ರಾಯಚೂರು: ಮಸ್ಕಿ ಕ್ಷೇತ್ರದ ವಟಗಲ್ ಬಸವೇಶ್ವರ ಏತ ನೀರಾವರಿ ಯೋಜನೆ ಅನುಷ್ಠಾನ ಪ್ರಕ್ರಿಯೆಯನ್ನು ಯಾವುದೇ ಕಾರಣಕ್ಕೂ ಕೈ ಬಿಡಬಾರದು ಎಂದು
ಆಗ್ರಹಿಸಿ ವಟಗಲ್ ಬಸವೇಶ್ವರ ಏತ ನೀರಾವರಿ ಹೋರಾಟ ಸಮಿತಿ ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಿತು.
ನಗರದ ರಂಗಮಂದಿರದಿಂದ ಡಿಸಿ ಕಚೇರಿವರೆಗೂ ಪ್ರತಿಭಟನಾ ರ್ಯಾಲಿ ನಡೆಸಿದ ಪ್ರತಿಭಟನಾಕಾರರು, ಬಳಿಕ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ
ಸಲ್ಲಿಸಿದರು. ಈ ವೇಳೆ ಮನವಿ ಸ್ವೀಕರಿಸಲು ಅಪರ ಜಿಲ್ಲಾಧಿಕಾರಿ ದುರಗೇಶ ಆಗಮಿಸಿದಾಗ ಒಪ್ಪದ ಪ್ರತಿಭಟನಾಕಾರರು, ಸ್ಥಳಕ್ಕೆ ಜಿಲ್ಲಾಧಿಕಾರಿಯೇ
ಬರಲಿ ಎಂದು ಪಟ್ಟು ಹಿಡಿದರು. ಪೊಲೀಸರು ಮನವೊಲಿಸಲು ಮುಂದಾದರೂ ಕೇಳದೆ ಧರಣಿ ಕುಳಿತು ಘೋಷಣೆ ಕೂಗಿದರು.
ಮಸ್ಕಿ ಕ್ಷೇತ್ರದ ಅಮಿನಘಡ, ಪಾಮನಕಲ್ಲೂರು, ವಟಗಲ್ ಮತ್ತು ಅಂಕುಶದೊಡ್ಡಿ ಗ್ರಾಮ ವ್ಯಾಪ್ತಿಯ ಸುಮಾರು 24 ಹಳ್ಳಿಗಳಿಗೆ ಈ ಯೋಜನೆ ಅನುಕೂಲವಾಗಲಿದೆ. ಅಕ್ಕಪಕ್ಕದಲ್ಲಿ ತುಂಗಭದ್ರಾ, ಕೃಷ್ಣ ನದಿಗಳು ಹರಿಯುತ್ತಿದ್ದರೂ ನೀರಾವರಿ ಸೌಲಭ್ಯದಿಂದ ವಂಚಿತವಾಗಿದ್ದೇವೆ. ಸತತ ಬರಕ್ಕೆ ತುತ್ತಾಗಿ ಈ ಭಾಗದ ರೈತರು ಸಾಕಷ್ಟು ಸಂಕಷ್ಟ ಅನುಭವಿಸುತ್ತಿದ್ದಾರೆ. ಇಂಥ ವೇಳೆ ವಟಗಲ್ ಬಸವೇಶ್ವರ ಏತ ನೀರಾವರಿ ಯೋಜನೆ ರೈತರಿಗೆ ಅನುಕೂಲವಾಗಲಿದ್ದು, ಯಾವುದೇ ಕಾರಣಕ್ಕೂ ಯೋಜನೆ ಜಾರಿ ಕೆಬಿಜೆಎನ್‌ಎಲ್ ಕರೆದ ಟೆಂಡರ್ ಪ್ರಕ್ರಿಯೆ ಕೈ ಬಿಡದೆ ಮುಂದುವರಿಸಬೇಕು ಎಂದು ಒತ್ತಾಯಿಸಿದರು.
ನೀರಿನ ಕೊರತೆಯಿಂದ 5ಎ ನಾಲೆ ಯೋಜನೆ ಅನುಷ್ಠಾನ ಕಷ್ಟವಾಗಲಿದೆ. ನದಿ ಜೋಡಣೆಯಿಂದ ಲಭ್ಯವಾಗಬಹುದಾಗ ನೀರಿನಲ್ಲಿ ಯೋಜನೆ ಪ್ರಸ್ತಾಪಿಸಬಹುದು ಎಂದು ನೀರಾವರಿ ಇಲಾಖೆ ಸ್ಪಷ್ಟ ನಿಲುವು ವ್ಯಕ್ತಪಡಿಸಿದೆ. ನದಿ ಜೋಡಣೆ ಪ್ರಕ್ರಿಯೆಗೆ ಕಾಲಮಿತಿ ನಿಗದಿಯಾಗಿಲ್ಲವಾದ ಕಾರಣ ಅದು ಕೂಡಲೇ ಈಡೇರುವ ಸಾಧ್ಯತೆ ಇಲ್ಲದ ಕಾರಣ ಹನಿ ನೀರಾವರಿ ಬದಲು ಹರಿ ನೀರಾವರಿ ಸೌಲಭ್ಯ ಪಡೆಯಲು ಸಾಧ್ಯವಾಗುವಂತೆ ಯೋಜನೆಯನ್ನು ಜಾರಿಗೊಳಿಸಲು ಸರ್ಕಾರಕ್ಕೆ ಆಗ್ರಹಿಸಲಾಗಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು.
ಮೇಲ್ಭಾಗದ ರೈತರು ಅಕ್ರಮವಾಗಿ ನೀರು ಬಳಸಿಕೊಂಡರೆ ಕೆಳಭಾಗದ ರೈತರು ಶಾಶ್ವತ ನೀರಾವರಿಯಿಂದ ವಂಚಿತರಾಗಬೇಕಾಗುತ್ತದೆ. ಈ ಕಾರಣಕ್ಕೆ ಎಲ್ಲ ಗ್ರಾಮಗಳಿಂದ 500ಕ್ಕೂ ರೈತರು ಬೆಂಗಳೂರಿಗೆ ತೆರಳಿ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರನ್ನು ಭೇಟಿಯಾಗಿ ನೀರಾವರಿ ಸೌಲಭ್ಯಕ್ಕಾಗಿ ಆಗ್ರಹಿಸಲಾಗಿದೆ. ಸರ್ಕಾರ ನಂದವಾಡಗಿ ಎರಡನೇ ಹಂತದಲ್ಲಿ ಲಭ್ಯವಿರುವ 2.25 ಟಿಎಂಸಿ ಅಡಿ ನೀರು ಬಳಸಿಕೊಂಡು ಹನಿ ನೀರಾವರಿ ಬದಲಿಗೆ ಹನಿ ನೀರಾವರಿ ಸೌಲಭ್ಯದ ಕುರಿತು ಆಲೋಚಿಸಿ ನಮ್ಮ ರೈತರಿಗೆ ಸ್ಪಂದಿಸಿ ವಟಗಲ್ ಬಸವೇಶ್ವರ ಏತ ನೀರಾವರಿ ಯೋಜನೆ ಸರ್ವೇ ಕಾರ್ಯಕ್ಕೆ ಟೆಂಡರ್
ಕರೆದಿದ್ದು, ಈ ಪ್ರಕ್ರಿಯೆಯನ್ನು ಬೇಗ ಮುಗಿಸಿ ರೈತರ ಜಮೀನಿಗೆ ನೀರೊದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಹೋರಾಟ ಸಮಿತಿ ಸಂಚಾಲಕ ಚಂದ್ರಶೇಖರ ಜಾಗಿರದಾರ್, ಶಿವಕುಮಾರ ವಟಗಲ್, ಮಹಾದೇವಪ್ಪ, ಚಂದ್ರಶೇಖರ ಸೇರಿದಂತೆ ಅನೇಕ ಗ್ರಾಮಗಳ ರೈತರು ಹೋರಾಟದಲ್ಲಿ ಪಾಲ್ಗೊಂಡಿದ್ದರು.