Advertisement

ಸಮ್ಮಿಶ್ರ ಸರ್ಕಾರದಲ್ಲಿ ಆಶ್ರಯ ಮನೆಗೆ ಮೀನಮೇಷ

06:00 AM Oct 27, 2018 | |

ಬೆಂಗಳೂರು: ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದು ಐದು ತಿಂಗಳಾದರೂ ಒಟ್ಟಾರೆ ವಸತಿ ಯೋಜನೆಯಡಿ ಮನೆಗಳನ್ನು ನೀಡುವ ಬಗ್ಗೆ ಸರ್ಕಾರ ಇನ್ನೂ ಮೀನಮೇಷ ಎಣಿಸುತ್ತಿದೆ. ಆರ್ಥಿಕ ವರ್ಷ ಆರಂಭವಾಗಿ ಆರು ತಿಂಗಳು
ಕಳೆದಿದ್ದರೂ ಹೊಸ ಸರ್ಕಾರ ಬಂದ ಐದು ತಿಂಗಳಾದರೂ ವಿಧನಾಸಭಾ ಕ್ಷೇತ್ರವಾರು ಪಂಚಾಯಿತಿಗಳಿಗೆ ಈ ವರ್ಷದ ಮನೆಗಳ ಟಾರ್ಗೆಟ್‌ ಪಟ್ಟಿ ನೀಡಿಲ್ಲ.

Advertisement

ಪ್ರತಿ ವರ್ಷ ಆಗಸ್ಟ್‌, ಸೆಪ್ಟೆಂಬರ್‌ನಲ್ಲಿಯೇ ರಾಜ್ಯ ಸರ್ಕಾರ ಯಾವ ಯೋಜನೆಯಲ್ಲಿ ಯಾವ ವಿಧಾನಸಭಾ ಕ್ಷೇತ್ರಗಳಿಗೆ ಎಷ್ಟು ಮನೆಗಳನ್ನು ನೀಡಲಾಗುತ್ತದೆ ಎಂದು ಶಾಸಕರಿಗೆ ಮನೆಗಳ ಹಂಚಿಕೆ ವಿವರ ಕಳುಹಿಸಿಕೊಡುತ್ತದೆ. ಶಾಸಕರು ತಮ್ಮ ಕ್ಷೇತ್ರಕ್ಕೆ ನಿಗದಿಯಾಗಿರುವ ಮನೆಗಳನ್ನು ಪಂಚಾಯಿತಿವಾರು ಹಂಚಿಕೆ ಮಾಡಲು ಫ‌ಲಾನುಭವಿಗಳ ಆಯ್ಕೆಗೆ ಪಂಚಾಯಿತಿಗಳಿಗೆ ಸೂಚಿಸುತ್ತಾರೆ. ಅದರಂತೆ ಗ್ರಾಮ ಪಂಚಾಯಿತಿಯಿಂದ ಗ್ರಾಮಸಭೆಗಳನ್ನು ಮಾಡಿ, ಫ‌ಲಾನುಭವಿಗಳನ್ನು ಆಯ್ಕೆ ಮಾಡಿ, ರಾಜ್ಯ ಸರ್ಕಾರಕ್ಕೆ ಪಟ್ಟಿ ಕಳುಹಿಸುತ್ತಾರೆ. ಆ ನಂತರ ಸರ್ಕಾರ ಅನುಮತಿ ನೀಡಿ, ಮನೆ ನಿರ್ಮಾಣಕ್ಕೆ ಅನುಮತಿ ನೀಡುತ್ತದೆ. ಸರ್ಕಾರ ಟಾರ್ಗೆಟ್‌ ನೀಡಿದ ನಂತರ ಫ‌ಲಾನುಭವಿಗಳ ಆಯ್ಕೆ ಮಾಡಿ, ರಾಜೀವ್‌ ಗಾಂಧಿ ವಸತಿ ನಿಗಮಕ್ಕೆ ಕಳುಹಿಸಿ ಅನುಮೋದನೆ
ಪಡೆಯಲು ಕನಿಷ್ಠ ಮೂರರಿಂದ ನಾಲ್ಕು ತಿಂಗಳು ಸಮಯ ಬೇಕಾಗುತ್ತದೆ. ಈ ವರ್ಷದ ಟಾರ್ಗೆಟ್‌ನ್ನು ರಾಜ್ಯ ಸರ್ಕಾರ
ಅಕ್ಟೋಬರ್‌ ತಿಂಗಳಾಂತ್ಯಕ್ಕೆ ನೀಡಿದರೂ, ಫ‌ಲಾನುಭವಿಗಳಿಗೆ ಆದೇಶ ದೊರೆತು ಮನೆ ನಿರ್ಮಾಣ ಆರಂಭಿಸಲು ಈ ವರ್ಷ ಮುಗಿದು ಹೋಗುತ್ತದೆ. ವಸತಿ ಇಲಾಖೆ ಮೂಲಗಳ ಪ್ರಕಾರ ಹಣಕಾಸು ಇಲಾಖೆ ಎಲ್ಲದಕ್ಕೂ ಸಾಲ ಮನ್ನಾ ಕಾರಣ ಹೇಳಿ ಮೂಂದೂಡುತ್ತಿದೆ ಎಂದು ತಿಳಿದು ಬಂದಿದೆ. 

ರಾಜೀವ್‌ ಗಾಂಧಿ ವಸತಿ ನಿಗಮದಿಂದ ಬಸವ ವಸತಿ ಯೋಜನೆ, ಇಂದಿರಾ ಆವಾಸ್‌ ಹಾಗೂ ರಾಜ್ಯ ಸರ್ಕಾರದ ಡಾ. ಅಂಬೇಡ್ಕರ್‌ ವಸತಿ ಯೋಜನೆಗಳ ಮೂಲಕ ಮನೆಗಳನ್ನು ನೀಡಲಾಗುತ್ತದೆ. ನಗರದಲ್ಲಿ  ವಾಜಪೇಯಿ ನಗರ ವಸತಿ ಯೋಜನೆ, ದೇವರಾಜ
ಅರಸು ವಸತಿ ಯೋಜನೆ, ಪ್ರಧಾನಮಂತ್ರಿ ಆವಾಸ್‌ ಯೋಜನೆಗಳ ಮೂಲಕ ಫ‌ಲಾನುಭವಿಗಳನ್ನು ಆಯ್ಕೆ ಮಾಡಿ ಮನೆಗಳ ವಿತರಣೆ ಮಾಡಲಾಗುತ್ತದೆ. ಮೂಲಗಳ ಪ್ರಕಾರ ಹಿಂದಿನ ಸರ್ಕಾರದ ಯೋಜನೆಗಳ ನಿಗದಿಯಂತೆ 17-18 ನೇ ಸಾಲಿನ ಆಶ್ರಯ ಮನೆಗಳನ್ನು ಮಾರ್ಚ್‌ನಲ್ಲಿ ಬಿಡುಗಡೆ ಮಾಡಲಾಗಿದ್ದು, ಫ‌ಲಾನುಭವಿಗಳ ಮನೆ ನಿರ್ಮಾಣಕ್ಕೆ ಅನುಮತಿ ದೊರೆತಿದ್ದರೂ, ಸಂಪೂರ್ಣ ಹಣ ಬಿಡುಗಡೆಯಾಗದೇ ಆ ಮನೆಗಳ ಕಾರ್ಯ ಇನ್ನೂ ಪೂರ್ಣಗೊಂಡಿಲ್ಲ ಎಂದು ತಿಳಿದು ಬಂದಿದೆ.

4 ಲಕ್ಷ ಮನೆಗಳ ನಿರ್ಮಾಣ ಗುರಿ: ಸಮ್ಮಿಶ್ರ ಸರ್ಕಾರ ಐದು ವರ್ಷದಲ್ಲಿ 20 ಲಕ್ಷ ಮನೆಗಳನ್ನು ನಿರ್ಮಾಣ ಮಾಡುವ ಗುರಿ ಹೊಂದಿದೆ. ಪ್ರತಿ ವರ್ಷ ಕನಿಷ್ಠ 4 ಲಕ್ಷ ಮನೆಗಳ ನಿರ್ಮಾಣಕ್ಕೆ ರಾಜ್ಯ ಸರ್ಕಾರ ತೀರ್ಮಾನಿಸಿದೆ. ಗ್ರಾಮೀಣ ಪ್ರದೇಶಕ್ಕೆ 2.5 ಲಕ್ಷ ಮನೆ ಹಾಗೂ ನಗರ ಪ್ರದೇಶಕ್ಕೆ 1.5 ಲಕ್ಷ ಮನೆಗಳ ನಿರ್ಮಾಣದ ಗುರಿ ಹೊಂದಲಾಗಿದೆ. ಆದರೆ, ಗ್ರಾಮೀಣ ಪ್ರದೇಶದಲ್ಲಿ ಫ‌ಲಾನುಭವಿಗಳ ಆಯ್ಕೆಗೆ ಆದಾಯ ಮಿತಿಯನ್ನು 32 ಸಾವಿರದಿಂದ 87 ಸಾವಿರ ಅಥವಾ ಬಿಪಿಎಲ್‌ ಕಾರ್ಡ್‌ಗೆ ಇರುವ ಮಿತಿ 1.20 ಲಕ್ಷ ರೂ.ಗೆ ಹೆಚ್ಚಳ ಮಾಡಲು ವಸತಿ ಇಲಾಖೆ ಹಣಕಾಸು ಇಲಾಖೆಗೆ ಮನವಿ ಮಾಡಿಕೊಂಡಿದೆ ಎಂದು ಹೇಳಲಾಗುತ್ತಿದೆ.

ಈ ವರ್ಷದಲ್ಲಿ 4 ಲಕ್ಷ ಆಶ್ರಯ ಮನೆ ನೀಡಲು ಸರ್ಕಾರ ತೀರ್ಮಾನಿಸಿದೆ. ಸಿಎಂ ಜತೆ ಸಭೆ ನಡೆಸಲಾಗಿದೆ. ಗ್ರಾಮೀಣ
ಫ‌ಲಾನುಭವಿಗಳ ಆದಾಯದ ಮಿತಿ ಹೆಚ್ಚಳ ಮಾಡುವ ಕುರಿತು ಆರ್ಥಿಕ ಇಲಾಖೆಗೆ ಮನವಿ ಮಾಡಿಕೊಂಡಿದ್ದರಿಂದ ವಿಳಂಬವಾಗಿದೆ.
ಆರ್ಥಿಕ ಮಿತಿ ಹೆಚ್ಚಳವಾಗುವ ಸಾಧ್ಯತೆಯಿದೆ. ಹಣಕಾಸು ಇಲಾಖೆ ಒಪ್ಪಿಗೆ ದೊರೆತ ತಕ್ಷಣ ಮನೆಗಳ ಟಾರ್ಗೆಟ್‌ ನೀಡಲಾಗುವುದು.

● ಯು.ಟಿ. ಖಾದರ್ ವಸತಿ ಸಚಿವ

Advertisement

ಹಿಂದಿನ ಸರ್ಕಾರದಲ್ಲಿ ಮಂಜೂರಾದ ಮನೆಗಳ ನಿರ್ಮಾಣ ಆರಂಭವಾಗಿದೆ. ಆದರೆ, ಕಳೆದ ವರ್ಷದ ಮನೆಗಳಿಗೆ ಹಣ ಇನ್ನೂ ಬಿಡುಗಡೆಯಾಗಿಲ್ಲ. ಈ ವರ್ಷದಲ್ಲಿ ಎಷ್ಟು ಮನೆಗಳನ್ನು ನಿರ್ಮಾಣ ಮಾಡಬೇಕೆಂದು ಸರ್ಕಾರ ಗುರಿ ನಿಗದಿ ಮಾಡಿಲ್ಲ. ಹೀಗಾಗಿ ಈ ವರ್ಷ ಆಶ್ರಯ ಮನೆಗಳು ಯಾವಾಗ ಬರುತ್ತವೆ ಎನ್ನುವ ಬಗ್ಗೆ ಇನ್ನೂ ಮಾಹಿತಿಯಿಲ್ಲ. 
● ಸುನೀಲ್‌ ಕುಮಾರ್‌, ಬಿಜೆಪಿ ಶಾಸಕ

● ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next