ಮೈಸೂರು: ಆಹಾರ ಮತ್ತು ತರಕಾರಿ ಬೆಲೆ ಏರಿಕೆ ಖಂಡಿಸಿ ಕಡಲೆಕಾಯಿ ಹಂಚುವ ಮೂಲಕ ಕನ್ನಡ ಚಳವಳಿ ವಾಟಳ್ ಪಕ್ಷದ ಸಂಸ್ಥಾಪಕ ವಾಟಾಳ್ ನಾಗರಾಜ್ ಪ್ರತಿಭಟನೆ ನಡೆಸಿದರು. ನಗರದ ಹಾರ್ಡಿಂಜ್ ವೃತ್ತ ಬಳಿ ಸಾರ್ವ ಜನಿಕರಿಗೆ ಉಚಿತವಾಗಿ ಕಡಲೆಕಾಯಿ ಹಂಚಿ ಬೆಲೆ ಏರಿಕೆ ವಿರುದ್ಧ ವಿನೂತನವಾಗಿ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ವಾಟಾಳ್ ನಾಗರಾಜ್, ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆ ಜನ ಸಾಮಾನ್ಯರ ಕೈ ಸುಟ್ಟಿದೆ. ಇದರ ನಡುವೆ ಆಹಾರ ಪದಾರ್ಥಗಳ ಬೆಲೆ ಏರಿಕೆ ಮಾಡಿರುವುದು ಖಂಡನೀಯ. ಆಹಾರ ಪದಾರ್ಥಗಳು ಹಾಗೂ ತರಕಾರಿಯ ಬೆಲೆ ಗಗನಕೇರಿದೆ. ಸರಕಾರ ಬೆಲೆ ಏರಿಕೆ ನಿಯಂತ್ರಿಸುವಲ್ಲಿ ವಿಫಲವಾಗಿದೆ.
ಇದನ್ನೂ ಓದಿ:- ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಸ್ವಸಹಾಯಗುಂಪು ಸಮಾವೇಶಕ್ಕೆ ವೀರೇಂದ್ರ ಹೆಗ್ಗಡೆ ಚಾಲನೆ
ಎರಡು ವರ್ಷದಿಂದ ಕೋವಿಡ್‌ನಿಂದ ಜನರಿಗೆ ಸರಿಯಾದ ಸಂಪಾದನೆ ಇಲ್ಲ, ನಿರುದ್ಯೋಗ ಸೇರಿದಂತೆ ನಾನಾ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದರ ನಡುವೆ ಬೆಲೆ ಏರಿಕೆ ಮತ್ತಷ್ಟು ಕಂಗಾಲಾಗಿಸಿದೆ. ಸರಕಾರಕ್ಕೆ ಕರುಣವೇ ಇಲ್ಲದಂತಾಗಿದೆ ಎಂದು ಕಿಡಿಕಾರಿದರು. ಆಹಾರ ಪದಾರ್ಥಗಳ ಬೆಲೆ ಏರಿಕೆ ಯಾಗಿದೆ ಎಂಬ ನೆಪಯೊಡ್ಡಿ ಹೋಟೆಲ್ ಗಳು ಬೆಲೆ ಏರಿಕೆ ಮಾಡಬಾರದು. ಹಾಗೇ ಬೆಲೆ ಏರಿಕೆ ಮಾಡಿದ ಹೋಟೆಲ್ ಹೋಗಿ ಚೆನ್ನಾಗಿ ತಿಂದು, ಹಳೆ ಬೆಲೆಯನ್ನೆ ಪಾವತಿಸುತ್ತೇವೆ. ಹೆಚ್ಚಿಸಿದ ಬೆಲೆ ಕೊಡುವುದಿಲ್ಲ ಎಂದು ಹೇಳಿದರು.
ಬಿಟ್ ಕಾಯಿನ್ ಸಿಬಿಐ ತನಿಖೆಯಾಗಲಿ: ಬಿಟ್ ಕಾಯಿನ್ ಸ್ವರೂಪ ದರೋಡಕೊರರಿಗೆ ಮಾತ್ರ ಅರ್ಥ ಆಗುತ್ತದೆ. ನಮ್ಮಂಥೆ ಜನ ಸಾಮಾನ್ಯರಿಗೆ ಅರ್ಥ ಆಗಲಿಲ್ಲ. ಜಗದಗಲ ಹಬ್ಬಿರುವ ಬಿಟ್ ಕಾಯಿನ್ ಸೋಂಕು ರಾಜ್ಯಕ್ಕೂ ಹರಡಿದೆ. ಈ ಬಗ್ಗೆ ಸಮಗ್ರ ತನಿಖೆಯಾಗಬೇಕು. ಕೇಂದ್ರ ಸರಕಾರವೇ ನೇತೃತ್ವ ವಹಿಸಿ ಸಿಬಿಐ ಮೂಲಕ ತನಿಖೆ ಆಗಬೇಕೆಂದು ಆಗ್ರಹಿಸಿದರು.
ಕಾಂಗ್ರೆಸ್‌ನವರು ನನಗೆ ಬೆಂಬಲ ಕೊಡಲಿ: ಈ ಹಿಂದಿನಿಂದಲೂ ನಾನು ಕಾಂಗ್ರೆಸ್ ಬೆಂಬಲ ಕೊಡುತ್ತಾ ಬಂದಿ ದ್ದೇನೆ. ಈ ಬಾರಿ ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸುತ್ತಿರುವುದರಿಂದ ಕಾಂಗ್ರೆಸ್ ಅಭ್ಯರ್ಥಿಯನ್ನು ಕಣಕ್ಕಿಸಳಿದೆ ತಮಗೆ ಬೆಂಬಲ ನೀಡಬೇಕೆಂದು ವಾಟಾಳ್ ನಾಗರಾಜ್ ಮನವಿ ಮಾಡಿದರು. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಭೇಟಿಯಾಗಿ ಚರ್ಚಿಸು ವುದಾಗಿ ತಿಳಿಸಿದರು.