ವಸಿಷ್ಠ ಸಿಂಹ ನಟನೆಯ “ಲವ್ ಲಿ’ ಸಿನಿಮಾ ಬೆಂಗಳೂರಿನಲ್ಲಿ ಹಾಗೂ ಎರಡನೇ ಶೆಡ್ನೂಲ್ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಮಲ್ಪೆಯ ಪಡುಕರೆಯಲ್ಲಿ ಮೂರನೇ ಹಂತದ ಚಿತ್ರೀಕರಣದಲ್ಲಿ ತೊಡಗಿದೆ.
“ಲವ್ ಲಿ’ ಚಿತ್ರೀಕರಣಕ್ಕೆಂದೇ ಪಡುಕರೆಯ ಕಡಲ ತೀರದಲ್ಲಿ ಒಂದು ಕೋಟಿ ವೆಚ್ಚದಲ್ಲಿ ಮನೆಯನ್ನು ನಿರ್ಮಾಣ ಮಾಡಲಾಗಿದೆ. ಕೇವಲ 25 ದಿನದಲ್ಲಿ ಈ ಮನೆ ನಿರ್ಮಾಣ ಮಾಡಲಾಗಿದ್ದು, ಕಳೆದ ಹತ್ತು ದಿನಗಳಿಂದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ವಸಿಷ್ಠ ಸಿಂಹ, ಸಾಧುಕೋಕಿಲ, ನಾಯಕಿ ಸ್ಟೆಫಿ ಪಟೇಲ್ ಸೇರಿದಂತೆ ಹಲವರು ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ.
ನಟ ವಸಿಷ್ಠ ಸಿಂಹ ಮಾತನಾಡಿ, ಇದೊಂದು ಕಮರ್ಷಿಯಲ್ ರೋಮ್ಯಾಂಟಿಕ್ ಲವ್ ಸ್ಟೋರಿ ಸಿನಿಮಾ. ರೌಡಿಸಂ ಕಥಾಹಂದರ ಕೂಡ ಇದೆ. ನೈಜ ಘಟನೆಯಿಂದ ಸ್ಫೂರ್ತಿ ಪಡೆದು ಅದನ್ನು ಸಿನಿಮೀಯ ರೀತಿಯಲ್ಲಿ ಹೇಳ ಹೊರಟಿದ್ದೇವೆ. ಎಂಟರಿಂದ ಹತ್ತು ಭಾವನೆಗಳನ್ನು ಒಮ್ಮೆಲೇ ವ್ಯಕ್ತಪಡಿಸುವ ಅವಕಾಶ ಈ ಚಿತ್ರದಲ್ಲಿ ಸಿಕ್ಕಿದೆ ಎನ್ನುವುದು ವಸಿಷ್ಠ ಮಾತು.
ನಿರ್ದೇಶಕ ಚೇತನ್ ಕೇಶವ್ ಮಾತನಾಡಿ, ಏಳು ದಿನಗಳ ಚಿತ್ರೀಕರಣ ನಡೆಸಿದರೆ ಶೇಕಡಾ 80ರಷ್ಟು ಚಿತ್ರೀಕರಣ ಪೂರ್ಣಗೊಳ್ಳಲಿದೆ. ಲಂಡನ್‌ನಲ್ಲೂ ಚಿತ್ರೀಕರಣ ಮಾಡಬೇಕಿದೆ. ಜನವರಿ ಮೊದಲ ವಾರದಲ್ಲಿ ಚಿತ್ರತಂಡ ಲಂಡನ್‌ಗೆ ತೆರಳಲಿದೆ ಎಂದರು. ವಸಿಷ್ಠ ಸಿಂಹಗೆ ನಾಯಕಿಯಾಗಿ ಜಾರ್ಖಂಡ ಮೂಲದ ಸ್ಟೆಫಿ ಪಟೇಲ್ ನಟಿಸುತ್ತಿದ್ದಾರೆ.
ಉಳಿದಂತೆ ಸಮೀಕ್ಷಾ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಮಾಸ್ಟರ್ ಆನಂದ್ ಪುತ್ರಿ ವಂಶಿಕಾ, ಸಾಧುಕೋಕಿಲ, ದತ್ತಣ್ಣ, ಮಾಳವಿಕಾ, ಶೋಭರಾಜ್ ಸೇರಿದಂತೆ ಹಲವು ಕಲಾವಿದರು ತಾರಾಗಣದಲ್ಲಿದ್ದಾರೆ. ಲವ್ ಲಿ ಚಿತ್ರವನ್ನು ರವೀಂದ್ರ ಕುಮಾರ್ ನಿರ್ಮಾಣ ಮಾಡುತ್ತಿದ್ದಾರೆ