ಹೊಸದಿಲ್ಲಿ : ವಾಯವ್ಯ ದಿಲ್ಲಿಯ ವಸಂತ್ ಕುಂಜ್ ಪ್ರದೇಶದಲ್ಲಿನ ಕಿಷನ್‌ಗಂಜ್‌ನಲ್ಲಿನ ತನ್ನ ಮನೆಯಲ್ಲಿ ತಂದೆ, ತಾಯಿ ಮತ್ತು ಸಹೋದರಿಯನ್ನು ಕ್ಷುಲ್ಲಕ ಕಾರಣಕ್ಕೆ ಕೊಂದ 19ರ ಹರೆಯದ ಸೂರಜ್ ಅಲಿಯಾಸ್ ಸರ್ನಾಮ್ ವರ್ಮಾ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಸೂರಜ್ ನಿನ್ನೆ ಬುಧವಾರ ಬೆಳಗ್ಗೆ ತನ್ನ ತಂದೆ ಮಿಥಿಲೇಶ್, ತಾಯಿ ಸಿಯಾ ಮತ್ತು ಸಹೋದರಿಯನ್ನು ಇರಿದು ಕೊಂದಿದ್ದ. ಅನಂತರ ಮನೆಯನ್ನು ಚೆಲ್ಲಾಪಿಲ್ಲಿ ಮಾಡಿ ದರೋಡೆ ಯತ್ನ ನಡೆದಿರುವಂತೆ ಬಿಂಬಿಸುವ ಯತ್ನವನ್ನೂ ಮಾಡಿದ್ದ. ಹಾಗಿದ್ದರೂ ಆತನನ್ನು ಪೊಲೀಸರು ಕೊಲೆಗಾರನೆಂದು ಬಂಧಿಸುವಲ್ಲಿ ಸಫಲರಾದರು.
ಕೊಲೆ ಆರೋಪಿ ಸೂರಜ್ 12ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿ. ಆದರೆ ಆತನಿಗೆ ಕಲಿಕೆಯಲ್ಲಿ ಮನಸ್ಸಿರಲಿಲ್ಲ; ಹಾಗೆಂದು ಶೋಕಿ ಹಾಗೂ ಐಶಾರಾಮಿ ಜೀವನಕ್ಕೆ ಮಾರು ಹೋಗಿ ಬೇಜವಾಬ್ದಾರಿಯಿಂದ ನಡೆಯುತ್ತಿದ್ದ. ವಾಟ್ಸಾಪ್ ಗ್ರೂಪ್ ಒಂದರ ಸದಸ್ಯನಾಗಿದ್ದ ಆತ ದಿನವೂ ನೈಟ್ ಕ್ಲಬ್, ಡಿಸ್ಕೊಥೆಕ್ ಗೆ ಹೋಗುವ ವಿಷಯದಲ್ಲಿ ಸ್ನೇಹಿತರ ಜತೆ ಮಾತನಾಡುತ್ತಿದ್ದ.
ವೃತ್ತಿಯಲ್ಲಿ ಗುತ್ತಿಗೆದಾರನಾಗಿರುವ ಸೂರಜ್ ನ ತಂದೆ ಮಗನನ್ನು ಗುರುಗ್ರಾಮದ ಖಾಸಗಿ ವಿದ್ಯಾಲಯವೊಂದಕ್ಕೆ ಸಿವಿಲ್ ಇಂಜಿನಿಯರಿಂಗ್‌ನಲ್ಲಿ ಡಿಪ್ಲೋಮಾ ಶಿಕ್ಷಣಕ್ಕೆ ಪ್ರವೇಶಾತಿ ದೊರಕಿಸಿದ್ದರು.
ಆದರೆ ಎಷ್ಟೇ ಬುದ್ಧಿ ಹೇಳಿದರೂ ಸುಧಾರಿಸದ ಮಗನ ಬೇಜವಾಬ್ದಾರಿ ವರ್ತನೆಯಿಂದ ರೋಸಿ ಹೋಗಿದ್ದ ಅವರು ಮಗನಿಗೆ ಮನೆಯಲ್ಲಿ (ಆ.15ರಂದು) ಚೆನ್ನಾಗಿ ಬಾರಿಸಿದ್ದರು. ಸಿಟ್ಟಿಗೆದ್ದಿದ್ದ ಮಗ ಇಡಿಯ ಕುಟುಂಬವನ್ನೇ ಕೊಲ್ಲಲು ಅಂದೇ ನಿರ್ಧರಿಸಿದ್ದ.
ಆ ಪ್ರಕಾರ ನಿನ್ನೆ ಬುಧವಾರ ನಸುಕಿನ ವೇಳೆ ತಂದೆ, ತಾಯಿ, ಸಹೋದರಿಯನ್ನು ಇರಿದು ಕೊಂದ. ಬಳಿಕ ಮನೆಯಲ್ಲಿ ದರೋಡೆ ಯತ್ನ ನಡೆದಂತೆ ವಸ್ತುಗಳನ್ನೆಲ್ಲ ಚೆಲ್ಲಾಡಿದ್ದ. ಆದರೂ ಪೊಲೀಸರು ಚಾಣಾಕ್ಷತೆಯಿಂದ ಆತನನ್ನು ಬಂಧಿಸುವಲ್ಲಿ ಸಫಲರಾದರು.