ಸೇಡಂ: ಹಲವಾರು ವರ್ಷಗಳ, ಸರ್ವ ಸಮಾಜಗಳಿಗೂ ಅನುಕೂಲ ಮಾಡಿಕೊಡುವ ವೀರಶೈವ ಕಲ್ಯಾಣ ಮಂಟಪ ಪೂರ್ಣ ಹಂತಕ್ಕೆ ತಲುಪಿದ್ದು, ಕೆಲ ದಿನಗಳಲ್ಲೇ ಜನಾರ್ಪಣೆಗೊಳ್ಳಲಿದೆ ಎಂದು ವೀರಶೈವ ಶೈಕ್ಷಣಿಕ ಮತ್ತು ಕಲ್ಯಾಣಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಶಿವಯ್ಯಸ್ವಾಮಿ ಬಿಬ್ಬಳ್ಳಿ ತಿಳಿಸಿದರು.
ಪಟ್ಟಣದ ವೀರಶೈವ ಲಿಂಗಾಯತ ಕಲ್ಯಾಣ ಮಂಟಪದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಮಾರು 2.65 ಲಕ್ಷ ರೂ. ವೆಚ್ಚದಲ್ಲಿ ಈಗಾಗಲೇ ವೀರಶೈವ ಲಿಂಗಾಯತ ಸಮುದಾಯ ಭವನ (ಕಲ್ಯಾಣ ಮಂಟಪ) ಹಾಗೂ ವಿದ್ಯಾರ್ಥಿಗಳ ವಸತಿ ನಿಲಯ ನಿರ್ಮಾಣವಾಗಿದೆ ಎಂದು ಹೇಳಿದರು.
ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಡಾ| ಬಸವರಾಜ ಪಾಟೀಲ ಸೇಡಂ, ಮಾಜಿ ಸಚಿವ ಡಾ| ಶರಣಪ್ರಕಾಶ ಪಾಟೀಲ ಹಾಗೂ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ ಅಧ್ಯಕ್ಷ ರಾಜಕುಮಾರ ಪಾಟೀಲ ತೇಲ್ಕೂರ, ಬಸವರಾಜ ದಿಗ್ಗಾವಿ, ಬಸವರಾಜ ಸಜ್ಜನ ಹೀಗೆ ಹಲವಾರು ಪ್ರಮುಖರ ಸಲಹೆ-ಸೂಚನೆ ಆಧರಿಸಿ, ಕಟ್ಟಡ ನಿರ್ಮಾಣಕ್ಕಾಗಿ ಯೋಜನೆಗಳನ್ನು ರೂಪಿಸಿಕೊಂಡು ಸಮಾಜದ ಜನರ ಬಳಿ ತೆರಳಿದ್ದೆವು. 91 ಹಳ್ಳಿಗಳ ಸಂಪರ್ಕ ಮಾಡಿ, 4800 ಕುಟುಂಬಗಳ ಪೈಕಿ 2000 ಕುಟುಂಬಗಳು ಭವನ ನಿರ್ಮಾಣಕ್ಕೆ ಕೈಜೋಡಿಸಿದ್ದಾರೆ ಎಂದರು.
ಇದನ್ನೂ ಓದಿ: ಜೈಲಿಗೆ ಬಂದು ಪುತ್ರನ ಭೇಟಿಯಾದ ಶಾರುಖ್; ಹೈಕೋರ್ಟ್ ನಲ್ಲಿ ಜಾಮೀನು?
ಲಲಿತಾಬಾಯಿ ಸಂಗಣ್ಣಶೆಟ್ಟಿ ಯಾಕಾಪೂರ ಎರಡು ಎಕರೆ ಭೂಮಿಯನ್ನು ಭವನ ನಿರ್ಮಾಣಕ್ಕಾಗಿ ದೇಣಿಗೆ ನೀಡಿದ್ದಾರೆ. ಭವನದಲ್ಲಿ ರೇಣುಕಾಚಾರ್ಯರು ಹಾಗೂ ಬಸವಣ್ಣನ ಮೂರ್ತಿ ಸ್ಥಾಪಿಸಲಾಗಿದೆ. ಜಾತಿ, ಬೇಧ-ಭಾವವಿಲ್ಲದೆ ಕಡಿಮೆ ದರದಲ್ಲಿ ಸರ್ವರಿಗೂ ಸೇವೆ ಕಲ್ಪಿಸಲು ಕಟ್ಟಡ ಸಜ್ಜಾಗಿದೆ. ವಿದ್ಯಾರ್ಥಿಗಳ ವಸತಿಗಾಗಿ 14 ಕೋಣೆ ನಿರ್ಮಿಸಲಾಗಿದೆ. ಬರುವ ಕೆಲ ದಿನಗಳಲ್ಲಿ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಕಟ್ಟಡ ಜರ್ನಾಪಣೆಗೊಳ್ಳಲಿದೆ ಎಂದು ಹೇಳಿದರು.
ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಶ್ರವಣಕುಮಾರ ಪಂತಲು, ಸಹ ಕಾರ್ಯದರ್ಶಿ ಪ್ರದೀಪ ಪಾಟೀಲ ಹೊಸಳ್ಳಿ, ಕೋಶಾಧ್ಯಕ್ಷ ಸಿದ್ಧಪ್ಪ ತಳ್ಳಳ್ಳಿ, ಶರಣಬಸಪ್ಪ ಹಾಗರಗಿ, ನಾಗಯ್ಯಸ್ವಾಮಿ ಬೊಮ್ನಳ್ಳಿ, ಉಮೇಶ ಪಾಟೀಲ ಯಾಕಾಪುರ, ಶಿವಶಂಕ್ರಪ್ಪ ಮಾಸ್ಟರ್ ಇದ್ದರು.