯ ಸಂಘಗಳ ಸಾಧನಾ ಸಮಾವೇಶ ಕಾರ್ಯಕ್ರಮದಲ್ಲಿ ಮಾತನಾಡಿ, ಕಿತ್ತೂರ ಚನ್ನಮ್ಮಾ ಹಾಗೂ ಸಂಗೊಳ್ಳಿ ರಾಯಣ್ಣ ಇವರ ಪರಿಚಯವಿಲ್ಲದವರು ಯಾರೂ ಇಲ್ಲ. ಇಂತಹ ನಾಡಿನ ರೈತರು ಪ್ರಜ್ಞಾವಂತರು, ಹೋರಾಟಗಾರರು, ಸಂಸ್ಕಾರವಂತರು, ನೆಮ್ಮದಿಯಿಂದ ಇರುವವರು ಎಂದರು.

ನಾವು ಕೃಷಿಗೆ ಹೆಚ್ಚಿನ ಪ್ರಾಧಾನ್ಯತೆಯನ್ನು ಕೊಟ್ಟಿದ್ದೇವೆ. ಈಗಾಗಲೇ ಸುಮಾರು 250 ಕೆರೆಗಳನ್ನು ಪುನಶ್ಚೆತನಗೊಳಿಸಿದ್ದೇವೆ. ಈ ಕೆರೆ ಪುನಶ್ಚೇತನಕ್ಕೆ ಸುಮಾರು 12 ಲಕ್ಷ ವೆಚ್ಚ ತಗುಲಿದೆ. ಇದರಿಂದ ಅಂತರ್ಜಲ ಮಟ್ಟ ಹೆಚ್ಚಾಗುತ್ತದೆ. ಪುನಶ್ಚೇತನ ಗೊಳಿಸುವ ಯೋಜನೆಗೆ ನಮ್ಮೂರು-ನಮ್ಮ ಕೆರೆ ಎಂಬ ಹೆಸರನ್ನು ಇಟ್ಟಿದ್ದೇವೆ. ಇದನ್ನು ಕಾಪಾಡುವ ಜವಾಬ್ದಾರಿ ಎಲ್ಲರದ್ದೂ ಎಂದರು.

ನಮ್ಮ ಗ್ರಾಮಾಭಿವೃದ್ಧಿ ಯೋಜನೆಯಿಂದ ನಾವು ಸ್ವ ಸಹಾಯ ಗುಂಪುಗಳನ್ನು ರಚನೆ ಮಾಡಿ ನಮಗೆ ನಾವೇ ಸಹಾಯ ಮಾಡಿಕೊಳ್ಳುತ್ತೇವೆ. ರಾಜ್ಯದಲ್ಲಿ ಸುಮಾರು 45 ಲಕ್ಷ ಜನ ಸಂಘದ ಸದಸ್ಯರಿದ್ದಾರೆ. ವಾರಕ್ಕೊಮ್ಮೆ ಪ್ರತಿಯೊಬ್ಬ ಸದಸ್ಯರು 10 ರೂ. ಉಳಿತಾಯ ಮಾಡಿದ್ದು 2 ಸಾವಿರ ಕೋಟಿ ಉಳಿತಾಯ ಹಣ ಅವರ ಖಾತೆಯಲ್ಲಿದೆ. ಎಲ್ಲರೂ ಕಾಯಕವಂತರಾಗಬೇಕು. ಆಗ ಜೀವನ ನೆಮ್ಮದಿಯಾಗಿರುತ್ತದೆ ಎಂದು ಹೇಳಿದರು. ಈ ಕ್ಷೇತ್ರದ ಶಾಸಕರು ಒಳ್ಳೆಯ ತೆರನಾಗಿ ಕೆಲಸಗಳನ್ನು ಮಾಡುತ್ತಿದ್ದಾರೆ. ಅವರು ಇನ್ನೂ ಹೆಚ್ಚಿಗೆ ಕೆಲಸಮಾಡುವಂತಾಗಲಿ ಎಂದು ಆಶೀರ್ವದಿಸಿದರು.

ಇದನ್ನೂ ಓದಿ:ಅಭಿವೃದ್ಧಿಗೆ ವೇದಿಕೆಯಾಗಲಿ ಹೊಸ ಭವನ!

Advertisement

ಶಾಸಕ ಮಹಾಂತೇಶ ದೊಡ್ಡಗೌಡರ ಮಾತನಾಡಿ, ತಾವುಗಳು ಈ ಭಾಗದಲ್ಲಿ ಗೃಹ ಬಳಕೆಯ ವಸ್ತುಗಳನ್ನು ತಯಾರಿಸುವ, ಮಾರಾಟ ಮಾಡುವ ವ್ಯವಸ್ಥೆ ಕಲ್ಪಿಸಿದರೆ ಅದಕ್ಕೆ ಬೇಕಾಗುವ ಗೋಡೌನ್‌ ಮುಂತಾದ ಸೌಲಭ್ಯಗಳ ವ್ಯವಸ್ಥೆ ಮಾಡಕೊಡುತ್ತೇವೆಂದು ಶ್ರೀಗಳಲ್ಲಿ ಮನವಿ ಮಾಡಿದರು.

ಹಿರೇನಂದಿಹಳ್ಳಿಯ ಪ್ರಣವಾನಂದ ಸ್ವಾಮಿಗಳು ಆಶೀರ್ವಚನ ನೀಡಿದರು. ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಚಂದ್ರಗೌಡ ಪಾಟೀಲ, ಪ್ರಾದೇಶಿಕ ನಿರ್ದೇಶಕ ದುಗ್ಗೇಗೌಡ, ಜಿ ಪಂ ಸದಸ್ಯೆ ಬಸವ್ವ ಕೋಲಕಾರ, ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಜಗದೀಶ ಹಾರುಗೋಪ್ಪ, ಎಪಿಎಮ್‌ಸಿ ಸದಸ್ಯ ಅಜ್ಜಪ್ಪ ನೇಗಿನಹಾಳ, ಯುನಿಯನ್‌ ಬ್ಯಾಂಕ್ ಪ್ರಬಂಧಕ ಹರೀಶ ರಾಹುತ, ಪಿ ಎಸ್‌ ಆಯ್‌ ದೇವರಾಜ ಉಳ್ಳಾಗಡ್ಡಿ, ಕೃಷಿ ಅಧಿ ಕಾರಿ ಪ್ರಭಾಕರ ಇಟ್ನಾಳ, ಗ್ರಾಮಾಭಿವೃದ್ದಿಯ ಎಲ್ಲ ಸಿಬ್ಬಂದಿಗಳು, ಗ್ರಾಮಸ್ಥರು, ಗ್ರಾ ಪಂ ಸದಸ್ಯರು, ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next