ದಾವಣಗೆರೆ: ಜಾತಿ ಗಣತಿಗೆ ಹಿಂದಿನಿಂದಲೂ ವೀರಶೈವ ಲಿಂಗಾಯತ ಮಹಾಸಭಾದ ವಿರೋಧವಿದೆ. ಈಗಲೂ ಅದೇ ನಿಲುವಿಗೆ ಬದ್ಧ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ಶಾಸಕ ಶಾಮನೂರು ಶಿವಶಂಕರಪ್ಪ ತಿಳಿಸಿದರು.
ಸೋಮವಾರ (ಅ.07) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತಿಗಣತಿಗೆ ನಮ್ಮದು ಹಿಂದಿನಿಂದಲೂ ವಿರೋಧ ಇದೆ. ಈಗಲೂ ಅದೇ ನಿಲುವಿಗೆ ಬದ್ಧ ಎಂದರು.
ಸರ್ಕಾರ ಪತನವಾದರೂ ಜಾತಿಗಣತಿ ಮಾಹಿತಿ ಬಹಿರಂಗ ಪಡಿಸಬೇಕು ಎಂದು ಹಿಂದುಳಿದ ವರ್ಗಗಳ ಮುಖಂಡ, ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಯಾರು ಏನೇ ಹೇಳಿದರೂ ಜಾತಿಗಣತಿಗೆ ವಿರೋಧ ಇದೆ ಎಂದ ಅವರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೀಡಿರುವಂತಹ ಬೆಂಬಲದ ಹೇಳಿಕೆಗೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.
ಖಾಸಗಿ ಬಸ್ ನಿಲ್ದಾಣದ ಲೋಕಾರ್ಪಣೆ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಜೆಪಿಯಲ್ಲಿ ಒಂದು ಕಡೆ ಯಡಿಯೂರಪ್ಪ ಬಣ, ಇನ್ನೊಂದು ಕಡೆ ಯತ್ನಾಳ್ ಬಣ ಎಂದು ಇರುವುದು ಜನರು ನೋಡಿದ್ದಾರೆ. ಕಾಂಗ್ರೆಸ್ ನಲ್ಲಿ ಅಂತಹದ್ದು ಯಾವುದೂ ಇಲ್ಲ. ನಮ್ಮದು ಶಿಸ್ತಿನ ಪಕ್ಷ ಎಂದರು.
ದಾವಣಗೆರೆಯ ಮಾಜಿ ಎಂಪಿ ಸಿದ್ದೇಶ್ವರ ಅವರು ರವೀಂದ್ರನಾಥ್ ಬಗ್ಗೆ ಏನೇನೋ ಮಾತನಾಡಿದ್ದಾರೆ. ಹಿರಿಯರು ಎಂಬ ಗೌರವವೂ ಇಲ್ಲದಂತೆ ಮಾತನಾಡಿದ್ದಾರೆ. ನಮ್ಮ ಕಾಂಗ್ರೆಸ್ ನಲ್ಲಿ ಆ ರೀತಿ ಮಾತನಾಡುವುದಿಲ್ಲ ಎಂದರು.
ಬಿಜೆಪಿ ಅವಧಿಯಲ್ಲಿ ಖಾಸಗಿ ಬಸ್ ನಿಲ್ದಾಣದ ವಿನ್ಯಾಸ ಬದಲಿಸಿ ಅಂದವನ್ನು ಹಾಳು ಮಾಡಿದ್ದಾರೆ. ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಭೈರತಿ ಬಸವರಾಜ್ ಸಾಕಷ್ಟು ದುಡ್ಡು ಹೊಡೆದರು. ಅದಕ್ಕೆ ಇಲ್ಲಿನ ಬಿಜೆಪಿಯ ಸಂಸದರು ಸಹ ಸಹಕಾರ ನೀಡಿದರು. ನಮ್ಮಲ್ಲಿ ಅಂತದ್ದಕ್ಕೆ ಅವಕಾಶ ಇಲ್ಲ ಎಂದು ತಿಳಿಸಿದರು.