Advertisement

Veerashaiva Lingayat ಧರ್ಮವು ವಿಶ್ವಮಾನ್ಯ ಮೌಲ್ಯಗಳನ್ನು ಹೊಂದಿದೆ: ವಿ. ಸೋಮಣ್ಣ

10:11 PM Oct 03, 2024 | Team Udayavani |

ನರೇಗಲ್(ಗದಗ): ವೀರಶೈವ ಲಿಂಗಾಯತ ಧರ್ಮ ಎನ್ನುವುದು ಜಾತಿಯಲ್ಲ. ಅದೊಂದು ತತ್ವ ಸಿದ್ಧಾಂತ ಹೊಂದಿದ ಧರ್ಮ ಮತ್ತು ಸಂಸ್ಕೃತಿ. ತನ್ನದೇ ಆದ ಇತಿಹಾಸ, ಪರಂಪರೆಯನ್ನು ಹೊಂದಿದ ವೀರಶೈವ ಲಿಂಗಾಯತ ಧರ್ಮವು ವಿಶ್ವಮಾನ್ಯ ಮೌಲ್ಯಗಳನ್ನು ಹೊಂದಿದೆ ಎಂದು ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಗುರುವಾರ(ಅ3) ಹೇಳಿದರು.

Advertisement

ಜಿಲ್ಲೆಯ ರೋಣ ತಾಲೂಕಿನ ಅಬ್ಬಿಗೇರಿ ಗ್ರಾಮದ ಶ್ರೀ ಅನ್ನದಾನೇಶ್ವರ ಪ್ರೌಢಶಾಲೆಯ ಆವರಣದಲ್ಲಿ ನಿರ್ಮಿಸಿದ ಮಾನವ ಧರ್ಮ ಮಂಟಪದಲ್ಲಿ ಹಮ್ಮಿಕೊಂಡಿದ್ದ 33ನೇ ವರ್ಷದ ದಸರಾ ಧರ್ಮ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಾಲಕಾಲಕ್ಕೆ ವಿಕಾಸ ಹೊಂದುತ್ತ ಬಂದಿರುವ ವೀರಶೈವ ಲಿಂಗಾಯತ ಧರ್ಮವು ಇತ್ತೀಚೆಗೆ ಒಳಪಂಗಡಗಳ ಹೆಸರಿನಲ್ಲಿ ಕವಲು ದಾರಿ ಹಿಡಿದಿರುವುದು ವಿಷಾದದ ಸಂಗತಿಯಾಗಿದೆ. ವೀರಶೈವ ಧರ್ಮಕ್ಕೆ ಇತಿಹಾಸವಿದೆ. ಆದರೆ ಅಧ್ಯಯನ ಇಲ್ಲ. ಸಂಸ್ಕೃತಿ ಮತ್ತು ದರ್ಶನವಿದೆ, ಮಾರ್ಗದರ್ಶನವಿಲ್ಲ. ಅನುಭವವಿದೆ, ಅನುಷ್ಠಾನವಿಲ್ಲ. ಪರಂಪರೆಯಿದೆ, ಪರಿಣಾಮವಿಲ್ಲ. ಸಿದ್ಧಾಂತವಿದೆ, ಸಾಧನೆಗಳಿಲ್ಲ. ದೊಡ್ಡ ಸಮಾಜವಿದೆ, ಸಂಘಟನೆ ಇಲ್ಲ. ಈ ಹಿನ್ನೆಲೆಯಲ್ಲಿ ನಾವೆಲ್ಲ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದು ಹೇಳಿದರು.

ಭವಿಷ್ಯದಲ್ಲಿ ಯುವ ಪೀಳಿಗೆಗೆ ಮಾರ್ಗದರ್ಶನ ಮಾಡಬೇಕಿರುವವರು ಒಳಪಂಗಡಗಳ ಹೆಸರಿನಲ್ಲಿ ಸಮಾಜವನ್ನು ಪ್ರತ್ಯೇಕಿಸಲು ಹೊರಟಿರುವುದು ಒಂದು ದೊಡ್ಡ ದುರಂತವಾಗಿದೆ. ವೀರಶೈವ ಲಿಂಗಾಯತ ಧರ್ಮದ ಒಳಪಂಗಡಗಳಿಗೆ ಅನ್ಯಾಯವಾಗಿರುವುದು ನಿಜ. ಎಲ್ಲರೂ ಸಂಘಟಿತರಾಗಿ ಧ್ವನಿ ಎತ್ತುವ ಮೂಲಕ ಒಳಂಗಡಗಳಿಗೆ ಸಿಗಬೇಕಾದ ಸವಲತ್ತುಗಳನ್ನು ಒದಗಿಸಿಕೊಡಬೇಕು. ಸಮಾಜದ ಮಠಾಧಿಪತಿಗಳು, ಹಿರಿಯರು ವೀರಶೈವ ಧರ್ಮವನ್ನು ಒಂದಾಗಿ ಮುನ್ನಡೆಯುವಂತೆ ಮಾಡಬೇಕಿದೆ ಎಂದರು.

ಪಂಚಾಚಾರ್ಯರು, ಶಿವಶರಣರು ವೀರಶೈವ ಧರ್ಮದ ಮೂಲಕ ಮಾನವ ಮಹಾದೇವನಾಗಬಲ್ಲ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ರಂಭಾಪುರಿ ಪೀಠದ ಡಾ| ವೀರಸೋಮೇಶ್ವರ ಶ್ರೀಗಳ ದಸರಾ ಧರ್ಮ ಸಮ್ಮೆಳನ ಜನರಲ್ಲಿ ಅರಿವಿನ ಪ್ರಜ್ಞೆ ಮೂಡಿಸುತ್ತದೆ. ಜಾತಿಗಿಂತ ನೀತಿ, ತತ್ವಕ್ಕಿಂತ ಆಚರಣೆ ಮುಖ್ಯ ಎನ್ನುವುದು ಧರ್ಮದ ಮೂಲಮಂತ್ರ. ಧರ್ಮಗಳು ಹಲವು ಆದರೆ, ಎಲ್ಲವೂ ಮಾನವ ಕಲ್ಯಾಣವನ್ನೆ ಪ್ರತಿಪಾದಿಸಿದೆ. ವೀರಶೈವ ಧರ್ಮ ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೆ ವಿಶ್ವಕ್ಕೆ ಶಾಂತಿ ಎಂದು ಸಾರಿದ ಧರ್ಮವಾಗಿದೆ ಎಂದರು.

Advertisement

ಮಾನವ ಧರ್ಮಕ್ಕೆ ಜಯವಾಗಲಿ ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂಬ ಸಂದೇಶ ಕೊಟ್ಟ ಕೀರ್ತಿ ಬಾಳೆಹೊನ್ನೂರು ರಂಭಾಪುರಿ ಪೀಠಕ್ಕೆ ಸಲ್ಲುತ್ತದೆ. ಶ್ರೀ ರಂಭಾಪುರಿ ಜಗದ್ಗುರುಗಳ ದಸರಾ ಧರ್ಮ ಸಮ್ಮೇಳನ ಉದ್ಘಾಟನೆ ಮಾಡಿದ ಸೌಭಾಗ್ಯ ನನ್ನ ಪಾಲಿಗೆ ಪ್ರಾಪ್ತವಾಗಿರುವುದ ಗುರು ಹಿರಿಯರ ಆಶೀರ್ವಾದ ಎಂದು ಹರ್ಷ ವ್ಯಕ್ತಪಡಿಸಿದರು.

ಸಮಾಜದ ವೈರುಧ್ಯಗಳನ್ನು ತಿದ್ದಿ ತೀಡಿ ಸನ್ಮಾರ್ಗದಲ್ಲಿ ಜನ ಸಮುದಾಯವನ್ನು ಕೊಂಡೊಯ್ಯುವಲ್ಲಿ ಇಂಥ ಸಮಾರಂಭಗಳ ಅವಶ್ಯಕತೆ ಬಹಳಷ್ಟಿದೆ. ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳ ದಸರಾ ಮಹೋತ್ಸವ ನಡೆದಿರುವುದನ್ನು ನಾನು ಮರೆಯುವಂತಿಲ್ಲ. ಶ್ರೀ ರಂಭಾಪುರಿ ಧರ್ಮ ಪೀಠದ ದಸರಾ ಮೈಸೂರಿನ ದಸರಾದಷ್ಟೇ ಪ್ರಸಿದ್ಧವಾದುದು. ಪ್ರತಿ ವರುಷ ಈ ದಸರಾ ಮಹೋತ್ಸವ ರಾಜ್ಯದ ಬೇರೆ ಬೇರೆ ಪ್ರಾಂತ ಪ್ರದೇಶಗಳಲ್ಲಿ ವೈಭವದಿಂದ ಜರುಗುತ್ತಾ ಬರುತ್ತಿದೆ. ರೋಣ ತಾಲೂಕಿನ ಅಬ್ಬಿಗೇರಿ ಗ್ರಾಮದಲ್ಲಿ ಜರುಗುತ್ತಿರುವ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನ ಅತ್ಯಂತ ಯಶಸ್ವಿಯಾಗಿ ಜರುಗಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದರು.

ಶಾಸಕ ಜಿ.ಎಸ್. ಪಾಟೀಲ ಮಾತನಾಡಿ, ಗದಗ-ಕೋಟುಮಚಗಿ-ನರೇಗಲ್-ಗಜೇಂದ್ರಗಡ ಮಾರ್ಗವಾಗಿ ಇಲಕಲ್ ನಲ್ಲಿ ಹಾದು ಹೋಗುವ ವಾಡಿ ಮಾರ್ಗಕ್ಕೆ ರೈಲು ಮಾರ್ಗ ಜೋಡಿಸುವ ಕೆಲಸ ಮಾಡಬೇಕು. ಇದರಿಂದ ರೋಣ ಹಾಗೂ ಗಜೇಂದ್ರಗಡ ತಾಲೂಕಿನ ಗ್ರಾಮಗಳ ರೈತರಿಗೆ ಬಹಳಷ್ಟು ಅನುಕೂಲವಾಗಲಿದೆ ಎಂದು ವಿನಂತಿಸಿದರು. ಅಬ್ಬಿಗೇರಿಯಂತಹ ಸಣ್ಣ ಗ್ರಾಮದಲ್ಲಿ ಇಂತಹ ದೊಡ್ಡ ದಸರಾ ಸಮ್ಮೇಳನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಎಲ್ಲರೂ ಕೂಡಿ ಯಶಸ್ವಿಗೊಳಿಸೋಣ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next