Advertisement

ಅಕ್ಟೋಬರ್ ನಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ‘ವೀರ ಕಂಬಳ’ಚಿತ್ರ ಬಿಡುಗಡೆ

02:46 PM May 26, 2022 | Team Udayavani |

ತುಳುನಾಡಿನ ಜಾನಪದ ಕ್ರೀಡೆಯಾದ ಕಂಬಳದ ಕುರಿತಾದ, ಹಿರಿಯ ನಿರ್ದೇಶಕ ಎಸ್ ವಿ ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ “ವೀರ ಕಂಬಳ” ಚಿತ್ರವು ಇದೇ ಅಕ್ಟೋಬರ್ ನಲ್ಲಿ ತೆರೆ ಕಾಣಲಿದೆ. ಅರುನ್ ರೈ ತೋಡಾರ್ ನಿರ್ಮಾಣದ ಚಿತ್ರವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಯೋಜನೆ ರೂಪಿಸಿದೆ.

Advertisement

ಚಿತ್ರದ ಬಗ್ಗೆ ಮಾಹಿತಿ ನೀಡಿದ ನಿರ್ದೇಶಕ ಹಿರಿಯ ಎಸ್ ವಿ ರಾಜೇಂದ್ರ ಸಿಂಗ್ ಬಾಬು, ನಾನು ತರಂಗ ವಾರಪತ್ರಿಕೆಯೊಂದರಲ್ಲಿ “ಕಂಬಳ’ದ ಕುರಿತು ಬರುತ್ತಿದ್ದ ಬರಹಗಳನ್ನು ಓದುತ್ತಿದ್ದೆ. ಇದರ ಬಗ್ಗೆ ಸಿನಿಮಾ ಮಾಡಬೇಕೆಂದು ನಿರ್ಧಾರ ಮಾಡಿದೆ. ನಂತರ ತುಳು ನಟ, ನಿರ್ದೇಶಕ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಅವರನ್ನು ಭೇಟಿ ಮಾಡಿದೆ. ಅವರಿಂದ ಕಂಬಳದ ಬಗ್ಗೆ ಸಾಕಷ್ಟು ಮಾಹಿತಿ ದೊರಕಿತು. ಅರುಣ್ ರೈ ತೋಡಾರ್ ಈ ಚಿತ್ರ ನಿರ್ಮಾಣಕ್ಕೆ ಮುಂದಾದರು. ಮೂಡುಬಿದಿರೆ ಬಳಿ ಇದಕ್ಕಾಗಿ ದೊಡ್ಡ ಕಂಬಳದ ಮೈದಾನ ಸಿದ್ದವಾಯಿತು. ಇಪ್ಪತ್ತು ಜೊತೆ ಕೋಣ. ಒಂದು ಕೋಣ ನೋಡಿಕೊಳ್ಳಲು ನಾಲ್ಕು ಜನ. ಸಹ ಕಲಾವಿದರು ಸೇರಿದಂತೆ ಸುಮಾರು 500 ಕ್ಕೂ ಹೆಚ್ಚು ಜನ ಒಂದು ದಿನದ ಚಿತ್ರೀಕರಣದಲ್ಲಿ ಭಾಗವಹಿಸುತ್ತಿದ್ದರು. ಕೋಣಗಳ ಮೂಡ್ ಒಂದೇ ತರಹ ಇರುವುದಿಲ್ಲ. ಅದನೆಲ್ಲಾ ನೋಡಿಕೊಂಡು ಚಿತ್ರೀಕರಣ ಮಾಡಬೇಕಿತ್ತು. ಒಂದು ಸಲ ಓಟದ ಶಾಟ್ ತೆಗೆದರೆ, ಸುಮಾರು ಒಂದು ಗಂಟೆ ವಿಶ್ರಾಂತಿ. ನಂತರ ಚಿತ್ರೀಕರ..” ಹೀಗೆ ಚಿತ್ರೀಕರಣದ ಅನುಭವವನ್ನು ಬಿಚ್ಚಿಟ್ಟರು.

ಇದನ್ನೂ ಓದಿ:ಕರಣ್ ಜೋಹರ್ ಪಾರ್ಟಿಯಲ್ಲಿ ತನ್ನ ಹೊಸ ಗರ್ಲ್ ಫ್ರೆಂಡ್ ಪರಿಚಯಿಸಿದ ಹೃತಿಕ್ ರೋಶನ್

“ಈ ಚಿತ್ರಕ್ಕೆ ಕಥೆಯೇ ಹೀರೋ. ಅದು ಬಿಟ್ಟರೆ, ಕೋಣಗಳನ್ನು ಓಡಿಸುವುದರಲ್ಲಿ ಪ್ರಸಿದ್ಧರಾಗಿರುವ ಶ್ರೀನಿವಾಸ ಗೌಡ ಹಾಗೂ ನಾಟಕ ಕಲಾವಿದ ಸ್ವರಾಜ್ ಶೆಟ್ಟಿ ಕಂಬಳ ಓಡಿಸುವವರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿಶೇಷ ಪಾತ್ರದಲ್ಲಿ ಆದಿತ್ಯ ಅಭಿನಯಿಸಿದ್ದಾರೆ. ‌ರಾಧಿಕಾ ಚೇತನ್ ಪೊಲೀಸ್ ಕಮಿಷನರ್ ಆಗಿ ಕಾಣಿಸಿಕೊಂಡಿದ್ದಾರೆ. ನವೀನ್ ಪಡೀಲ್, ಗೋಪಿನಾಥ್ ಭಟ್, ಭೋಜರಾಜ್ ವಾಮಾಂಜೂರು ಸೇರಿದಂತೆ ಪ್ರಸಿದ್ದ ತುಳು ನಟರು ಈ ಚಿತ್ರದಲ್ಲಿದ್ದಾರೆ. ಬಹುತೇಕ ಚಿತ್ರೀಕರಣ ಮುಗಿದಿದೆ. ಸ್ವಲ್ಪ ಭಾಗದ ಚಿತ್ರೀಕರಣ ಮಾತ್ರ ಬಾಕಿಯಿದ್ದು, ಖ್ಯಾತ ನಟ ಪ್ರಕಾಶ್ ರಾಜ್ ಅವರನ್ನು ಅಭಿನಯಿಸಲು ಕೇಳಿದ್ದೇವೆ. ಅವರು ಒಪ್ಪಿಗೆ ನೀಡಿದ್ದಾರೆ. ಸೆಪ್ಟೆಂಬರ್ ಅಥವಾ ಅಕ್ಟೋಬರ್ ನಲ್ಲಿ “ವೀರ ಕಂಬಳ” ನಿಮ್ಮ ಮುಂದೆ ಬರಲಿದೆ” ಎಂದರು.

Advertisement

‘’ಈ ಚಿತ್ರಕ್ಕೆ ದೇಸಿ ಸಂಗೀತ ಬೇಕಿತ್ತು. ಹಾಗಾಗಿ ಅಲ್ಲಿನ ಬಗ್ಗೆ ತಿಳಿದಿರುವ ಮಣಿಕಾಂತ್ ಕದ್ರಿ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಗಿರಿ ಈ ಚಿತ್ರದ ಛಾಯಾಗ್ರಾಹಕರು. ತುಳು ಹಾಗೂ ಕನ್ನಡ ಭಾಷೆಗಳಲ್ಲಿ ಈ ಚಿತ್ರ ಬರುತ್ತಿದೆ. ತೆಲುಗು, ತಮಿಳು, ಹಿಂದಿ ಹಾಗೂ ಇಂಗ್ಲೀಷ್ ಭಾಷೆಗಳಿಗೆ ಡಬ್ ಆಗಲಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಿಡುಗಡೆಗೆ ಸಿದ್ದತೆ ನಡೆಯುತ್ತಿದೆ. ವಿದೇಶಗಳಲ್ಲಿ ಪ್ರೀಮಿಯರ್ ಶೋ ನಡೆಸುವ ಯೋಜನೆಯಿದೆ’’ ಎಂದು “ವೀರ ಕಂಬಳ” ದ ಬಗ್ಗೆ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಮಾಹಿತಿ ನೀಡಿದರು.

ಎಷ್ಟೋ ಜನಕ್ಕೆ ನಾನು ತುಳುನಾಡಿನವಳೆಂದು ತಿಳಿದಿಲ್ಲ. ನನ್ನ ಮಾತೃ ಭಾಷೆ ಕೂಡ ತುಳು. ಈ ಚಿತ್ರದಲ್ಲಿ ಅಭಿನಯಿಸಲು ಅವಕಾಶ ಕೊಟ್ಟ ನಿರ್ದೇಶಕರಿಗೆ ವಂದನೆಗಳು. ಪೊಲೀಸ್ ಕಮಿಷನರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದೀನಿ ಎಂದರು ನಟಿ ರಾಧಿಕಾ ಚೇತನ್.

ನಟರಾದ ಆದಿತ್ಯ, ರಾಧಿಕಾ ಚೇತನ್, ನಿರ್ಮಾಪಕ ಅರುಣ್ ರೈ ತೋಡಾರ್, ಚಿತ್ರಕಥೆ- ಸಂಭಾಷಣೆ ಬರೆದಿರುವ ವಿಜಯ್ ಕುಮಾರ್ ಕಿಡಿಯಾಲ್ ಬೈಲ್, ಶ್ರೀನಿವಾಸ ಗೌಡ, ಸ್ವರಾಜ್ ಶೆಟ್ಟಿ ಹಾಗೂ ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ ಚಿತ್ರದ ಕುರಿತು ಮಾತನಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next