Advertisement

ಅಪೌಷ್ಟಿಕತೆ ನಿವಾರಣೆಗೆ ವೇದಾಂತ ಬಲ

04:27 PM Jun 13, 2021 | Team Udayavani |

ವರದಿ: ಅಮರೇಗೌಡ ಗೋನವಾರ

Advertisement

ಹುಬ್ಬಳ್ಳಿ: “ದೇಶದ ಯಾವುದೇ ಭಾಗದಲ್ಲಿ ಮಕ್ಕಳು ಅಪೌಷ್ಟಿಕತೆಯಿಂದ ಬಳಲುವಂತಾಗಬಾರದು. ಮಕ್ಕಳಿಗೆ ಪೌಷ್ಟಿಕತೆ ಹಾಗೂ ಕಲಿಕೆಯ ಭದ್ರ ಬುನಾದಿ ಆಶಯ, ಮಹಿಳೆಯರ ಸಬಲೀಕರಣದ ಜತೆ ಅವರನ್ನು ಉದ್ಯಮಿಗಳನ್ನಾಗಿಸುವ ನಿಟ್ಟಿನಲ್ಲಿ ವೇದಾಂತ ಕಂಪನಿ ಮಹತ್ವದ ಹೆಜ್ಜೆ ಇರಿಸಿದೆ.

ಪ್ರಧಾನಿ ನರೇಂದ್ರ ಮೋದಿಯವರ ಪ್ರೇರಣೆಯೊಂದಿಗೆ, ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ಧಿ ಸಚಿವಾಲಯ ಸಹಯೋಗದೊಂದಿಗೆ ಸಾರ್ಥಕ ಕಾರ್ಯದ ಪ್ರತಿರೂಪವೇ “ನಂದ ಘರ್‌’ ಅಪೌಷ್ಟಿಕತೆ ತೊಡೆದು ಹಾಕುವ ನಿಟ್ಟಿನಲ್ಲಿ ಸರಕಾರ ಕೈಗೊಳ್ಳುವ ಯತ್ನಕ್ಕೆ ಜವಾಬ್ದಾರಿಯುತ ಪಾಲುದಾರಿಕೆ ಪಡೆದುಕೊಂಡಿದ್ದೇವೆ ಎಂಬ ಸಂತಸ ನಮ್ಮದಾಗಿದೆ ಎಂಬುದು ವೇದಾಂತ ಕಂಪನಿ ಕಬ್ಬಿಣ ಮತ್ತು ಉಕ್ಕು ವಹಿವಾಟು ವಿಭಾಗದ ಸಿಇಒ ಸೌವಿಕ್‌ ಮಜುಮ್‌ ದಾರ್‌ ಅವರ ಅನಿಸಿಕೆ.

ನಂದ ಘರ್‌ ಪರಿಕಲ್ಪನೆ, ಭವಿಷ್ಯದಲ್ಲಿ ಅದರಿಂದಾಗುವ ಪ್ರಯೋಜನ, ದೇಶದಲ್ಲಿ ನಂದ ಘರ್‌ ನಿರ್ಮಾಣದ ಗುರಿ ಇನ್ನಿತರ ವಿಷಯಗಳ ಕುರಿತು “ಉದಯವಾಣಿ’ ಜತೆ ಮಾತನಾಡಿದ ಅವರು ಹೇಳಿದಿಷ್ಟು: ವೇದಾಂತ ಕಂಪೆನಿ ಕಾರ್ಪೊರೇಟ್‌ ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ ದೇಶದಲ್ಲಿ ಅನೇಕ ಸಾಮಾಜಿಕ ಸೇವಾ ಕಾರ್ಯಗಳನ್ನು ಹಮ್ಮಿಕೊಂಡಿದೆ. ಪ್ರಧಾನಿ ನರೇಂದ್ರ ಮೋದಿಯವರ ಸ್ವತ್ಛ ಭಾರತ, ಬೇಟಿ ಬಚಾವೋ, ಬೇಟಿ ಪಡಾವೋ, ಸ್ಟಾರ್ಟ್‌ಅಪ್‌ ಇಂಡಿಯಾ ಆಶಯದ ಭಾಗವಾಗಿಯೇ ನಂದಘರ್‌ ಮೂಲಕ ಮಕ್ಕಳಿಗೆ ಪೌಷ್ಟಿಕ ಆಹಾರ, ಗುಣಮಟ್ಟದ ಕಲಿಕೆ ಬುನಾದಿ, ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕೆ ಮುಂದಾಗಿದೆ. ಹರ್ಯಾಣದ ಹಸ್ನಾಪುರ ಗ್ರಾಮದಲ್ಲಿ ದೇಶದ ಮೊದಲ ನಂದಘರ್‌ ಆರಂಭವಾಗಿದ್ದರೆ, 2018ರ ಫೆ. 24ರಂದು ಧಾರವಾಡ ಜಿಲ್ಲೆಯ ಮಾರಡಗಿಯಲ್ಲಿ ರಾಜ್ಯದ ಮೊದಲ ನಂದಘರ್‌ ಲೋಕಾರ್ಪಣೆಗೊಂಡಿತ್ತು. ಕರ್ನಾಟಕ, ರಾಜಸ್ಥಾನ, ಓಡಿಶಾ, ಜಾರ್ಖಂಡ್‌, ಛತ್ತೀಸಗಢ, ಮಧ್ಯಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ನಂದ ಘರ್‌ ಆರಂಭಗೊಂಡಿವೆ.

ಐದು ಜಿಲ್ಲೆಗಳಲ್ಲಿ ನಂದ ಘರ್‌: ಮಕ್ಕಳಿಗೆ ಪೌಷ್ಟಿಕತೆ, ಮಹಿಳಾ ಸಬಲೀಕರಣ ಉದ್ದೇಶದೊಂದಿಗೆ ಕರ್ನಾಟಕದಲ್ಲಿ ಧಾರವಾಡ, ಚಿತ್ರದುರ್ಗ, ದಾವಣಗೆರೆ ಸೇರಿದಂತೆ ಐದು ಜಿಲ್ಲೆಗಳಲ್ಲಿ ನಂದಘರ್‌ ಆರಂಭಿಸಲಾಗಿದೆ. ಗ್ರಾಮೀಣ ಪ್ರದೇಶದಲ್ಲಿನ ಅಂಗನವಾಡಿ ಕೇಂದ್ರಗಳನ್ನೇ ನಂದ ಘರ್‌ಗಳಾಗಿ ಪರಿವರ್ತನೆಗೊಳಿಸಲಾಗುತ್ತಿದೆ. ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ಧಿ ಸಚಿವಾಲಯ ಮಾರ್ಗದರ್ಶನದಂತೆ ಕೈಗೊಳ್ಳಲಾಗುತ್ತದೆ. ಕನಿಷ್ಟ 780 ಚದರ ಅಡಿಯಲ್ಲಿ ನಂದ ಘರ್‌ ನಿರ್ಮಾಣ ಕೈಗೊಳ್ಳಲಾಗುತ್ತಿದ್ದು, ಭೂಕಂಪಕ್ಕೂ ಜಗ್ಗದ ರೀತಿಯ ಅತ್ಯಾಧುನಿಕ ರೀತಿಯ ವ್ಯವಸ್ಥೆ ಇದಾಗಿರುತ್ತದೆ. ಯುನಿಸೆಫ್‌ ಪರಿಕಲ್ಪನೆಯ ಕಲಿಕೆಗಾಗಿ ಕಟ್ಟಡದ ನೆರವು ಆಧಾರದಲ್ಲಿ ಇದನ್ನು ರೂಪಿಸಲಾಗುತ್ತಿದೆ.

Advertisement

ನಂದ ಘರ್‌ ಕಾರ್ಯನಿರ್ವಹಣೆಯನ್ನು ಮಕ್ಕಳು ಮತ್ತು ಮಹಿಳೆಯರಿಗಾಗಿ ಹಂಚಿಕೆ ಮಾಡಲಾಗಿದೆ. ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಮಕ್ಕಳಿಗೆ ಕಟ್ಟಡ ಬಳಕೆಯಾದರೆ, ಮಧ್ಯಾಹ್ನದಿಂದ ಮಹಿಳೆಯರಿಗೆ ಇದು ಬಳಕೆಯಾಗಲಿದೆ.

ನಂದ ಘರ್‌ನಲ್ಲಿ ಏನೇನಿದೆ?: ಸೌರಶಕ್ತಿಯಾಧಾರಿತ ವಿದ್ಯುತ್‌ ವ್ಯವಸ್ಥೆ, ಹೀಟರ್‌, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಸ್ವತ್ಛ ಶೌಚಾಲಯ, ಕಂಪ್ಯೂಟರ್‌ ವ್ಯವಸ್ಥೆ, ಸ್ಮಾಟ್‌ ìಕಿಟ್‌ಗಳು, ಮಕ್ಕಳಿಗೆ ಪೌಷ್ಟಿಕಾಂಶಗಳನ್ನೊಳಗೊಂಡ ಶುಚಿ-ರುಚಿಯಾದ ಆಹಾರ, ಆಟಿಕೆ ಸಾಮಗ್ರಿಗಳು ಹೀಗೆ ವಿವಿಧ ಸೌಲಭ್ಯಗಳನ್ನು ಇದು ಒಳಗೊಂಡಿರುತ್ತದೆ. ನಂದ ಘರ್‌ನಲ್ಲಿ 3ರಿಂದ 6 ವರ್ಷದೊಳಗಿನ ಮಕ್ಕಳಿಗೆ ಅತ್ಯುತ್ತಮ ಸೌಲಭ್ಯಗಳ ಜತೆಗೆ ಪೌಷ್ಟಿಕ ಆಹಾರ ದೊರೆಯುತ್ತದೆ. ಗರ್ಭಿಣಿ ಹಾಗೂ ನಿಶಕ್ತ ಮಹಿಳೆಯರಿಗೂ ಪೌಷ್ಟಿಕ ಆಹಾರ ಇನ್ನಿತರ ಸಾಮಗ್ರಿ ನೀಡಿಕೆ ಕಾರ್ಯ ನಡೆಯಲಿದೆ. ಮಕ್ಕಳಿಗೆ ಪೂರ್ವ ಪ್ರಾಥಮಿಕ ಹಂತದಿಂದಲೇ ಕಂಪ್ಯೂಟರ್‌ ಆಧಾರಿತ ಕಲಿಕೆ ಕೈಗೊಳ್ಳಲಾಗುತ್ತಿದೆ. ರೈಮ್ಸ್‌ಗಳನ್ನು ವಿಡಿಯೋ ಮೂಲಕ ಕಂಪ್ಯೂಟರ್‌ ನಲ್ಲಿ ಮಕ್ಕಳಿಗೆ ಕಲಿಸಲಾಗುತ್ತದೆ. ಇದು ಮಕ್ಕಳ ಮೇಲೆ ಹೆಚ್ಚಿನ ಪರಿಣಾಮ ಬೀರಲಿದ್ದು, ಆರಂಭಿಕ ಹಂತದಿಂದಲೇ ಮಕ್ಕಳಿಗೆ ಇ-ಕಲಿಕೆ ಪರಿಚಯ, ಜ್ಞಾನ ದೊರೆತಂತಾಗಲಿದೆ. ಮುಂದಿನ ಹಂತದಲ್ಲಿ ತಂತ್ರಜ್ಞಾನಾಧಾರಿತ ಕಲಿಕೆಗೆ ಮಕ್ಕಳು ಸುಲಭವಾಗಿ ಹೊಂದಿಕೊಳ್ಳುತ್ತಾರೆ ಹಾಗೂ ಅರ್ಥಮಾಡಿಕೊಳ್ಳುತ್ತಾರೆ.

ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಿಕೆ, ಇ-ಕಲಿಕೆ, ತಾಂತ್ರಿಕ ಮಾಹಿತಿ ನಿಟ್ಟಿನಲ್ಲಿ ವೇದಾಂತ ಕಂಪೆನಿ ಈಗಾಗಲೇ ನಂದ ಘರ್‌ ಆರಂಭಗೊಂಡಿರುವ ಗ್ರಾಮಗಳ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ವಿವಿಧ ರೀತಿಯ ತರಬೇತಿ ನೀಡುವ ಮೂಲಕ ಯಶಸ್ವಿ ನಿರ್ವಹಣೆಗೆ ಗಮನ ನೀಡಿದೆ. ನಂದ ಘರ್‌ನಲ್ಲಿ ಅಳವಡಿಸಿರುವ ಕಂಪ್ಯೂಟರ್‌ ಹಾಗೂ ಇ-ಲರ್ನಿಂಗ್‌ ವ್ಯವಸ್ಥೆ ಬಹುಪಯೋಗಿಯಾಗಿರುತ್ತದೆ. ಅರ್ಧ ದಿನ ಮಕ್ಕಳಿಗೆ ಬಳಕೆಯಾಗುವ ಈ ವ್ಯವಸ್ಥೆ, ನಂತರದಲ್ಲಿ ಮಹಿಳೆಯರ ಇ-ಕಲಿಕೆಗೆ ಬಳಕೆಯಾಗುತ್ತದೆ. ಮಕ್ಕಳಲ್ಲಿನ ಅಪೌಷ್ಟಿಕತೆ ನಿವಾರಣೆ ಉದ್ದೇಶ ಪ್ರಮುಖವಾಗಿದ್ದರೆ, ಮಹಿಳಾ ಸಬಲೀಕರಣ ಮತ್ತೂಂದು ಮಹತ್ವದ ಚಿಂತನೆಯಾಗಿದೆ.

ಗ್ರಾಮೀಣ ಮಹಿಳೆಯರಲ್ಲಿ ಅನೇಕ ಕೌಶಲಗಳಿದ್ದರೂ ಅವುಗಳಿಗೆ ಸೂಕ್ತ ವೇದಿಕೆ ಇಲ್ಲ, ಇನ್ನಷ್ಟು ಕೌಶಲದ ಅವಶ್ಯಕತೆಯನ್ನು ಮನಗಂಡೇ ವೇದಾಂತ ಕಂಪೆನಿ ಈ ಕಾರ್ಯಕ್ಕೆ ಮುಂದಾಗಿದೆ. ನಂದ ಘರ್‌ ಇರುವ ಗ್ರಾಮಗಳಲ್ಲಿ ಮಹಿಳಾ ಕಮಿಟಿಗಳನ್ನು ಮಾಡಲಾಗಿದ್ದು, ಇ-ಕಲಿಕೆ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸ್ತ್ರೀ ಶಕ್ತಿ ಸ್ವಸಹಾಯ ಗುಂಪುಗಳ ರಚನೆ, ಆ ಮೂಲಕ ಮಹಿಳೆಯರಿಂದ ವಿವಿಧ ಉತ್ಪನ್ನಗಳ ತಯಾರು, ಅವುಗಳಿಗೆ ಮಾರುಕಟ್ಟೆ, ಆ ಮೂಲಕ ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿಸುವ ಮಹದಾಸೆ ಕಂಪೆನಿಯದ್ದಾಗಿದೆ. ಇದಕ್ಕೆ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ಧಿ ಸಚಿವಾಲಯದ ಪೂರ್ಣ ಪ್ರಮಾಣದ ಸಹಕಾರ-ಪ್ರೋತ್ಸಾಹ ದೊರೆಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next