ಮೈಸೂರು: ಸಾಹಿತ್ಯ, ಸಂಸ್ಕೃತಿ, ಇತಿಹಾಸದ ಕ್ಷೇತ್ರದಲ್ಲಿ ವಸು ಮಳಲಿ ತಮ್ಮದೇ ಆದ ಪರಂಪರೆಯನ್ನು ಮುಂದಿನ ಜನಾಂಗಕ್ಕೆ ಬಿಟ್ಟು ಹೋಗಿದ್ದಾರೆ ಎಂದು ವಿಶ್ರಾಂತ ಕುಲಪತಿ ಹಾಗೂ ಇತಿಹಾಸ ತಜ್ಞ ಪ್ರೊ.ಶೇಖ್ ಅಲಿ ಹೇಳಿದರು.
ನಗರದಲ್ಲಿ ಭಾನುವಾರ ಮಳಲಿ ಕುಟುಂಬ, ಕರ್ನಾಟಕ ವಿಚಾರ ವೇದಿಕೆ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಪ್ರೊ.ವಸು ಮಳಲಿ ಅವರ “ಗಡಿಗಳು ಗೋಡೆಗಳೆ?’ ವೈಚಾರಿಕ ಲೇಖನಗಳ ಸಂಗ್ರಹ ಕೃತಿ ಬಿಡುಗಡೆ ಮತ್ತು ವಸು ಮಳಲಿ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ವಸು ಮಳಲಿ ಕನ್ನಡ ಸಾರಸ್ವತ ಲೋಕಕ್ಕೆ ನೀಡಿರುವ ಕೃತಿಗಳು ಅನಘ ರತ್ನಗಳಿದ್ದಂತೆ. ಅವರ ಬರವಣಿಗೆ ಎಲ್ಲರಿಗೂ ಅನುಕೂಲವಾಗುವ ಉಪಯುಕ್ತ ಕ್ರಮದಲ್ಲಿ ಇರುತ್ತಿತ್ತು. ಯಾರೋ ಹೇಳಿದ್ದನ್ನು, ಓದಿದ್ದನ್ನು ಬರೆಯದೆ ಸ್ವಆಲೋಚನಾ ಕ್ರಮಗಳ ಮೂಲಕ ಹೊಸತನ್ನು ಓದುಗರಿಗೆ ನೀಡಿದ್ದಾರೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಹಿರಿಯರು ತೋರಿದ ಹಾದಿಯಲ್ಲಿ ನಡೆದ ವಸು ಮಳಲಿ, ಇತಿಹಾಸದ ವಿದ್ಯಾರ್ಥಿಯಾಗಿ, ಶಿಕ್ಷಕಿಯಾಗಿ ಪ್ರತಿಯೊಂದನ್ನು ಪ್ರೀತಿಸುತ್ತಿದ್ದ ವ್ಯಕ್ತಿತ್ವದವರು. ಅವರಲಿದ್ದ ಜಾnನವೇ ಕೆಲವರಿಗೆ ಪೋತ್ಸಾಹದಾಯಕವಾಗಲಿದೆ. ಅವರ ಕೃತಿಗಳು ಪ್ರತಿಯೊಬ್ಬ ಓದುಗನಿಗೂ ಲಭ್ಯವಾಗುವಂತಾಗಲು ಗ್ರಂಥಾಲಯದಲ್ಲಿಡಬೇಕು. ಮಾನವ ಕುಲವನ್ನೇ ವಿಶ್ಲೇಷಿಸಿ ಅವರು ರಚಿಸಿರುವ ಕೃತಿ ವಿಭಿನ್ನ ಆಲೋಚನೆಯಿಂದ ಕೂಡಿದೆ. ಪ್ರಕೃತಿಯನ್ನು ಪ್ರೀತಿಸುವ, ಸಂಸ್ಕೃತಿಯನ್ನು ಗೌರವಿಸುವ ಒಟ್ಟಾಗಿ ಬಾಳಬೇಕೆನ್ನುವ ಆಸೆಯನ್ನು ಹೊತ್ತಿದ್ದರು ವಸು ಮಳಲಿ ಎಂದು ಬಣ್ಣಿಸಿದರು.
ಕೃತಿ ಬಿಡುಗಡೆ ಮಾಡಿದ ನಿವೃತ್ತ ಪ್ರಾಧ್ಯಾಪಕ ಪ್ರೊ.ರಾಗೌ ಮಾತನಾಡಿ, ಲಿಖೀತ ಮತ್ತು ಅಲಿಖೀತವಾಗಿ ದಾಖಲಾದ ಇತಿಹಾಸವನ್ನು ಜೋಡಿಸುವಲ್ಲಿ ಮಹತ್ವದ ಪಾತ್ರವನ್ನು ವಸು ಮಳಲಿ ಮಾಡಿದ್ದಾರೆ. ಇತಿಹಾಸವೆಂದರೆ ರಾಜ-ಮಹಾರಾಜರುಗಳಿಗೆ ಮಾತ್ರ ಒತ್ತು ಕೊಡಲಾಗುತ್ತಿತ್ತು. ವಸು ಮಳಲಿಯವರಿಂದ ಸಾಮಾನ್ಯರ ಇತಿಹಾಸ ಜನರಿಗೆ ಮುಟ್ಟುವಂತಾಯಿತು ಎಂದರು.
ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್, ಜಿ.ನಾರಾಯಣ ಸ್ವಾಮಿ, ಡಾ.ವಸು ಅವರ ಸಹಪಾಠಿ ಪಾರ್ವತಿ ನಾರಾಯಣ ಸ್ವಾಮಿ, ಕಸಾಪ ಜಿಲ್ಲಾಧ್ಯಕ್ಷ ಡಾ.ವೈ.ಡಿ.ರಾಜಣ್ಣ, ಪ್ರಕಾಶಕ ಡಿ.ಎನ್.ಲೋಕಪ್ಪ, ಸಮಾಜ ಸೇವಕ ಕೆ.ರಘುರಾಂ ಕಾರ್ಯಕ್ರಮದಲ್ಲಿ ಹಾಜರಿದ್ದರು. ಇದೇ ವೇಳೆ ಬೀದಿ ಮಕ್ಕಳ ಕಲ್ಯಾಣಕ್ಕೆ ಶ್ರಮಿಸುತ್ತಿರುವ ಮಾಯಾ ಸಂಸ್ಥೆಯ ಮುರಳಿ ಅವರಿಗೆ ವಸು ಮಳಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.