Advertisement

ವೀರಶೈವರು-ಲಿಂಗಾಯತರು ಬೇರೆ ಅಲ್ಲ

02:27 PM Aug 06, 2018 | |

ದಾವಣಗೆರೆ: ವೀರಶೈವ ಧರ್ಮ ಸದಾಚಾರ, ಸಂಸ್ಕಾರ, ಸಂಸ್ಕೃತಿಗೆ ವಿಶೇಷ ಆದ್ಯತೆ ಕೊಟ್ಟಿದೆ ಎಂದು ಬಾಳೆಹೊನ್ನೂರಿನ ಶ್ರೀ ರಂಭಾಪುರಿ ಜಗದ್ಗುರು ಡಾ| ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ತಿಳಿಸಿದರು.

Advertisement

ಭಾನುವಾರದಿಂದ ರೇಣುಕ ಮಂದಿರದಲ್ಲಿ ಪ್ರಾರಂಭವಾದ 23ನೇ ಆಷಾಢ ಮಾಸದ ಇಷ್ಟಲಿಂಗ ಮಹಾಪೂಜೆ ಹಾಗೂ ಜನಜಾಗೃತಿ ಧರ್ಮ ಸಮಾವೇಶದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಜಗದ್ಗುರು ರೇಣುಕಾಚಾರ್ಯರು ಧಾರ್ಮಿಕ ಮೌಲ್ಯಗಳ ಜೊತೆಗೆ ಸಾಮಾಜಿಕ ಮೌಲ್ಯಗಳನ್ನು ಎತ್ತಿ ಹಿಡಿದು ಸಂರಕ್ಷಿಸಿದ್ದನ್ನು ಮರೆಯಲಾಗದು ಎಂದರು.
 
ಜೀವನದಲ್ಲಿ ಬರೀ ಸಂಪತ್ತು ಗಳಿಸುವುದಷ್ಟೇ ಮನುಷ್ಯನ ಗುರಿ ಆಗಬಾರದು. ಸಂಪತ್ತಿನ ಜೊತೆಗೆ ಒಂದಿಷ್ಟು ಜ್ಞಾನ ಸಂಪಾದಿಸಿ ಬಾಳಿದರೆ ಬದುಕು ಸಾರ್ಥಕಗೊಳ್ಳುತ್ತದೆ. ಬೆಳೆಯ ಸುರಕ್ಷತೆಗೆ ಕಳೆಯನ್ನು ಕೀಳುವಂತೆ ಆತ್ಮೋನ್ನತಿಗಾಗಿ ದುರ್ಗುಣಗಳನ್ನು ನಿವಾರಿಸಿಕೊಳ್ಳುತ್ತಿರಬೇಕು ಎಂದು ತಿಳಿಸಿದರು.

ಬರೀ ದೊಡ್ಡ ದೊಡ್ಡ ಮಾತುಗಳನ್ನು ಆಡುವುದರಿಂದ ಮನುಷ್ಯ ಪ್ರಬುದ್ಧನಾಗುವುದಿಲ್ಲ. ಸದಾ ಸಣ್ಣ ಸಣ್ಣ ವಿಷಯಗಳನ್ನು ಅರ್ಥ ಮಾಡಿಕೊಳ್ಳುವುದನ್ನು ಕಲಿತಾಗ ಮನುಷ್ಯ ಪ್ರಬುದ್ಧನಾಗಿ ಬೆಳೆಯಲು ಸಾಧ್ಯವಾಗುತ್ತದೆ. ಜೀವನದಲ್ಲಿ ಅಡೆತಡೆಗಳು ಬಂದಾಗ ದಾರಿಯನ್ನು ಬದಲಿಸಬೇಕೆ ವಿನಃ ನಾವು ಕಣ್ಣಿಟ್ಟಿರುವ ಮಹತ್ವದ ಗುರಿಯನ್ನಲ್ಲ ಎಂದು ಭಗವತ್ಪಾದರು ತಿಳಿಸಿದರು.

ಮೊದಲ ದಿನ ಸಮಾವೇಶ ಉದ್ಘಾಟಿಸಿದ ಶಾಸಕ, ಅಖೀಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಮಾತನಾಡಿ, ಕೆಲ ದಿನಗಳ ಹಿಂದೆ ಕೆಲವು ಕುತಂತ್ರ, ಕೆಟ್ಟ ಮನಸ್ಸುಗಳು ಸಮಾಜವನ್ನು ಒಡೆಯುವ ದುರುದ್ದೇಶದಿಂದ ವೀರಶೈವ-ಲಿಂಗಾಯತ ಬೇರೆ ಬೇರೆ ಎಂದು ಹೇಳುತ್ತಿದ್ದಾಗ ಒಂದು ರೀತಿಯ ತಳಮಳ
ಉಂಟಾಗಿತ್ತು. ಆದರೂ, ವೀರಶೈವ ಮಹಾಸಭಾ ವೀರಶೈವ-ಲಿಂಗಾಯತ ಒಂದೇ ಹೇಳುತ್ತಲೇ ಬರುತ್ತಿತ್ತು. 

ಆಗ ರಂಭಾಪುರಿ ಜಗದ್ಗುರುಗಳು ಸಹ ಗಟ್ಟಿಯಾಗಿ ಮಾತನಾಡಿ ಸಮಾಜ ಒಡೆಯುವ ಕೆಲಸ ಮಾಡಿದವರನ್ನು ಚೆನ್ನಾಗಿಯೇ ಬಗ್ಗು ಬಡಿದರು ಎಂದು ಸ್ಮರಿಸಿದರು.

Advertisement

ಹಳೆ ಮೈಸೂರು ಭಾಗದಲ್ಲಿ ಲಿಂಗಾಯತರು ಅನ್ನುವುದೇ ಇಲ್ಲ. ವೀರಶೈವರು ಎನ್ನುತ್ತಾರೆ. ದಾವಣಗೆರೆಯ ಈ ಭಾಗದಲ್ಲೇ ವೀರಶೈವರು- ಲಿಂಗಾಯತರು ಎನ್ನುತ್ತಾರೆ. ವೀರಶೈವರು-ಲಿಂಗಾಯತರು ಬೇರೆ ಎಂದು ಸಮಾಜ ಇಬ್ಭಾಗ ಮಾಡುವ ಯತ್ನ ಮಾಡಿದವರಿಗೆ ಕಳೆದ ಚುನಾವಣೆಯಲ್ಲಿ ಪಾಠ ಕಲಿಸಲಾಗಿದೆ. 

ವೀರಶೈವರು-ಲಿಂಗಾಯತರು ಬೇರೆ ಎನ್ನುವುದು ನಿಂತಿದೆ. ಆದರೂ, ನಮ್ಮ ದಾವಣಗೆರೆ ಜಿಲ್ಲೆಯವರೇ ಚಾಮರಾಜನಗರದಲ್ಲಿ ಲಿಂಗಾಯತ ಕಚೇರಿ ಪ್ರಾರಂಭಿಸಲು ಹೋಗಿದ್ದರು. ಅಲ್ಲಿನ ವೀರಶೈವರು ಒಪ್ಪಲಿಲ್ಲ. ಪೊಲೀಸರು ಅವರನ್ನು ಬಂಧಿಸಿದ ನಂತರ ಕಚೇರಿ ಪ್ರಾರಂಭಿಸಲಾಯಿತು ಎಂದು ತಿಳಿಸಿದರು.

ವೀರಶೈವರು- ಲಿಂಗಾಯತರು ಬೇರೆ ಬೇರೆ ಎಂದು ನಾವು ನಾವೇ ಹೊಡೆದಾಡುವುದರಿಂದ ಏನನ್ನೂ ಸಾಧಿಸಲು ಸಾಧ್ಯವೇ ಇಲ್ಲ. ವೀರಶೈವರು-ಲಿಂಗಾಯತರು ಒಂದಾದರೆ ಯಾರೂ ಸಹ ನಮ್ಮನ್ನು ಎದುರಿಸಲು ಸಾಧ್ಯವೇ ಇಲ್ಲ
ಎಂಬುದನ್ನು ನಮ್ಮನ್ನು ಒಡೆಯುವವರು ಅರ್ಥ ಮಾಡಿಕೊಳ್ಳಬೇಕು. ವೀರಶೈವರು-ಲಿಂಗಾಯತರು ಒಂದಾಗಿ ವೀರಶೈವ ಮುಖಂಡತ್ವ ಮತ್ತೆ ತರೋಣ ಎಂದು ಆಶಿಸಿದರು.

ಅಖೀಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಅಥಣಿ ಎಸ್‌. ವೀರಣ್ಣ ಮಾತನಾಡಿ, ವೀರಶೈವರು-ಲಿಂಗಾಯತರು ಎರಡು ಒಂದೇ. ಆದರೂ, ಬೇರೆ ಬೇರೆ ಎಂಬ ವಿಚಾರ ಕೆಲ ದಿನಗಳ ಹಿಂದೆ ಹುಟ್ಟಿಕೊಂಡಿತ್ತು. ಅದು ಬಹುತೇಕ ನಿಂತೇ ಹೋಗಿದೆ. ವೀರಶೈವರು-ಲಿಂಗಾಯತರು ಬೇರೆ ಬೇರೆ ಎನ್ನುವ ಕೂಗು ಕೇಳಿ ಬರುತ್ತಿದ್ದಂತಹ ಕ್ಲಿಷ್ಟ ಪರಿಸ್ಥಿತಿಯಲ್ಲಿ ಶಾಮನೂರು ಶಿವಶಂಕರಪ್ಪನವರ ಮೇಲೆ ವಿಪರೀತವಾದ ಮಾನಸಿಕ ಒತ್ತಡ ಇತ್ತು.

ಅನೇಕರು ತಮಗೆ ಫೋನ್‌ ಮಾಡಿ, ಲಿಂಗಾಯತರು ಎಂದು ಹೇಳಿಕೆ ನೀಡುವಂತೆ ಒತ್ತಾಯಿಸುತ್ತಿದ್ದರು. ಆದರೂ, ಶಾಮನೂರು ಶಿವಶಂಕರಪ್ಪನವರು ವೀರಶೈವರು-ಲಿಂಗಾಯತರು ಒಂದೇ ಎಂಬುದಕ್ಕೆ ಗಟ್ಟಿಯಾಗಿ ನಿಂತರು. ಅವರೇನಾದರೂ ಇಲ್ಲದೇ ಹೋಗಿದ್ದರೆ ಸಮಾಜ ಒಡೆದು ಹೋಗುತ್ತಿತ್ತು ಎಂದು ಅನೇಕರು ಹೇಳಿದ್ದಾರೆ ಎಂದು ತಿಳಿಸಿದರು.

ವೀರಶೈವರು-ಲಿಂಗಾಯತರು ಬೇರೆ ಬೇರೆ ಎನ್ನುವ ಕೂಗು ಕೇಳಿ ಬರುತ್ತಿದ್ದಂತಹ ಸಂದರ್ಭದಲ್ಲಿ ರಂಭಾಪುರಿ ಜಗದ್ಗುರು ಮುಖದಲ್ಲೂ ಚಿಂತೆಯ ಕಾರ್ಮೋಡ ಇತ್ತು. ಈಗ ಅದು ದೂರ ಸರಿದಿದೆ. ವೀರಶೈವರು-ಲಿಂಗಾಯತರು ಬೇರೆ ಬೇರೆ ಎನ್ನುವವರಿಗೆ ಪೆಟ್ಟು ಬಿದ್ದಿರಬಹುದು ಇಲ್ಲದೇ ಇರಬಹುದು. ಆದರೆ ವೀರಶೈವರು-ಲಿಂಗಾಯತರು ಒಂದೇ ಎಂದು ಬಲವಾಗಿ ಹೇಳಿದರು. 

ಮುಂದಿನ ಅವಧಿಗೆ ಶಾಮನೂರು ಶಿವಶಂಕರಪ್ಪ ಅವರೇ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾಗಬೇಕು ಎಂದು ಮನವಿ ಮಾಡಿದರು. ಅಕ್ಕಿಆಲೂರಿನ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಬಹು ಜನ್ಮದ ಪುಣ್ಯದ ಫಲವಾಗಿ ಮಾನವರಾಗಿ ಹುಟ್ಟಿದ್ದೇವೆ. ಅರಿವು ಆಚಾರದಿಂದ ಬಾಳಿ ಬದುಕಲು ಗುರು ಹಾಗೂ ಗುರಿ ಇರಲೇಬೇಕು ಎಂದು ತಿಳಿಸಿದರು. ಅವರಗೊಳ್ಳ ಪುರವರ್ಗ ಹಿರೇಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮಿಗಳು ನೇತೃತ್ವ ವಹಿಸಿದ್ದರು. ನಗರಪಾಲಿಕೆ ಸದಸ್ಯ ದಿನೇಶ್‌ ಕೆ. ಶೆಟ್ಟಿ. ಆಯುಕ್ತ ಮಂಜುನಾಥ್‌ ಬಳ್ಳಾರಿ, ಮೋತಿ ಗುರುಪ್ರಸಾದ್‌, ಕಮಲಾಕ್ಷಿ ಐರಣಿ ಚಂದ್ರಶೇಖರ್‌ ಇತರರು ಇದ್ದರು. 

ರಾಜ್ಯೋತ್ಸವ ಪ್ರಶಸ್ತಿ ವಿಜೇತ ಗದುಗಿನ ಗಾನಭೂಷಣ ವೀರೇಶ ಕಿತ್ತೂರು ಸಂಗೀತ ಸೇವೆ ನಡೆಸಿಕೊಟ್ಟರು. ಶ್ರೀಮದ್ವೀರಶೈವ ಸದೊಧನ ಸಂಸ್ಥೆ ಜಿಲ್ಲಾ ಘಟಕದ ಅಧ್ಯಕ್ಷ ದೇವರಮನೆ ಶಿವಕುಮಾರ ಸ್ವಾಗತಿಸಿದರು. ಕೆ.ಎಂ.ಶಿವಯೋಗಿ ನಿರೂಪಿಸಿದರು. 

ಜನ ಜಾಗೃತಿ ಧರ್ಮ ಸಮಾರಂಭದಲ್ಲಿಂದು…
ಸಾನ್ನಿಧ್ಯ: ಶ್ರೀಮದ್‌ ರಂಭಾಪುರಿ ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರ, ನೇತೃತ್ವ: ಯಡಿಯೂರು ಕ್ಷೇತ್ರದ ಶ್ರೀ ರೇಣುಕ ಶಿವಾಚಾರ್ಯ ಸ್ವಾಮೀಜಿ, ಉಪದೇಶಾಮೃತ: ಶ್ರೀ ಡಾ| ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಸಂಪತ್ತು ಸಂರಕ್ಷಕ ಗೌರವ ಶ್ರೀರಕ್ಷೆ ಪುರಸ್ಕೃತರು: ಎ. ಕಿರಣ್‌ಕುಮಾರ್‌, ಅತಿಥಿ: ಶೋಭಾ ಪಲ್ಲಾಗಟ್ಟೆ, ರೇಖಾ ನಾಗರಾಜ್‌, ಬಿ.ಪಿ. ಹರೀಶ್‌, ಎಚ್‌.ಎಸ್‌. ನಾಗರಾಜ್‌, ಸೌಮ್ಯ ಬಸವರಾಜ್‌, ಸ್ಥಳ: ರೇಣುಕ ಮಂದಿರ, ಸಂಜೆ 6.30

Advertisement

Udayavani is now on Telegram. Click here to join our channel and stay updated with the latest news.

Next