Advertisement

ವೀರಶೈವ ಧರ್ಮ ಒಡೆಯದಿರಿ: ರಂಭಾಪುರಿ ಶ್ರೀ

02:25 PM Aug 10, 2018 | |

ದಾವಣಗೆರೆ: ಸದಾ ಸಕಲ ಜೀವಾತ್ಮದ ಲೇಸನ್ನೇ ಬಯಸುವ, ಅಪೂರ್ವ ಇತಿಹಾಸ, ಪರಂಪರೆ ಹೊಂದಿರುವ
ವೀರಶೈವ ಧರ್ಮವನ್ನು ಒಡೆಯುವ ಕೆಲಸ ಯಾರೂ ಸಹ ಮಾಡಬಾರದು ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ
ಜಗದ್ಗುರು ಪ್ರಸನ್ನ ರೇಣುಕ ಡಾ| ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಹೇಳಿದ್ದಾರೆ.

Advertisement

ಗುರುವಾರ, ರೇಣುಕ ಮಂದಿರಲ್ಲಿ 23ನೇ ಆಷಾಢ ಮಾಸದ ಇಷ್ಟಲಿಂಗ ಮಹಾಪೂಜಾ ಹಾಗೂ ಜನಜಾಗೃತಿ
ಧರ್ಮ ಸಮಾವೇಶದ ಸಮಾರೋಪದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಧರ್ಮ ಜಾತಿ ಹೆಸರಿನಲ್ಲಿ ವೀರಶೈವ
ಧರ್ಮ ಒಡೆಯದಿರಿ ಎಂದರು.

ಯಾವುದೇ ಧರ್ಮದ ಬಗೆಗೆ ಮಾತನಾಡುವುದು ಸುಲಭ. ಆದರೆ, ಆ ಮಾತಿನಂತೆ ನಡೆದುಕೊಳ್ಳುವುದು ಸುಲಭದ ಮಾತಲ್ಲ. ಕೆಲವರಿಗೆ ಧರ್ಮದ ಪರಿಪಾಲನೆ ಬೇಕಾಗಿಲ್ಲ. ಕಾಲ ಕಾಲಕ್ಕೆ ಮರದ ಎಲೆಗಳು ಉದುರಿದರೂ ಮರದ ಬೇರು ಭದ್ರವಾಗಿರುವಂತೆ ಕೆಲವು ಜನರ ಅಭಿಪ್ರಾಯಗಳು ಬದಲಾದರೂ ಧರ್ಮದ ಮೂಲ ತತ್ವ- ಸಿದ್ಧಾಂತ ಬದಲಿಸಲು ಯಾರಿಂದಲೂ ಸಾಧ್ಯವಾಗದು ಎಂದು ಜಗದ್ಗುರುಗಳು ತಿಳಿಸಿದರು.

ಸತ್ಯ ಮತ್ತು ಸಂಸ್ಕೃತಿಯನ್ನು ಯಾರಿಂದಲೂ ಮರೆಮಾಚಲು ಸಾಧ್ಯವಿಲ್ಲ. 28 ಶಿವಾಗಮಗಳ ಉತ್ತರ ಭಾಗದಲ್ಲಿ ವೀರಶೈವ ಧರ್ಮದ ಹಿರಿಮೆ-ಗರಿಮೆ- ಮಹಿಮೆ ಕಾಣಬಹುದು. ಸಿದ್ಧಾಂತ ಶಿಖಾಮಣಿ ಮತ್ತು ವಚನಗಳ ಸಾಹಿತ್ಯದಲ್ಲಿ ವೀರಶೈವ ಧರ್ಮದ ಆದರ್ಶ ಮೌಲ್ಯಗಳ ಬಗ್ಗೆ ಇದೆ ಎಂದು ತಿಳಿಸಿದರು.

ಧರ್ಮವೆಂದರೆ ಉತ್ಕೃಷ್ಟ ಸಂಸ್ಕೃತಿ. ಅದಕ್ಕೊಂದು ನೀತಿ ಸಂಹಿತೆಯಿದೆ. ಧರ್ಮದಲ್ಲಿ ಮಾರ್ಗವಿದೆ, ವೇಗವಿಲ್ಲ.
ವಿಜ್ಞಾನದಲ್ಲಿ ವೇಗವಿದೆ ಮಾರ್ಗವಿಲ್ಲ. ಧರ್ಮ ನನಗೆ ಏನು ಕೊಟ್ಟಿದೆ ಎಂದು ಕೇಳುವುದಕ್ಕಿಂತ ನಾನು ಧರ್ಮಕ್ಕಾಗಿ ಏನು ಕೊಟ್ಟಿದ್ದೇನೆ ಎಂಬುದನ್ನು ಮನವರಿಕೆ ಮಾಡಿಕೊಂಡರೆ ಸಾಕು. ಧರ್ಮ- ವಿಜ್ಞಾನಗಳು ಪರಸ್ಪರ ಬೆರೆತು ನಡೆದರೆ
ಮಾನವ ಕಲ್ಯಾಣ ಸುಲಭವಾಗುತ್ತದೆ ಎಂದು ತಿಳಿಸಿದರು.

Advertisement

ವೀರಶೈವ ಧರ್ಮದ ಪಂಚ ಪೀಠಗಳು ಯಾವಾಗಲೂ ಸಮನ್ವಯ ಭಾವನೆಯನ್ನು ಹೊಂದಿ ಜಗದ್ಗುರು ರೇಣುಕಾಚಾರ್ಯರ ಮತ್ತು ಬಸವಾದಿ ಶಿವಶರಣರ ವಿಚಾರ ಧಾರೆಗಳನ್ನು ಪ್ರಸಾರ ಮಾಡುತ್ತಿವೆ ಎಂದ ಅವರು,
ದಾವಣಗೆರೆ ಮಹಾನಗರದಲ್ಲಿ 5 ದಿನಗಳ 23 ನೇ ಆಷಾಢ ಮಾಸದ ಇಷ್ಟಲಿಂಗ ಮಹಾಪೂಜಾ ಹಾಗೂ ಜನಜಾಗೃತಿ
ಧರ್ಮ ಸಮಾವೇಶ ಅತ್ಯಂತ ಯಶಸ್ವಿಯಾಗಿದ್ದು ಸಂತಸ ತಂದಿದೆ ಎಂದರು.

ನೆಗಳೂರು ಹಿರೇಮಠದ ಶ್ರೀ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಧರ್ಮ ಕೆಡಿಸುವುದು ಸುಲಭ. ಆದರೆ, ಧರ್ಮ ಕಟ್ಟಿ ಬೆಳೆಸುವುದು ಬಲು ಕಷ್ಟ. ಪೂರ್ವಜರ ಆದರ್ಶ ದಾರಿಯಲ್ಲಿ ಮುನ್ನಡೆದು ಬಾಳಿನಲ್ಲಿ ಬೆಳಕು ಕಾಣಬೇಕು ಎಂದು ತಿಳಿಸಿದರು. ಮುಕ್ತಿಮಂದಿರದ ಶ್ರೀ ವಿಮಲ ರೇಣುಕ ಮುಕ್ತಿಮುನಿ ಶಿವಾಚಾರ್ಯ ಸ್ವಾಮೀಜಿ ನೇತೃತ್ವ ವಹಿಸಿದ್ದರು.

ಆವರಗೊಳ್ಳ ಪುರವರ್ಗ ಹಿರೇಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ, ಮಳಲಿಯ ಡಾ| ನಾಗಭೂಷಣ ಶಿವಾಚಾರ್ಯ ಸ್ವಾಮೀಜಿ, ಚನ್ನಗಿರಿಯ ಶ್ರೀ ಶಿವಶಾಂತವೀರ ಶಿವಾಚಾರ್ಯರು ಉಪಸ್ಥಿತರಿದ್ದರು. ಜಿ. ಶಿವಯೋಗಪ್ಪ,
ಎನ್‌.ಜಿ. ಪುಟ್ಟಸ್ವಾಮಿ, ಎನ್‌.ಎ. ಮುರುಗೇಶ, ಸೈಯದ್‌ ಸೈಪುಲ್ಲ ಡಿ.ಎಂ. ಹಾಲಸ್ವಾಮಿ ಇತರರು ಇದ್ದರು.

ಉದ್ಯಮಿ ಜೆ. ವೇದಮೂರ್ತಿಗೆ ಜನಸೇವಾ ರತ್ನ ಎಂಬ ಪ್ರಶಸ್ತಿ ಪ್ರದಾನ ಮಾಡಲಾಯಿತು. ವೀರೇಶ ಕಿತ್ತೂರು ಸಂಗೀತ ಸೇವೆ ನಡೆಸಿಕೊಟ್ಟರು. ಜಂಬಗಿ ರಾಧೇಶ ಸ್ವಾಗತಿಸಿದರು. ಕೆ.ಎಂ. ರುದ್ರಮುನಿಸ್ವಾಮಿ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next