Advertisement

‘ವೇದ’ಚಿತ್ರ ವಿಮರ್ಶೆ: ಸೇಡಿನ ಜ್ವಾಲೆಯಲ್ಲಿ ವೇದ ಅಧ್ಯಯನ

10:01 AM Dec 24, 2022 | Team Udayavani |

ಮನಸ್ಸಿನಲ್ಲಿ ಮಡುಗಟ್ಟಿದ ನೋವು ಸೇಡಾಗಿ ಪರಿವರ್ತನೆಯಾಗುತ್ತದೆ. ಸೇಡಿನ ಜ್ವಾಲೆ ಅನೇಕರ ಮನೆ ಬಾಗಿಲು ತಟ್ಟಿ “ಕೆಂಪು’ ಹಾದಿ ತೋರಿಸುತ್ತದೆ. ಈ “ಜ್ವಾಲಾಮುಖೀ’ ಕೋತ ಕೋತ ಕುದಿಯುತ್ತಾ ಮುಂದೆ ಸಾಗಲು ಒಂದು ಕಾರಣವಿದೆ, ಜೊತೆಗೊಂದು ಆಶಯವೂ ಇದೆ. ಅದೇನೆಂಬುದನ್ನು “ವೇದ’ನ ಬಾಯಿಯಿಂದಲೇ ಕೇಳಿದರೆ ಮಜಾ…

Advertisement

“ವೇದ’ ಶಿವರಾಜ್‌ಕುಮಾರ್‌ ಅವರ 125ನೇ ಸಿನಿಮಾ. 125ನೇ ಸಿನಿಮಾ ಎಂಬುದು ಒಬ್ಬ ನಟನ ವೃತ್ತಿ ಜೀವನದಲ್ಲಿ ಮೈಲಿಗಲ್ಲು. ಆ ನಿಟ್ಟಿನಲ್ಲಿ “ವೇದ’ ಚಿತ್ರದಲ್ಲಿ ಶಿವಣ್ಣ ಆಯ್ಕೆ ಮಾಡಿಕೊಂಡಿರುವ ಒನ್‌ಲೈನ್‌ ಚೆನ್ನಾಗಿದೆ. ಹೆಣ್ಣು ಮಕ್ಕಳನ್ನು ಕೆಟ್ಟ ದೃಷ್ಟಿಯಿಂದ ನೋಡುವ ಮುನ್ನ ನೂರು ಬಾರಿ ಯೋಚಿಸಿ ಎಂಬುದು ಈ ಸಿನಿಮಾದ ಮೂಲ ಸಂದೇಶ. ಈ ಅಂಶವನ್ನಿಟ್ಟುಕೊಂಡು ನಿರ್ದೇಶಕ ಹರ್ಷ ಔಟ್‌ ಅಂಡ್‌ ಔಟ್‌ ಆ್ಯಕ್ಷನ್‌ ಕಮರ್ಷಿಯಲ್‌ ಕಟ್ಟಿಕೊಟ್ಟಿದ್ದಾರೆ. ಇದು ಹರ್ಷ ಹಾಗೂ ಶಿವರಾಜ್‌ ಕುಮಾರ್‌ ಕಾಂಬಿನೇಶನ್‌ನಲ್ಲಿ ಬರುತ್ತಿರುವ 4ನೇ ಸಿನಿಮಾ.

ಶಿವಣ್ಣ ಜೊತೆಗಿನ ಈ ಹಿಂದಿನ ಮೂರು ಸಿನಿಮಾಗಳಲ್ಲೂ ಹರ್ಷ ಒಂದು ಹೊಸ ಲೋಕ, ಹೈವೋಲ್ಟೇಜ್‌ ಪಾತ್ರಗಳು, ಆಗಾಗ ತೆರೆದುಕೊಳ್ಳುವ ಫ್ಲ್ಯಾಶ್‌ಬ್ಯಾಕ್‌ಗಳೊಂದಿಗೆ ಕಟ್ಟಿಕೊಟ್ಟಿದ್ದರು. ಈಗ “ವೇದ’ದಲ್ಲೂ ಹರ್ಷ ಅವರ ಅದೇ ಶೈಲಿ ಮುಂದುವರೆದಿದೆ. 60-80ರ ದಶಕದಲ್ಲಿ ನಡೆಯುವ ಕಥೆ ಒಂದು ಕಡೆಯಾದರೆ, ಅದಕ್ಕಾಗಿಯೇ ಸೃಷ್ಟಿಯಾದ ಹಳ್ಳಿ, ಅಲ್ಲೊಂದಿಷ್ಟು “ನಿಗಿ ನಿಗಿ ಕೆಂಡದಂತಿರುವ’ ಪಾತ್ರಗಳು, ನಾಯಕನಿಗೊಂದು ಫ್ಲ್ಯಾಶ್‌ಬ್ಯಾಕ್‌.. ಹೀಗೆ “ವೇದ’ ಸಾಗುತ್ತದೆ.

ಮೊದಲೇ ಹೇಳಿದಂತೆ ಕಥೆಯ ಆಶಯ ಚೆನ್ನಾಗಿದೆ. ಈ ಆಶಯವನ್ನು ರಗಡ್‌ ಆಗಿ ಕಟ್ಟಿಕೊಡುವ ಹಾದಿಯಲ್ಲಿ ರಕ್ತದ ಹೊಳೆಯೇ ಹರಿಯುತ್ತದೆ. ಚಿತ್ರದುದ್ದಕ್ಕೂ ಬರ್ಬರವಾದ ಕೊಲೆಗಳು ಕಾಣಸಿಗುತ್ತವೆ. ಚಿತ್ರದ ಮೊದಲರ್ಧ ಸ್ವಲ್ಪ ನಿಧಾನಗತಿಯಲ್ಲಿ ಸಾಗಿದರೆ, ಸಿನಿಮಾದ ಮುಖ್ಯ ಕಥೆ ತೆರೆದುಕೊಳ್ಳುವುದು ದ್ವಿತೀಯಾರ್ಧದಲ್ಲಿ. ಮೊದಲರ್ಧಕ್ಕಿಂತ ಹೆಚ್ಚು ದ್ವಿತೀಯಾರ್ಧದಲ್ಲಿ “ರಕ್ತದ ವಾಸನೆ’ ಮೂಗಿಗೆ ಬಡಿಯುತ್ತದೆ. ಇದರ ಜೊತೆಗೆ ಸಾಕಷ್ಟು ಟ್ವಿಸ್ಟ್‌ಗಳು ಕೂಡಾ ಸಿನಿಮಾದ ಕುತೂಹಲ ಹೆಚ್ಚಿಸುತ್ತಾ ಸಾಗುತ್ತದೆ.

ಇದನ್ನೂ ಓದಿ:ಕಂದಕಕ್ಕೆ ಉರುಳಿದ ಶಬರಿಮಲೆ ಯಾತ್ರಿಗಳಿದ್ದ ವ್ಯಾನ್: ಎಂಟು ಭಕ್ತರ ದುರ್ಮರಣ

Advertisement

ಇನ್ನು, ನಾಯಕನ ಮದುವೆ ಎಪಿಸೋಡ್‌ ಸೇರಿದಂಥೆ ಒಂದಷ್ಟು ದೃಶ್ಯಗಳನ್ನು ಟ್ರಿಮ್‌ ಮಾಡಿ ಚಿತ್ರದ ವೇಗ ಹೆಚ್ಚಿಸುವ ಅವಕಾಶವಿತ್ತು. ಆ್ಯಕ್ಷನ್‌ ಎಪಿಸೋಡ್‌ಗಳ ಜೊತೆ ಜೊತೆಗೆ ಫ್ಲ್ಯಾಶ್‌ಬ್ಯಾಕ್‌ ತೆರೆದುಕೊಳ್ಳುವ ಮೂಲಕ “ಕ್ಲಾಸ್‌’ ಸಿನಿಪ್ರಿಯರ ಮನಸ್ಸು ತಣಿಸುತ್ತದೆ. ವೈಲೈಂಟ್‌ ಆಗಿರುವ ನಾಯಕ ಸೈಲೈಂಟ್‌ ಆಗಿದ್ದ ದಿನಗಳನ್ನು ತೋರಿಸುವ ಮೂಲಕ “ಅಲ್ಲಲ್ಲಿ’ ಫ್ಯಾಮಿಲಿ ಆಡಿಯನ್ಸ್‌ ಅನ್ನು ಸೆಳೆಯುವ ಪ್ರಯತ್ನ ಮಾಡಿದ್ದಾರೆ ಹರ್ಷ.

ಇನ್ನು, ಇಡೀ ಸಿನಿಮಾದ ಹೈಲೈಟ್‌ ನಟ ಶಿವರಾಜ್‌ಕುಮಾರ್‌. ಅವರಿಗೆ ಚಿತ್ರದಲ್ಲಿ ಹೆಚ್ಚು ಮಾತಿಲ್ಲ. ಇಡೀ ಸಿನಿಮಾದಲ್ಲಿ ಮಾತನಾಡಿರೋದು ಅವರ ಕಣ್ಣು ಮತ್ತು ಕೈ. ಬೆಂಕಿಯುಗುಳು ಕಣ್ಣುಗಳು ಒಂದು ಕಡೆಯಾದರೆ, ದುಷ್ಟರ ಚೆಂಡಾಡುವ ಕೈ ಮತ್ತೂಂದು ಕಡೆ. ಚಿತ್ರದಲ್ಲಿ ಕೊಡಬೇಕಾದ ಸಂದೇಶವನ್ನು ಕೂಡಾ ಖಡಕ್‌ ಆಗಿಯೇ ನೀಡಿದ್ದಾರೆ. ನಾಯಕಿ ಗಾನವಿ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಪಾತ್ರಕ್ಕೆ ಹೊಂದಿಕೊಂಡಿದ್ದರೂ ಅವರು ಹೇಳುವ ಸಂಭಾಷಣೆಯನ್ನು ಅರ್ಥಮಾಡಿಕೊಳ್ಳಲು ಸ್ವಲ್ಪ ಸಮಯ ಹಿಡಿಯುತ್ತದೆ.

ಉಳಿದಂತೆ ಅದಿತಿ ಸಾಗರ್‌, ಶ್ವೇತಾ ಚೆಂಗಪ್ಪ, ರಾಘ ಶಿವಮೊಗ್ಗ, ಉಮಾಶ್ರೀ ಚಿತ್ರದ ಪ್ರಮುಖ ಪಾತ್ರಗಳು. ಉಳಿದಂತೆ ಹರ್ಷ ಸಿನಿಮಾಗಳಲ್ಲಿ ಕಾಣ ಸಿಗುವ ಆರಡಿ ವಿಲನ್‌ಗಳು ಅಬ್ಬರಿಸಿದ್ದಾರೆ. ಚಿತ್ರದ ಹಿನ್ನೆಲೆ ಸಂಗೀತ ಹಾಗೂ ಹಾಡುಗಳು “ವೇದ’ನ ಪ್ಲಸ್‌ ಗಳಲ್ಲಿ ಒಂದು.

ರವಿಪ್ರಕಾಶ್‌ ರೈ

Advertisement

Udayavani is now on Telegram. Click here to join our channel and stay updated with the latest news.

Next