ಬೆಳಗಾವಿ: ವೀರಶೈವ ಸಮಾಜದವರು ಯಾವುದೇ ಕಾರಣಕ್ಕೂ ನಮ್ಮ ಕೈ ಬಿಡುವುದಿಲ್ಲ. ಈ ವಿಶ್ವಾಸ ನಮಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು. ಬೆಳಗಾವಿಯಲ್ಲಿ ಭಾನುವಾರ ಸುದ್ದಿಗಾರರ ಜತೆ ಮಾತನಾಡಿ, ನಾನೇ ಮುಖ್ಯಮಂತ್ರಿಯಾಗಿ ಮುಂದುವರಿಯಬೇಕೆಂದು ಅನೇಕ ಮಠಾಧೀಶರು ಪ್ರಯತ್ನ ಮಾಡಿದ್ದರು. ಅವರ ಪ್ರಯತ್ನದಿಂದ ನಾನು ಸಿಎಂ ಆಗಿರುವಾಗ ನಮ್ಮನ್ನು ಕೈ ಬಿಡುತ್ತಾರೆ ಎಂಬುದು ಸುಳ್ಳು.
ವೀರಶೈವ ಸಮುದಾಯದವರಲ್ಲಿ ಸಣ್ಣ ಪುಟ್ಟ ವ್ಯತ್ಯಾಸಗಳಿದ್ದರೂ ಅದೆಲ್ಲವನ್ನೂ ಬದಿಗಿಟ್ಟು 15 ಜನರನ್ನು ಬೆಂಬಲಿಸಿ ಗೆಲ್ಲಿಸಿ ತರಬೇಕು. ಎಲ್ಲ ಕಡೆ ಸಮಾಜದ ಜನರ ಬೆಂಬಲ ನಮ್ಮ ಕಡೆ ಇರುವುದರಿಂದ ಯಾವ ಸಮಸ್ಯೆಯೂ ಆಗುವುದಿಲ್ಲ ಎಂಬ ವಿಶ್ವಾಸ ಇದೆ ಎಂದರು.
ಉಪಚುನಾವಣೆಯಲ್ಲಿ ಎಲ್ಲ 15 ಕ್ಷೇತ್ರಗಳಲ್ಲಿ ನಾವು ಜಯ ಗಳಿಸುತ್ತೇವೆ. ಲೋಕಸಭಾ ಚುನಾವಣೆ ಸಮಯದಲ್ಲಿ ಸಹ ಬಿಜೆಪಿ 21ರಿಂದ 22 ಸ್ಥಾನ ಗೆಲ್ಲುತ್ತದೆ ಎಂದು ಹೇಳಿದ್ದೆ. ಆದರೆ ನಮ್ಮ ನಿರೀಕ್ಷೆ ಮೀರಿ 25 ಸಂಸದರು ಆಯ್ಕೆಯಾದರು. ಈಗಲೂ ಡಿ.9ರಂದು ನೀವೇ ನೋಡುತ್ತೀರಿ. ದಾಖಲೆಯ ಜಯ ನಮಗೆ ಬರಲಿದೆ ಎಂದರು.
ಉಪಚುನಾವಣೆ ಹಿನ್ನೆಲೆಯಲ್ಲಿ ನಿರೀಕ್ಷೆ ಮಾಡದ ಪ್ರಮಾಣದಲ್ಲಿ ಅಥಣಿ, ಕಾಗವಾಡ, ಗೋಕಾಕದಲ್ಲಿ ಪ್ರಚಾರ ಸಭೆ ಆಗಿದೆ. ಜಾರಕಿಹೊಳಿ ಕ್ಷೇತ್ರದಲ್ಲಿ ಅತಿ ದೊಡ್ಡ ಪ್ರಚಾರ ಸಭೆ ಮಾಡಲಾಯಿತು. ಅದು ನನಗೆ ಪ್ರಚಾರದ ಸಭೆ ಎನ್ನುವುದಕ್ಕಿಂತ ವಿಜಯೋತ್ಸವದ ಸಭೆ ಎಂಬಂತೆ ಕಂಡುಬಂತು. ಡಿ.2ರಂದು ಮತ್ತೂಮ್ಮೆ ಈ ಜಿಲ್ಲೆಗೆ ಬರುತ್ತೇನೆ. ಆಗ ನಮ್ಮ ಗೆಲುವಿನ ಅಂತರ ಇನ್ನಷ್ಟು ಹೆಚ್ಚಾಗಲಿದೆ ಎಂದರು.
ಅಥಣಿ, ಕಾಗವಾಡ, ಗೋಕಾಕದಲ್ಲಿ ಸೇರಿ ನಮಗೆ ಎಲ್ಲಿಯೂ ಬಂಡಾಯದ ಸಮಸ್ಯೆ ಇಲ್ಲ. ನಮ್ಮದು ಬಿಜೆಪಿ ವಿರುದ್ಧ ಹೋರಾಟ ಅಲ್ಲ ರಮೇಶ್ ವಿರುದ್ಧ ಹೋರಾಟ ಎನ್ನುವ ಸತೀಶ ಜಾರಕಿಹೊಳಿಗೆ ಡಿ.9ರಂದು ಫಲಿತಾಂಶ ಬಂದ ಮೇಲೆ ಯಾರ ಹೋರಾಟ ಯಾರ ವಿರುದ್ಧ ಎಂಬುದು ಗೊತ್ತಾಗುತ್ತದೆ. ಅಲ್ಲಿಯವರೆಗೆ ಕಾದು ನೋಡಿ. ಉಮೇಶ್ ಕತ್ತಿಗೆ ಸಚಿವ ಸ್ಥಾನ ಕೊಡದಿದ್ದರೆ ನಮ್ಮನ್ನು ಬಿಡಬೇಕಲ್ಲ ಎಂದರು.
ಪಾಟೀಲ ಗೆಲ್ಲಿಸದಿದ್ರೆ ಬಣಕಾರಗೆ ಮಾಡಿದ ಅಪಮಾನ: ಮುಂದಿನ ಮೂರೂವರೆ ವರ್ಷ ಯಡಿಯೂರಪ್ಪ ಮುಂದುವರಿಯ ಬೇಕು ಎಂದರೆ ಬಿ.ಸಿ. ಪಾಟೀಲ ಅವರನ್ನು ಗೆಲ್ಲಿಸಬೇಕು. ಬಿ.ಸಿ. ಪಾಟೀಲ ಅವರನ್ನು 35 ಸಾವಿರ ಅಂತರದಲ್ಲಿ ಗೆಲ್ಲಿಸದಿದ್ದರೆ ಅದು ಯು.ಬಿ. ಬಣಕಾರ ಅವರಿಗೆ ಮಾಡಿದ ಅಪಮಾನ. ಎಲ್ಲರೂ ಕಮಲಕ್ಕೇ ಮತ ಹಾಕಿರುವುದನ್ನು ನೋಡಿ ಕಾಂಗ್ರೆಸ್ ಪಕ್ಷದ ಏಜೆಂಟರು ಮತ ಎಣಿಕೆ ಕೇಂದ್ರದಿಂದ ಓಡಿ ಹೋಗ ಬೇಕು. ಹಾಗೆ ಬಿಜೆಪಿ ಪರ ಮತದಾನ ಮಾಡಬೇಕು ಎಂದು ಸಿಎಂ ಯಡಿಯೂರಪ್ಪ ಹೇಳಿದರು.