ಬೆಂಗಳೂರು: ಎಸ್‌ಎಸ್‌ಎಲ್‌ಸಿ, ಫಾರ್ಮಸಿ, ಎಂಜಿನಿಯರಿಂಗ್ ಸೇರಿದಂತೆ ಎಲ್ಲ ಪರೀಕ್ಷೆಗಳನ್ನು ರದ್ದುಗೊಳಿಸಿ ವಿದ್ಯಾರ್ಥಿಗಳನ್ನು ಉತ್ತೀರ್ಣಗೊಳಿಸಬೇಕು ಎಂದು ಒತ್ತಾಯಿಸಿ ಕನ್ನಡ ಚಳವಳಿ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಮೈಸೂರು ಬ್ಯಾಂಕ್ ವೃತ್ತದಲ್ಲಿ ವಿನೂತನವಾಗಿ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಅವರು, ಕೋವಿಡ್-19 ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು, ಪೋಷಕರು ತೀವ್ರ ಸಂಕಷ್ಟದಲ್ಲಿದ್ದಾರೆ. ಈಗ ಪರೀಕ್ಷೆ ಬರೆಯಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ತರಗತಿಯಲ್ಲಿ ವಿದ್ಯಾರ್ಥಿಗಳ ಕಲಿಕಾ ಮಾನದಂಡ ಅನುಸರಿಸಿ ವಿದ್ಯಾರ್ಥಿಗಳನ್ನು ತೇರ್ಗಡೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಕಾನ್ಪುರ ಐಐಟಿ ಸೇರಿದಂತೆ 12 ರಾಜ್ಯಗಳು ಈಗಾಗಲೇ ಕೋವಿಡ್-19 ಕಾರಣದಿಂದ ಎಲ್ಲ ಪದವಿ (ಅಂತಿಮ ಪರೀಕ್ಷೆ ಹೊರತುಪಡಿಸಿ) ಪರೀಕ್ಷೆಯನ್ನು ರದ್ದುಗೊಳಿಸಿವೆ. ಎಂಜಿನಿಯರಿಂಗ್ , ಫಾರ್ಮಸಿ, ಡಿಪ್ಲೊಮ ಪದವಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸದೆ ಉತ್ತೀರ್ಣ ಗೊಳಿಸಬೇಕೆಂದು ಆಗ್ರಹಿಸಿದರು.
ದೇಶ ಹಾಗೂ ರಾಜ್ಯಾದ್ಯಂತ ಮಹಾಮಾರಿ ಕೋವಿಡ್-19 ವ್ಯಾಪಿಸುತ್ತಿದೆ. ಈ ಸಂದರ್ಭದಲ್ಲಿ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳು ಹಾಜರಾಗಿ ಅವರಲ್ಲಿ ಸೋಂಕು ಹರಡಿದರೆ ಮತ್ತಷ್ಟು ಆತಂಕ ಹೆಚ್ಚಾಗುತ್ತದೆ. ಹೀಗಾಗಿ ತರಗತಿಯಲ್ಲಿ ವಿದ್ಯಾರ್ಥಿಗಳ ಕಲಿಕಾ ಮಾನದಂಡ ಅನುಸರಿಸಿ ತೇರ್ಗಡೆ ಮಾಡುವುದೇ ಸೂಕ್ತ ಎಂದು ಹೇಳಿದರು.