Advertisement

ಧರ್ಮ ಸಂಘರ್ಷ ತಡೆಯಲು ವೀರಶೈವ ಪರಂಪರೆ ಸದಾ ಶಕ್ಯ

03:51 PM Sep 04, 2017 | Team Udayavani |

ದಾವಣಗೆರೆ: ಯಾವುದೇ ಧರ್ಮ ಸಂಘರ್ಷ ನಡೆದಾಗಲೂ ವೀರಶೈವ ಪರಂಪರೆ ಅದನ್ನು ನಿವಾರಿಸುವಲ್ಲಿ ಸದಾ ಯಶಸ್ಸು ಕಂಡಿದೆ ಎಂದು ಶ್ರೀ ಶೈಲ ಪೀಠದ ಡಾ| ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.

Advertisement

ಭಾನುವಾರ ಶ್ರೀಶೈಲ ಮಠದ ಆವರಣದಲ್ಲಿ ಸಮಾರೋಪಗೊಂಡ ಲಿಂಗೈಕ್ಯ ವಾಗೀಶ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗಳ
31ನೇ ಪುಣ್ಯಾರಾಧನೆ, ಉಮಾಪತಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗಳ 6ನೇ ಸ್ಮರಣೋತ್ಸವ, ಜನಜಾಗೃತಿ ಧರ್ಮ ಸಮ್ಮೇಳನದ ಸಾನ್ನಿಧ್ಯ ವಹಿಸಿ, ಮಾತನಾಡಿದ ಅವರು, ವೀರಶೈವ ಪರಂಪರೆ ಯಾವುದೇ ಧರ್ಮ ಸಂಘರ್ಷ ನಡೆದಾಗಲೂ ಅದನ್ನು ಶಮನ ಮಾಡುವಲ್ಲಿ ಯಶಸ್ವಿಯಾಗಿದೆ ಎಂದರು.

ಭಾರತೀಯ ಸಂಸ್ಕೃತಿಯಲ್ಲಿ ಎರಡು ಮಾರ್ಗ ಇವೆ. ವೇದ ಮತ್ತು ಆಗಮ ಮಾರ್ಗಗಳು. ವೇದ ಒಪ್ಪಿದವರು ಆಗಮ ಒಪ್ಪುವುದಿಲ್ಲ. ಆಗಮ ಒಪ್ಪಿದವರು ಆಗಮ ಒಪ್ಪುವುದಿಲ್ಲ. ಆದರೆ, ವೀರಶೈವ ಧರ್ಮ ಎರಡನ್ನೂ ಒಪ್ಪುತ್ತದೆ. ಭಗವಂತನ ಸಾಕಾರ, ನಿರಾಕಾರಗಳನ್ನು ಒಪ್ಪಿ, ಕರ್ಮ,
ಭಕ್ತಿ ಮಾರ್ಗದಲ್ಲಿ ಬದುಕು ಸಾಗಿಸುವುದ ಕಲಿಸುತ್ತದೆ ಎಂದು ಹೇಳಿದರು. ಸಂಘರ್ಷದ ಮೂಲಕ ಮನುಷ್ಯ ಎಂದಿಗೂ ಶಾಂತಿ ಗಳಿಸಲಾರ. ಇದನ್ನು ಅರಿತು ಎಲ್ಲರೂ ಸಂಘರ್ಷವನ್ನು ಬಿಟ್ಟು ಸಮನ್ವಯದ ಮೂಲಕ ಬದುಕು ರೂಪಿಸಿಕೊಳ್ಳಲು ಮುಂದಾಗಬೇಕು. ಅದನ್ನು ವೀರಶೈವ ಧರ್ಮ ಮಾಡುತ್ತಾ ಬಂದಿದೆ. ವೀರಶೈವ ಧರ್ಮದ ಪಂಚ ಪೀಠಗಳ ಪೈಕಿ ಒಂದಾದ ಶ್ರೀಶೈಲ ಪೀಠದ ಲಿಂಗೈಕ್ಯ ವಾಗೀಶ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗಳು ಪಂಚಪೀಠದ ಪರಂಪರೆ ಜೊತೆಗೆ ವಿರಕ್ತ ಪರಂಪರೆಯಲ್ಲಿ ಸಮನ್ವಯ ಸಾಧಿಸಿದ್ದರು ಎಂದು ಸ್ಮರಿಸಿದರು. 

ಶಾಸಕ ಶಾಮನೂರು ಶಿವಶಂಕರಪ್ಪ ಮಾತನಾಡಿ, ಇಂದು ಅನೇಕ ರಾಜಕಾರಣಿಗಳು ಕೇವಲ ಚುನಾವಣೆ ಸಂದರ್ಭದಲ್ಲಿ ಮಾತ್ರ ಮಠಗಳತ್ತ ಮುಖಮಾಡುತ್ತಾರೆ. ಉಳಿದ ಸಂದರ್ಭದಲ್ಲಿ ಮಠದಿಂದ ದೂರ ಇರುತ್ತಾರೆ. ಆದರೆ, ನಾನು ಅಂತಹವರ ಸಾಲಿನವನಲ್ಲ. ಸದಾ ಮಠದೊಂದಿಗೆ ಇದ್ದು,
ಎಲ್ಲಾ ಕಾರ್ಯಕ್ರಮಗಳಲ್ಲಿ ಸಕ್ರಿಯಾವಾಗಿ ಪಾಲ್ಗೊಳ್ಳುತ್ತೇನೆ. ಶ್ರೀಶೈಲ ಮಠದ ಅನೇಕ ಕಾರ್ಯಗಳಲ್ಲಿ ನಾನು ಭಾಗಿಯಾಗಿದ್ದೇನೆ, ಅಭಿವೃದ್ಧಿಗೆ ನನ್ನದೇ ಆದ ಕೊಡುಗೆ ನೀಡಿದ್ದೇನೆ ಎಂದು ತಿಳಿಸಿದರು.

ನಾನು ತುಂಬಾ ಅದೃಷ್ಟವಂತ. ಶ್ರೀಶೈಲ ಮಠದ ಮೂರು ಗುರುಗಳೊಂದಿಗೆ ನಾನು ಒಡನಾಟ ಬೆಳೆಸಿಕೊಳ್ಳುವ ಭಾಗ್ಯ ಪಡೆದುಕೊಂಡೆ. ಲಿಂಗೈಕ್ಯ ವಾಗೀಶ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಲಿಂಗೈಕ್ಯ ಉಮಾಪತಿ ಪಂಡಿತಾರಾಧ್ಯ ಶಿವಚಾರ್ಯ ಸ್ವಾಮೀಜಿಗಳ ಜೊತೆ ಉತ್ತಮ
ಒಡನಾಟ ಹೊಂದಿದ್ದೆ. ಇದೀಗ ಚನ್ನಸಿದ್ಧರಾಮ ಪಂಡಿತಾರಾಧ್ಯ ಶ್ರೀಗಳ ಜೊತೆಗೂ ಉತ್ತಮ ಒಡನಾಟ ಹೊಂದಿದ್ದೇನೆ ಎಂದು ಅವರು ಹೇಳಿದರು.

Advertisement

ಮರಿಯಮ್ಮನಹಳ್ಳಿ ಗುರುಪಾದ ದೇವರ ಮಠದ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಜೈನಾಪುರ ಹಿರೇಮಠದ ಶ್ರೀ ರೇಣುಕ ಶಿವಾಚಾರ್ಯ ಸ್ವಾಮೀಜಿ ಸಮ್ಮುಖ ವಹಿಸಿದ್ದರು. ಉಪ ಮೇಯರ್‌ ಮಂಜಮ್ಮ ಹನುಮಂತಪ್ಪ, ಸದಸ್ಯ ದಿನೇಶ್‌ ಕೆ. ಶೆಟ್ಟಿ, ಹೋಟೆಲ್‌ ಉದ್ಯಮಿ ಅಣಬೇರು ರಾಜಣ್ಣ, ಜೆಡಿಎಸ್‌ ಜಿಲ್ಲಾಧ್ಯಕ್ಷ ಚಿದಾನಂದ, ಶಕುಂತಲ ಗುರುಸಿದ್ಧಯ್ಯ,  ಇತರರು ವೇದಿಕೆಯಲ್ಲಿದ್ದರು.

ವಕೀಲ ಬಳ್ಳಾರಿ ರೇವಣ್ಣ, ಪತ್ರಕರ್ತ ವರದರಾಜ್‌, ಪತ್ರಿಕಾ ಛಾಯಾಗ್ರಹಕ ವಿವೇಕ ಎಲ್‌, ಪುಟ್ಟಮ್ಮ ಮಹಾರುದ್ರಯ್ಯ  ಸೇರಿದಂತೆ ವಿವಿಧ ಗಣ್ಯರಿಗೆ ಗುರು ರಕ್ಷೆ ನೀಡಲಾಯಿತು. ಬಿಐಇಟಿ ಕಾಲೇಜಿನ ಡಾ| ಬಿ.ಇ. ರಂಗಸ್ವಾಮಿ ಉಪನ್ಯಾಸ ನೀಡಿದರು.

ಮೂಲೆಯಲಿದ್ದ ಮಾತೆ ಮಹಾದೇವಿ ಈಗ ಎದ್ದು ಬಂದ್ರು 
ದಾವಣಗೆರೆ: ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮ ಸ್ಥಾನಮಾನ ನೀಡಬೇಕು ಎಂದು ಹೋರಾಟಕ್ಕೆ ಇಳಿದಿರುವ ಕೂಡಲ ಸಂಗಮದ ಮಾತೆ ಮಹಾದೇವಿ ವಿರುದ್ಧ ಅಖೀಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ವಾಗ್ಧಾಳಿ ನಡೆಸಿದ್ದಾರೆ.
ಭಾನುವಾರ ನಗರದ ಶ್ರೀಶೈಲ ಮಠದಲ್ಲಿ ಹಮ್ಮಿಕೊಂಡಿದ್ದ ಸ್ಮರಣೋತ್ಸವ, ಪುಣ್ಯಾರಾಧನೆ, ಜನಜಾಗೃತಿ ಸಮಾವೇಶ ಉದ್ಘಾಟಿಸಿ, ಮಾತನಾಡಿದ ಅವರು, ಮಾತೆ ಮಹಾದೇವಿ ಬಸವಣ್ಣನವರ ವಚನಗಳನ್ನೇ ತಿದ್ದಿದವರು. ಅಂತಹವರು ವೀರಶೈವ ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮ
ಸ್ಥಾನಮಾನ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇಳುತ್ತಿದ್ದಂತೆಯೇ ಮೂಲೆಯಿಂದ ಎದ್ದುಬಂದು ಲಿಂಗಾಯತ ಧರ್ಮಕ್ಕಾಗಿ ನೇತೃತ್ವ ವಹಿಸಿದರು ಎಂದರು.

110 ವರ್ಷದ ಹಿಂದೆ ಆರಂಭವಾದ ವೀರಶೈವ ಮಹಾಸಭಾ ಕೇವಲ ವೀರಶೈವರಿಗೆ ಸಂಬಂಧಪಟ್ಟದ್ದಲ್ಲ. ಲಿಂಗಾಯತರಿಗೂ ಸಂಬಂಧಪಟ್ಟದ್ದು. ನಾವು ಇದುವರೆಗೆ ವೀರಶೈವ ಬೇರೆ, ಲಿಂಗಾಯತ ಬೇರೆ ಎಂದು ಎಲ್ಲೂ ಹೇಳಿಕೊಂಡಿಲ್ಲ. 38 ಒಳಪಂಗಡಗಳ ನಡುವೆಯೂ ಹೆಣ್ಣು, ಗಂಡು ತರುವ, ಕೊಡುವ ಸಂಪ್ರದಾಯ ಬೆಳೆದಿದೆ. ಆದರೆ, ಇದೀಗ ಕೆಲವರು ರಾಜಕೀಯ ಉದ್ದೇಶಕ್ಕೆ, ಇನ್ನಾವುದೋ ದುರುದ್ದೇಶಕ್ಕೆ ಲಿಂಗಾಯತ, ವೀರಶೈವರೆಂದು ಒಡೆಯುತ್ತಿದ್ದಾರೆ ಎಂದು ಆರೋಪಿಸಿದರು. ಇದೇ ವೇಳೆ ಅಖೀಲ ಭಾರತ ವೀರಶೈವ ಮಹಾಸಭಾ ಸಧ್ಯ ನಡೆಯುತ್ತಿರುವ ಹೋರಾಟಗಳ ಪೈಕಿ ಯಾವುದರಲ್ಲೂ ಪಾಲ್ಗೊಳ್ಳದೇ ಇರಲು ನಿರ್ಧರಿಸಿದೆ. ಎರಡೂ ಬಣಗಳಿಂದ ಅಂತರ ಕಾಯ್ದುಕೊಳ್ಳುವ ನಿಲುವು ತಾಳಿದೆ. ಈ ಹಿನ್ನೆಲೆಯಲ್ಲಿ ಬಾದಾಮಿಯಲ್ಲಿ ನಡೆಯುವ ಗುರು, ವಿರಕ್ತರ ಸಮಾವೇಶದಲ್ಲಿ ನಾನು ಪಾಲ್ಗೊಳ್ಳಲು ಸಾಧ್ಯವಿಲ್ಲ ಎಂದು ಸ್ಪಷ್ಟನೆ ನೀಡಿದರು. 

ಶ್ರೀಶೈಲ ಪೀಠದ ಡಾ| ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸೇರಿದಂತೆ ವಿವಿಧ ಮಠಾಧೀಶರು, ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next