Advertisement

ವೀರಶೈವ-ಲಿಂಗಾಯತ: 10ರಂದು ಮತ್ತೂಂದು ಸಭೆ

09:36 AM Oct 05, 2017 | Team Udayavani |

ಬೆಂಗಳೂರು: ವೀರಶೈವ ಲಿಂಗಾಯತ ಮುಖಂಡರ ಸಮನ್ವಯ ಸಮಿತಿ ಸಭೆ ಮತ್ತೆ ಅಪೂರ್ಣಗೊಂಡಿದ್ದು, ಒಂದಾಗಲು ಅ.10ರಂದು ಮತ್ತೂಂದು ಸಭೆ ಕರೆಯಲು ನಿರ್ಧರಿಸಿದ್ದಾರೆ. ವೀರಶೈವ ಮಹಾಸಭೆ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ನಿವಾಸದಲ್ಲಿ ನಡೆದ ಎರಡೂ ಬಣಗಳ ಮುಖಂಡರ ಸಭೆಯಲ್ಲಿ ಮತ್ತೆ ತಮ್ಮದೇ ವಾದವನ್ನು ಮಂಡಿಸಿದ್ದಾರೆ. ಆದರೆ, ವೀರಶೈವ ಲಿಂಗಾಯತ ಹೆಸರಿನಲ್ಲಿ ಸಮಾಜ ಇಬ್ಭಾಗವಾಗದಂತೆ ತೀರ್ಮಾನ ತೆಗೆದುಕೊಳ್ಳುವ ಆಶಾಭಾವನೆಯೊಂದಿಗೆ ಮತ್ತೂಂದು ಸಭೆ ನಡೆಸಲು
ಎಲ್ಲರೂ ಒಪ್ಪಿಗೆ ಸೂಚಿಸಿದ್ದಾರೆಂದು ತಿಳಿದುಬಂದಿದೆ. 

Advertisement

ಲಿಂಗಾಯತ ಪ್ರತ್ಯೇಕ ಧರ್ಮದ ಪರ ಹೋರಾಡುತ್ತಿರುವ ಸಚಿವ ಎಂ.ಬಿ.ಪಾಟೀಲ್‌ ಬಣದ ಮುಖಂಡರು ವೀರಶೈವ
ಪದ ಸೇರ್ಪಡೆಯಾದರೆ ಧರ್ಮಕ್ಕೆ ಸೃಷ್ಟಿಕರ್ತರಿಲ್ಲ, ಮತ್ತೆ ಕೇಂದ್ರ ಸರ್ಕಾರ ತಿರಸ್ಕರಿಸುತ್ತದೆಂಬ ವಾದವನ್ನು ಮುಂದಿಟ್ಟಿದ್ದಾರೆ. ಆದರೆ, ಪ್ರತಿಯಾಗಿ ವೀರಶೈವ ಮಹಾಸಭೆಯ ಪ್ರಧಾನ ಕಾರ್ಯದರ್ಶಿ ಸಚಿವ ಈಶ್ವರ ಖಂಡ್ರೆ, “ಮೈಸೂರು ಮಹಾರಾಜರ ಕಾಲದಲ್ಲಿ ವೀರಶೈವದ ಬಗ್ಗೆ ಪ್ರಸ್ತಾಪ ಆಗಿದೆ ಎಂದ ಮೇಲೆ ಮೊದಲಿನಿಂದಲೂ ವೀರಶೈವ ಇದೆ. ಅದನ್ನು ಅಲ್ಲಗಳೆಯುವಂತಿಲ್ಲ’ ಎಂದು ಹೇಳಿದ್ದಾರೆ. ಅದಕ್ಕಾಗಿಯೇ  ತಜ್ಞರ ಸಮಿತಿ ರಚನೆ ಮಾಡಿದರೆ, ಅವರು ಯಾವುದಕ್ಕೆ ಮಾನ್ಯತೆ ನೀಡಲು ಸೂಚಿಸುತ್ತಾರೋ ಅದನ್ನು ಮಹಾಸಭೆ ಒಪ್ಪಿಕೊಳ್ಳುತ್ತದೆ. ಸಮಾಜ ಒಡೆಯದಂತೆ ನೋಡಿಕೊಳ್ಳುವುದು ನಮ್ಮ ಕರ್ತವ್ಯ ಎಂದು ಹೇಳಿದ್ದಾರೆ.  ಆದರೆ, ತಜ್ಞರ ಸಮಿತಿ ರಚನೆಗೆ ಲಿಂಗಾಯತ ಮುಖಂಡರು ವಿರೋಧ ವ್ಯಕ್ತಪಡಿಸಿದ್ದಾರೆಂದು ತಿಳಿದು ಬಂದಿದೆ.

ಫೆಬ್ರವರಿಗೂ ಮೊದಲು: ತಜ್ಞರ ಸಮಿತಿ ರಚಿಸಿದರೆ ವಿಳಂಬವಾಗುತ್ತದೆ. ಫೆಬ್ರವರಿ ಹೊತ್ತಿಗೆ ಚುನಾವಣೆ ನೀತಿ ಸಂಹಿತೆ ಬರಲಿದ್ದು, ಅದಕ್ಕಿಂತ ಮುಂಚೆ ಒಮ್ಮತಕ್ಕೆ ಬಂದು, ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವಂತೆ ಮುಖ್ಯಮಂತ್ರಿ ಮೇಲೆ ಒತ್ತಡ ಹೇರಬೇಕೆಂದು ಹೇಳಿದ್ದಾರೆ. ಅಲ್ಲದೇ, ರಾಜ್ಯ ಸರ್ಕಾರವೇ ತಜ್ಞರ ಸಮಿತಿ ರಚಿಸಿ ವರದಿ ಪಡೆಯಲಿ ಎಂದು ವಾದಿಸಿದ್ದಾರೆ. ಆದರೆ, ರಾಜ್ಯ ಸರ್ಕಾರ ತಜ್ಞರ ಸಮಿತಿ ರಚಿಸುವುದಕ್ಕೆ ಮಹಾಸಭೆ ಮುಖಂಡರು ವಿರೋಧ ವ್ಯಕ್ತಪಡಿಸಿದ್ದಾರೆ. ಎರಡೂ ಬಣಗಳ ವಾದಕ್ಕೆ ಪೂರಕವಾಗಿ
ಕಾನೂನು ತಜ್ಞರೊಂದಿಗೆ ಚರ್ಚಿಸಿ ಸೂಕ್ತ ದಾಖಲೆಗಳನ್ನು ಅ.10ರಂದು ನಡೆಯುವ ಸಭೆಗೆ ಒಯ್ಯಬೇಕು. ಕೇಂದ್ರ ಸರ್ಕಾರ ನಿರಾಕರಿಸಿದರೆ ಕಾನೂನು ಹೋರಾಟ ನಡೆಸುವ ಕುರಿತು ಕಾನೂನು ತಜ್ಞರ ಜೊತೆ ಚರ್ಚಿಸಿ ತೀರ್ಮಾನಿಸಬೇಕೆಂದು ಈಶ್ವರ್‌ ಖಂಡ್ರೆ ಸಭೆಗೆ ತಿಳಿಸಿದ್ದಾರೆಂದು ತಿಳಿದು ಬಂದಿದೆ.

ಒಗ್ಗಟ್ಟಿಗೆ ಒಲವು: ಎರಡೂ ಬಣಗಳು ಒಟ್ಟಾಗಿ ಹೋರಾಡಲು ಲಿಂಗಾಯತ ಮುಖಂಡರು ಒಂದು ಹಂತದಲ್ಲಿ ಒಪ್ಪಿಕೊಂಡಿದ್ದಾರೆ. ತಮ್ಮ ಬಣದ ನಿವೃತ್ತ ಐಎಎಸ್‌ ಅಧಿಕಾರಿ ಎಸ್‌.ಎಂ.ಜಾಮದಾರ್‌ ಸಭೆಗೆ ಗೈರಾಗಿದ್ದರಿಂದ ಅ.10ರಂದು ನಡೆಯುವ ಸಭೆಯಲ್ಲಿ ವೀರಶೈವ ಪರ ವಾದವನ್ನು ಅವರಿಗೆ ಮನವರಿಕೆ ಮಾಡಿಕೊಡಲು ಮಹಾಸಭೆ ಪದಾಧಿಕಾರಿಗಳು ನಿರ್ಧರಿಸಿದ್ದಾರೆಂದು ತಿಳಿದು ಬಂದಿದೆ. ಇದಕ್ಕೂ ಮೊದಲು ವೀರಶೈವ ಮಹಾಸಭೆಯ ಪದಾಧಿಕಾರಿಗಳು ಪ್ರತ್ಯೇಕ ಸಭೆ ನಡೆಸಿ ಸಮಾಜದ ಒಗ್ಗಟ್ಟು ಪ್ರದರ್ಶಿಸಲು ನಿರ್ಣಯಿಸಿದ್ದರು. 

ಮೈಸೂರು ಭಾಗದಲ್ಲಿ ಸಿಗದ ಸ್ಪಂದನೆ
ವೀರಶೈವರನ್ನು ಹೊರತುಪಡಿಸಿ ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ ನಡೆಯುತ್ತಿರುವ ಹೋರಾಟಕ್ಕೆ ಹಳೇ ಮೈಸೂರು ಭಾಗದಲ್ಲಿ ನಿರೀಕ್ಷಿತ ಸ್ಪಂದನೆ ದೊರೆಯುತ್ತಿಲ್ಲ ಎನ್ನಲಾಗಿದೆ. ಉತ್ತರ ಕರ್ನಾಟಕದಲ್ಲಿ ಸರಣಿ ಸಮಾವೇಶಗಳನ್ನು ನಡೆಸುತ್ತಿರುವ ಲಿಂಗಾಯತ
ಪ್ರತ್ಯೇಕ ಧರ್ಮ ಹೋರಾಟಗಾರರು ಅಕ್ಟೋಬರ್‌ ಕೊನೇ ವಾರದಲ್ಲಿ ಮೈಸೂರಿನಲ್ಲಿ ಸಮಾವೇಶ ನಡೆಸಲು ತೀರ್ಮಾನಿಸಿದ್ದರು. ಆದರೆ, ಹಳೇ ಮೈಸೂರು ಭಾಗದಲ್ಲಿ ವೀರಶೈವ ಸಮುದಾಯದಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಮೈಸೂರು
ಸಮಾವೇಶವನ್ನು ಕೈ ಬಿಟ್ಟಿದ್ದಾರೆ ಎನ್ನಲಾಗಿದೆ. 

Advertisement

ಸಮಗ್ರ ಚರ್ಚೆ ಮಾಡಿದ್ದೇವೆ. ಅ.10ರಂದು ಸಭೆ ಕರೆದು ಮತ್ತೂಮ್ಮೆ ತಜ್ಞರ ಜತೆ ಚರ್ಚೆ ಮಾಡುತ್ತೇವೆ. ಒಮ್ಮತದ ನಿರ್ಣಯ ಕೈಗೊಳ್ಳಲು ಪ್ರಯತ್ನಿಸುತ್ತಿದ್ದೇವೆ. ಮೊದಲಿಗಿಂತ ಪರಿಸ್ಥಿತಿ ಸುಧಾರಿಸಿದೆ.
●ಬಸವರಾಜ ಹೊರಟ್ಟಿ, ವಿಧಾನ ಪರಿಷತ್‌ ಸದಸ್ಯ

ವೀರಶೈವ ಲಿಂಗಾಯತ ಸಮನ್ವಯತೆಗೆ ಮತ್ತೂಂದು ಹೊಸ ಕಾರ್ಯಕ್ರಮ ರೂಪಿಸಲಾಗುವುದು. ಗದಗ ಜಿಲ್ಲೆ ಶಿರಹಟ್ಟಿ
ತಾಲೂಕಿನ ಲಕ್ಷೇಶ್ವರ ಸಮೀಪದ ಮುಕ್ತಿಮಂದಿರ ಕ್ಷೇತ್ರದಲ್ಲಿ ಲಿಂ| ಶ್ರೀಮದ್‌ ರಂಭಾಪುರಿ ವೀರಗಂಗಾಧರ ಜಗದ್ಗುರುಗಳ ಪುಣ್ಯ ಸ್ಮರಣೋತ್ಸವ ಅ.8ರಂದು ನಡೆಯಲಿದ್ದು, ಇದೇ ಸಂದರ್ಭ ವೀರಶೈವ ಲಿಂಗಾಯತ ಸಮನ್ವಯತೆಗಾಗಿ ಹೊಸ ಕಾರ್ಯಕ್ರಮ ರೂಪಿಸಲಾಗುವುದು.

●ರಂಭಾಪುರಿ ಜಗದ್ಗುರು ಶ್ರೀಪ್ರಸನ್ನ ರೇಣುಕ ಡಾ| ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು

ವೀರಶೈವ, ಲಿಂಗಾಯತ ಒಂದೇ ಧರ್ಮವಾಗಬೇಕು. ಸಮಾಜದ ಐಕ್ಯತೆ, ಸಮಗ್ರತೆ, ಅಖಂಡತೆಯನ್ನು ಕಾಪಾಡುವುದು ಮಹಾಸಭೆಯ ಆಶಯ.
●ಈಶ್ವರ ಖಂಡ್ರೆ, ಸಚಿವ ಹಾಗೂ ವೀರಶೈವ ಮಹಾಸಭೆಯ ಪ್ರಧಾನ ಕಾರ್ಯದರ್ಶಿ

Advertisement

Udayavani is now on Telegram. Click here to join our channel and stay updated with the latest news.

Next