Advertisement

ಸಿಂಡಿಕೇಟ್‌ ಬ್ಯಾಂಕ್‌ನಿಂದ ವೇದಾ, ರಾಜೇಶ್ವರಿಗೆ ಸಮ್ಮಾನ

07:30 AM Aug 01, 2017 | |

ಬೆಂಗಳೂರು: ಇಲ್ಲಿನ ಸಿಂಡಿಕೇಟ್‌ ಬ್ಯಾಂಕ್‌ ವಲಯ ಕೇಂದ್ರ ಕಚೇರಿಯಲ್ಲಿ ಸೋಮ ವಾರ ನಡೆದ ಸಮಾರಂಭದಲ್ಲಿ ಭಾರತೀಯ ವನಿತಾ ಕ್ರಿಕೆಟ್‌ ತಂಡದ ಸದಸ್ಯೆಯರಾದ ವೇದಾ ಕೃಷ್ಣಮೂರ್ತಿ, ರಾಜೇಶ್ವರಿ ಗಾಯಕ್ವಾಡ್‌ಅವರನ್ನು ಸಮ್ಮಾನಿಸಲಾಯಿತು. 

Advertisement

ಇತ್ತೀಚೆಗೆ ಇಂಗ್ಲೆಂಡ್‌ನ‌ಲ್ಲಿ ಮುಕ್ತಾಯವಾದ ಐಸಿಸಿ ವನಿತಾ ವಿಶ್ವಕಪ್‌ ಕೂಟದಲ್ಲಿ ಭಾರತೀಯ ತಂಡ ಅದ್ಭುತವಾಗಿ ಆಡಿಯೂ ಫೈನಲ್‌ನಲ್ಲಿ ಸೋತು ನಿರಾಶೆ ಅನುಭವಿಸಿತ್ತು. ತಂಡದ ಸದಸ್ಯೆಯರಾಗಿದ್ದ ವೇದಾ ಮತ್ತು ರಾಜೇಶ್ವರಿ ತಮ್ಮ ಆಟದಿಂದ ತಂಡವನ್ನು ತಲಾ ಒಂದು ಪಂದ್ಯದಲ್ಲಿ ಗೆಲ್ಲಿಸಿದ್ದರು. 

ಸಮ್ಮಾನ ಕಾರ್ಯಕ್ರಮದಲ್ಲಿ ವೇದಾ ಕೃಷ್ಣಮೂರ್ತಿ ಹಾಗೂ ರಾಜೇಶ್ವರಿ ಗಾಯಕ್ವಾಡ್‌ ಅವರ ಕುಟುಂಬದ ಸದಸ್ಯರು  ಪಾಲ್ಗೊಂಡಿದ್ದರು. ಸಿಂಡಿಕೇಟ್‌ ಬ್ಯಾಂಕ್‌ ಕಾರ್ಯನಿರ್ವಾಹಕ ನಿರ್ದೇಶಕ ಆರ್‌.ಎಸ್‌. ಪಾಂಡೆ, ಎಸ್‌.ಎಸ್‌. ಮಲ್ಲಿಕಾರ್ಜುನ ರಾವ್‌, ಮಹಾಪ್ರಬಂಧಕ ಭಾಸ್ಕರ್‌ ಭಾಗವಹಿಸಿದ್ದರು.

ಏಕದಿನ ವಿಶ್ವಕಪ್‌ ಕ್ರಿಕೆಟ್‌ ಫೈನಲ್‌ನಲ್ಲಿ ಇಂಗ್ಲೆಂಡ್‌ ತಂಡದ ವಿರುದ್ಧ ಸೋತು ರನ್ನರ್‌ಅಪ್‌ ಆಗಿ ಭಾರತಕ್ಕೆ ಮರಳಿದರೂ, ನಮ್ಮನ್ನು ಗೆದ್ದ ತಂಡದಂತೆ ಅದ್ದೂರಿಯಾಗಿ ಸ್ವಾಗತಿಸಿರುವುದು  ಜೀವಮಾನದಲ್ಲಿ ಮರೆಯಲಾರದ ಸಂಗತಿ ಎಂದು ಭಾರತೀಯ ತಂಡದ ಪ್ರತಿಭಾನ್ವಿತ ಕ್ರಿಕೆಟ್‌ತಾರೆ ವೇದಾ ಕೃಷ್ಣಮೂರ್ತಿ ತಿಳಿಸಿದ್ದಾರೆ.

ಲಾಡ್ಸ್‌ನಲ್ಲಿ ನಡೆದ 2017ರ ವಿಶ್ವ ಕಪ್‌ಫೈನಲ್ಸ್‌ನಲ್ಲಿ  ಸೋಲನುಭವಿಸಿ ತಾಯ್ನಾಡಿಗೆ ವಾಪಸಾದ ಮೇಲೂ ಜನತೆ ನಮ್ಮನ್ನು ಪ್ರೀತಿ, ಗೌರವದಿಂದ ಸ್ವಾಗತಿಸಿದರು. ಇದು ನಮಗೆ ಹೆಮ್ಮೆ ಎನಿಸುತ್ತದೆ. ಅದೇ ರೀತಿ ಪ್ರಥಮ ಬಾರಿಗೆ ಸಿಂಡಿಕೇಟ್‌ ಬ್ಯಾಂಕ್‌ ನಮ್ಮನ್ನು ಇಷ್ಟು ಪ್ರೀತ್ಯಾದರಗಳಿಂದ ಸಮ್ಮಾನಿಸುತ್ತಿರುವುದಕ್ಕೆ  ತುಂಬು ಹೃದಯದ ಧನ್ಯವಾದಗಳು. ಯಾರೇ ಒಬ್ಬ ಸಾಧಕ, ಸಾಧಕಿಯ ಹಿಂದೆ ಒಂದು ಶಕ್ತಿ ಇರುತ್ತದೆ. ಅದೇ ಗುರು. ಆ ಅದ್ಭುತ ಶಕ್ತಿಯನ್ನು ಬಹಳಷ್ಟು ಮಂದಿ ಗುರುತಿಸುವುದಿಲ್ಲ. ಇಂದು  ನಮ್ಮ ಜೊತೆ ಅವರನ್ನು ಸಿಂಡಿಕೇಟ್‌ ಬ್ಯಾಂಕ್‌ ಗುರುತಿಸಿ ಸಮ್ಮಾನಿಸುತ್ತಿರುವುನ್ನು ನೋಡಿ ಖುಷಿಯಾಗಿದೆ ಎಂದರು.

Advertisement

ನನ್ನ ಜೀವಮಾನದ ಸಾಧನೆ
ಅನಂತರ ಎಡಗೈ ಸ್ಪಿನ್ನರ್‌ ರಾಜೇಶ್ವರಿ ಗಾಯಕ್ವಾಡ್‌ ಮಾತನಾಡಿ, ಎಲ್ಲೋ ವಿಜಯ ಪುರದಲ್ಲಿ ಹುಟ್ಟಿ ಬೆಳದವಳು ನಾನು. ಬೆಂಗಳೂರಿನಂತ ಮಹಾನಗರಕ್ಕೆ ಬಂದು ಕ್ರಿಕೆಟ್‌ ಕಲಿತು ಭಾರತೀಯ ಮಹಿಳಾ ತಂಡದಲ್ಲಿ ಸ್ಥಾನ ಪಡೆದು ವಿಶ್ವ ಕಪ್‌ ಫೈನಲ್‌ನಲ್ಲಿ ಆಡಿದ್ದು ನನ್ನ ಜೀವಮಾನದ ಸಾಧನೆ. ಇಂದು ನನ್ನನ್ನು ಇಲ್ಲಿಗೆ ಕರೆಸಿ ಸಮ್ಮಾನ ಮಾಡುತ್ತಿರುವ ಬ್ಯಾಂಕಿನ ಎಲ್ಲ ಅಧಿಕಾರಿಗಳಿಗೆ, ಸಿಬಂದಿ ವರ್ಗಕ್ಕೆ ನನ್ನ ಪ್ರೀತಿಯ ನಮಸ್ಕಾರಗಳು. ಇಂಗ್ಲಿಷ್‌ ಭಾಷೆ ಬಾರದ ನನ್ನನ್ನು ಈ ಮಟ್ಟಕ್ಕೆ  ಬೆಳೆಸಿದ ನನ್ನ ಗುರು ಕಲ್ಪನಾ ಮೇಡಂಗೆ ಧನ್ಯವಾದಗಳು.

ಈ ಸಂದರ್ಭದಲ್ಲಿ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಮೆಲ್ವಿನ್‌ ರೆಗೋ ಅವರು ಮಾತನಾಡಿ, ಇಂದಿನ ಹೀರೋಗಳು ವೇದಾ ಮತ್ತು ರಾಜೇಶ್ವರಿ ಅವರಿಗೆ ಬ್ಯಾಂಕ್‌ ವತಿಯಿಂದ ತುಂಬು ಹೃದಯದ ವಂದನೆ ಗಳು. ಇಂದು ಅವರು ನಮ್ಮ ದೇಶಕ್ಕೆ ತಂದಿ ರುವ ಗೌರವ ಹಾಗೂ ಮಹಿಳಾ ಕ್ರಿಕೆಟ್‌ಗೆ ನೀಡಿರುವ ಕೊಡುಗೆ ಭಾರತೀಯರಾದ ನಾವು ಎಂದೆಂದಿಗೂ ಮರೆಯುವಂತಿಲ್ಲ. ನಿಮ್ಮ ಸಾಧನೆ ಮಹಿಳಾ ಕ್ರಿಕೆಟ್‌ನಲ್ಲಿ ಅಚ್ಚಳಿಯದೆ ಉಳಿಯಲಿದೆ ಎಂದರು.

ಕ್ರಿಕೆಟ್‌ ಎಂದರೆ ಕೇವಲ ಪುರುಷರು ಆಡುವ ಕ್ರೀಡೆ ಎಂದು ಗುರುತಿಸುವ ಕಾಲವಿತ್ತು. ಆದರೆ, ಇಂದು ವಿಶ್ವ ಮಹಿಳಾ ಕ್ರಿಕೆಟ್‌ ಬಗ್ಗೆ  ತಲೆಎತ್ತಿ ಮಾತನಾಡುವಂತಾಗಿದೆ ಹಾಗೂ ಮಹಿಳಾ ಕ್ರಿಕೆಟಿಗರೂ ಮಾಡಿರುವ ಸಾಧನೆ ನೆನೆಯುವಂತಾಗಿದೆ. ಆ ಪ್ರಾಮುಖ್ಯತೆ  ಈಗ ಬಂದಿದೆ. ಭಾರತೀಯ ಮಹಿಳಾ ಕ್ರಿಕೆಟ್‌ಗೆ ಗೌರವ ತಂದುಕೊಟ್ಟ  ಶಾಂತಾ ರಂಗಸ್ವಾಮಿ ಮುಂತಾದವರನ್ನು ಇಂದಿಗೂ ನೆನೆಯುತ್ತೇವೆ ಎಂದವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next