Advertisement

ಹೊಸದಿಲ್ಲಿಯಲ್ಲಿ  ವೈದಿಕ ಸಂಶೋಧನ ಕೇಂದ್ರ

02:46 PM Jun 02, 2018 | Team Udayavani |

ಉಡುಪಿ: ಹೊಸದಿಲ್ಲಿಯಲ್ಲಿ ಸುಮಾರು 6 ಕೋ.ರೂ. ವೆಚ್ಚದಲ್ಲಿ ಪೇಜಾವರ ಮಠದ ವತಿಯಿಂದ ವೈದಿಕ ಸಂಶೋಧನ ಮತ್ತು ಪ್ರಕಾಶನ ಕೇಂದ್ರ ಶೀಘ್ರದಲ್ಲೇ ಅರಂಭಗೊಳ್ಳಲಿದೆ. ಕಟ್ಟಡ ನಿರ್ಮಾಣ ಆಗಿದೆ ಎಂದು ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ತಿಳಿಸಿದ್ದಾರೆ.

Advertisement

ಜೂ.1ರಂದು ಮಠದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶ್ರೀಗಳು, ವೇದಾಂತ, ಪುರಾಣ, ಭಗವದ್ಗೀತೆ ಮೊದಲಾದವುಗಳ ಬಗ್ಗೆ ಮಧ್ವಾಚಾರ್ಯರ ಪ್ರಕಟನೆಗಳು ಹೆಚ್ಚಾಗಿ ಕನ್ನಡ, ತಮಿಳು, ತೆಲುಗಿನಲ್ಲಿ ಮಾತ್ರ ಇವೆ. ಈ ಸಂಶೋಧನ ಕೇಂದ್ರದಲ್ಲಿ ಹಿಂದಿ ಭಾಷೆಯಲ್ಲಿ ಪ್ರಕಾಶನಕ್ಕೆ ಆದ್ಯತೆ ನೀಡಲಾಗುವುದು. ಉತ್ತರ ಭಾರತದಲ್ಲಿ ಮಧ್ವಾಚಾರ್ಯಯರ ವೇದಾಂತ ಪ್ರಚಾರಕ್ಕೆ ಇದರಿಂದ ನೆರವಾಗಲಿದೆ. ಬೆಂಗಳೂರಿನಲ್ಲಿ ಈಗಾಗಲೇ ಪೂರ್ಣಪ್ರಜ್ಞ ಸಂಶೋಧನ ಕೇಂದ್ರ ಇದೆ ಎಂದರು.

ಬೃಂದಾವನ ಜಾಗ ಅತಿಕ್ರಮಣ
ಬೃಂದಾವನದಲ್ಲಿ ಮಠಕ್ಕೆ ಸೇರಿದ ಜಾಗದ ಅತಿಕ್ರಮಣ ಆಗಿದೆ. ಅದನ್ನು ತೆರವುಗೊಳಿಸಲು ನ್ಯಾಯಾಲಯದಿಂದ ಆದೇಶ ಬಂದಿದೆ. ತೆರವು ಇನ್ನಷ್ಟೇ ಆಗಬೇಕಿದೆ. ಅಲ್ಲಿ ಶಾಖಾ ಮಠ, ಆಶ್ರಮ ಸ್ಥಾಪಿಸಲಾಗುವುದು. ಪಾಜಕದಲ್ಲಿ 40 ಎಕರೆ ಜಾಗದಲ್ಲಿ ಎಲ್‌ಕೆಜಿಯಿಂದ ಪದವಿಯ ವರೆಗಿನ ಆನಂದತೀರ್ಥ ವಿದ್ಯಾಲಯ ಇದೆ. ಇದು ರೆಸಿಡೆನ್ಶಿಯಲ್‌ ಶಿಕ್ಷಣ ಸಂಸ್ಥೆಯಾಗಿದ್ದು, ರಾಜ್ಯದ ಬೇರೆ ಬೇರೆ ಕಡೆಯ ವಿದ್ಯಾರ್ಥಿಗಳು ಆಗಮಿಸುತ್ತಿದ್ದಾರೆ. ಇಲ್ಲಿ ಧಾರ್ಮಿಕ ಶಿಕ್ಷಣ ಕಡ್ಡಾಯವಲ್ಲ. ವಿಶೇಷ ಧಾರ್ಮಿಕ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಮನೆ ಬಾಡಿಗೆಯಲ್ಲಿ ರಿಯಾಯಿತಿ ಇದೆ.

ಇತರ ವಿದ್ಯಾರ್ಥಿಗಳಿಗೂ ಊಟ ಉಚಿತವಾಗಿರುತ್ತದೆ. ಇದಕ್ಕೆ 15 ಕೋ.ರೂ. ವೆಚ್ಚವಾಗಿದೆ. ಇನ್ನೂ 
5 ಕೋ.ರೂ.ಗಳ ಅಗತ್ಯವಿದೆ. ಪೇಜಾವರ ಮಠದ ಶಿಕ್ಷಣ ಸಂಸ್ಥೆಗಳು, ವೃದ್ಧಾಶ್ರಮಗಳಿವೆ. ಶಿವಮೊಗ್ಗದಲ್ಲಿ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ ನಿರ್ಮಾಣವಾಗಲಿದೆ. ಉಡುಪಿಯಲ್ಲಿ ಹೆಣ್ಮಕ್ಕಳ ಮತ್ತು ಮೈಸೂರಿ ನಲ್ಲಿ ಗಂಡು ಮಕ್ಕಳ ಹಾಸ್ಟೆಲ್‌ ಇದೆ. ಹುಬ್ಬಳ್ಳಿಯಲ್ಲಿಯೂ ಪಿ.ಯು. ಕಾಲೇಜು ನಿರ್ಮಾಣವಾಗುತ್ತಿದೆ.

ಬೆಂಗಳೂರಿನಲ್ಲಿ ಆಸ್ಪತ್ರೆ ನಿರ್ಮಾಣವಾಗುತ್ತಿದ್ದು, ಎರಡು ಅಂತಸ್ತುಗಳು ಪೂರ್ಣಗೊಂಡಿವೆ. ಈಗಾಗಲೇ 10-15 ಕೋ. ರೂ. ಖರ್ಚಾಗಿದೆ. ಇನ್ನೂ 10 ಕೋ. ರೂ.ಗಳ ಅಗತ್ಯವಿದೆ. ಇದನ್ನು 500 ಹಾಸಿಗೆಗಳ ಆಸ್ಪತ್ರೆಯನ್ನಾಗಿಸುವ ಯೋಜನೆ ಇದೆ ಎಂದು ಪೇಜಾವರ ಶ್ರೀಗಳು ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next