ಆಲಮಟ್ಟಿ: ಬರಗಾಲದ ಬವಣೆಯಲ್ಲಿಯೇ ಬೇಯುತ್ತಿರುವ ವಿಜಯಪುರ ಜಿಲ್ಲೆ ಈ ಬಾರಿಯೂ ವರುಣನ ಅವಕೃಪೆಗೆ ಪಾತ್ರವಾಗಿದ್ದು ಈ ಬಾರಿಯೂ ಜನರು ಗುಳೆ ಹೋಗುವ ಸ್ಥಿತಿ ತಲೆದೋರಿದೆ. ರಾಜ್ಯದಲ್ಲಿ ಮುಂಗಾರು ಹಂಗಾಮು ಹಾಗೂ ಹಿಂಗಾರು ಹಂಗಾಮಿನಲ್ಲಿ ಸಮರ್ಪಕವಾಗಿ ಮಳೆಯಾಗದಿರುವುದರಿಂದ ಇಲ್ಲಿಯ ರೈತರು ವರುಣನ್ನು ನಂಬಿ ಬಿತ್ತನೆ ಮಾಡಿದ್ದರೆ ಕೆಲ ಜಮೀನುಗಳಲ್ಲಿ ಬೆಳೆಗಳು ಸಸಿಯಾಗಿರುವಾಗಲೇ ಕಮರಿ ಹೋಗುವಂತಾಗಿದೆ. ಇನ್ನು ಹಲವಾರು ರೈತರು ತುಟ್ಟಿ ಬೀಜ, ಗೊಬ್ಬರ ಹಾಕಿ ಬಿತ್ತನೆ ಮಾಡಿದ್ದರೂ ಕೂಡ ಬೆಳೆಯು ಭೂಮಿಯಿಂದ ಮೇಲೆ ಬಾರದೇ ನೆಲದಲ್ಲಿಯೇ ಕಮರಿಹೋಗಿದೆ. ಅಲ್ಲಲ್ಲಿ ಕೆಲ ರೈತರ ಜಮೀನಿನಲ್ಲಿ ಬೆಳೆ (ನಾಟಿಗೆ) ಬೆಳೆದಿದ್ದರೂ ತೇವಾಂಶವಿಲ್ಲದೇ ಒಣಗುವ ಸ್ಥಿತಿಯಲ್ಲಿದೆ.
ರೊಟ್ಟಿ ಇನ್ನು ತುಟ್ಟಿ: ಉತ್ತರಕರ್ನಾಟಕ ಜನತೆಯ ಪ್ರಮುಖ ಆಹಾರ ಬೆಳೆಯಾಗಿರುವ ಬಿಳಿ ಜೋಳವು ಈ ಬಾರಿ ಹಿಂಗಾರು ಮಳೆಯಾಗದೇ ಇರುವುದರಿಂದ ಬಹುತೇಕ ರೈತರು ಬಿತ್ತನೆ ಮಾಡಿಲ್ಲ, ಇನ್ನು ಬಿತ್ತಿರುವ ಜಮೀನಿನಲ್ಲಿಯೂ ಫಸಲು ಒಣಗುತ್ತಿದೆ. ಇದರಿಂದ ಈ ಬಾರಿ ರೊಟ್ಟಿ ತುಟ್ಟಿಯಾಗಲಿದೆ.
ಇದರಿಂದ ಉತ್ತರಕರ್ನಾಟಕ ಭಾಗದಲ್ಲಿ ವ್ಯಂಗೋಕ್ತಿಯಾಗಿರುವಂತೆ ಮಳೆಯಾದರೆ ಬೆಳೆ ಇಲ್ಲದಿದ್ದರೆ ಗುಳೆ ಎನ್ನುವಂತೆ ಇಲ್ಲಿಯ ಜನರ ಬದುಕಿನೊಂದಿಗೆ ವರುಣ ಚೆಲ್ಲಾಟವಾಡುತ್ತಿದ್ದಾನೆ. ಅಖಂಡ ವಿಜಯಪುರ ಜಿಲ್ಲೆ ಪಂಚ ನದಿಗಳ ಬೀಡು ಎಂದು ಖ್ಯಾತಿ ಹೊಂದಿದ್ದರೂ ಬೇಸಿಗೆಯಲ್ಲಿ ಕುಡಿಯಲು ನೀರು ಸಿಗದ ಸ್ಥಿತಿ ಈ ಭಾಗದಲ್ಲಿದೆ. ಇದರಿಂದ ರೈತ ಕುಟುಂಬಗಳು ವರುಣನ ಅವಕೃಪೆಯಿಂದ ಬೆಳೆ ಹಾನಿಯಾಗುವಂತಾಗಿದ್ದರೆ, ದುಡಿಯುವ ಕೈಗಳಿಗೆ ಕೆಲಸವಿಲ್ಲ. ರೈತರನ್ನು ನಂಬಿದ ಸಾಕು ಪ್ರಾಣಿಗಳಾದ ಎತ್ತು, ಹಸು, ಎಮ್ಮೆ, ಕುರಿ, ಆಡು, ಕೋಳಿಗಳ ಸ್ಥಿತಿ ಇನ್ನೂ ಚಿಂತಾಜನಕ. ಇದರಿಂದ ನಿತ್ಯ ಕುಟುಂಬ ನಿರ್ವಹಣೆ ಮಾಡುವುದು ಹೇಗೆ? ಎಂದು ರೈತರು ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುವಂತಾಗಿದೆ.
ನೀರಿಗೆ ಬರ: ಮಂಜಪ್ಪ ಹರ್ಡೇಕರ ಅವರ ಕರ್ಮಭೂಮಿ ಆಲಮಟ್ಟಿಯಲ್ಲಿ ಶಾಸ್ತ್ರಿ ಸಾಗರ ಹಾಗೂ ಮುದ್ದೇಬಿಹಾಳ ತಾಲೂಕಿಗೆ ಅಂಟಿಕೊಂಡಿರುವ ಯಾದಗಿರಿ ಜಿಲ್ಲೆಯಲ್ಲಿ ಬಸವಸಾಗರ ಜಲಾಶಯಗಳಿದ್ದರೂ ಕೂಡ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಪರದಾಡುವಂತಾಗುತ್ತಿದ್ದರೆ ಈ
ಬಾರಿ ಚಳಿಗಾಲದಲ್ಲಿಯೇ ಪರದಾಡುವ ಸ್ಥಿತಿ ನಿರ್ಮಾಣವಾಗುವಂತಾಗಿದೆ. ಶಾಸ್ತ್ರಿ ಜಲಾಶಯವು 123.081 ಟಿಎಂಸಿ ಸಂಗ್ರಹ ಸಾಮರ್ಥ್ಯದ ಜಲಾಶಯವಾಗಿದ್ದು ಒಂದು ವರ್ಷಕ್ಕೆ ಅವಳಿ ಜಿಲ್ಲೆಗಳಿಗೆ ಕೃಷಿ, ಕೆರೆ ತುಂಬುವ ಯೋಜನೆ, ಕುಡಿಯುವ ನೀರು, ಭಾಷ್ಪೀಕರಣ, ಬಹುಹಳ್ಳಿ ಕುಡಿಯುವ ನೀರಿನ ಯೋಜನೆ ಹೀಗೆ ಎಲ್ಲ ಯೋಜನೆಗಳು ಸೇರಿದ್ದರೂ ವಾರ್ಷಿಕವಾಗಿ ಬಳಕೆಯಾಗುವದು ಕೇವಲ 20-30 ಟಿಎಂಸಿ ಮಾತ್ರ. ಈ ಭಾಗದ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಪ್ರತಿ ವರ್ಷ ಜಲಾಶಯ ತುಂಬಿದ್ದರೂ ಕೂಡ ಹನಿ ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗುತ್ತಲಿದೆ. ಆಲಮಟ್ಟಿ ಅಣೆಕಟ್ಟು ಸಮುದ್ರ ಮಟ್ಟದಿಂದ 488.948 ಮೀ. ಎತ್ತರದಲ್ಲಿದೆ. ಅಣೆಕಟ್ಟು 1564.83 ಮೀ. ಉದ್ದ ಹೊಂದಿದೆ.
ಅಲ್ಲದೆ 19.6 ಮೀ.ವರೆಗೆ ನೀರು ಸಂಗ್ರಹ ಮಾಡುವ ವ್ಯವಸ್ಥೆಯಿದ್ದರೂ ಕೂಡ ಮಹಾರಾಷ್ಟ್ರವು ಯಾವ ಸೂಚನೆ ನೀಡದೆ ಅತಿ ಮಳೆಯಾದ ಸಂದರ್ಭದಲ್ಲಿ ಏಕಾಏಕಿ ನೀರು ಬಿಡುಗಡೆ ಮಾಡುತ್ತದೆ. ಇದರಿಂದ ಜಲಾಶಯದ ಸಂಗ್ರಹ ಸಾಮರ್ಥ್ಯಕ್ಕೆ ಅನುಗುಣವಾಗಿರಿಸಿಕೊಂಡು ಉಳಿದ ನೀರನ್ನು ನಾರಾಯಣಪುರ ಜಲಾಶಯಕ್ಕೆ ಹರಿಸಲಾಗುತ್ತಿದೆ. ಆಲಮಟ್ಟಿ ಶಾಸ್ತ್ರಿ ಸಾಗರ ಜಲಾಶಯದಲ್ಲಿ 519.6 ಮೀ. ಎತ್ತರದಲ್ಲಿ 123.081 ಟಿಎಂಸಿ ನೀರು ಸಂಗ್ರಹ ಮಾಡಿಕೊಂಡು ಅಖಂಡ ಜಿಲ್ಲೆಯ ಕೆರೆಗಳನ್ನು ಭರ್ತಿ ಮಾಡಬಹುದಾಗಿದ್ದರೂ ಅದನ್ನು ಸರಿಯಾಗಿ ನಿರ್ವಹಣೆ ಮಾಡುವುದೇ ಇಲ್ಲ. ಮೊದಲೇ ಬರದ ನಾಡೆಂದು ಹಣೆಪಟ್ಟಿ ಅಂಟಿಸಿಕೊಂಡಿರುವ ವಿಜಯಪುರ ಜಿಲ್ಲೆಗೆ ಬರದ ನಾಡು, ಗುಳೆ ಬೀಡು ಎಂಬ ಹಣೆಪಟ್ಟಿ ಅಳಿಸಲು ಜಿಲ್ಲೆಯ ಶಾಸಕರು ಪಕ್ಷಾತೀತವಾಗಿ ಸರ್ಕಾರದ ಮೇಲೆ ಒತ್ತಡ ಹೇರಿ ಬರದ ಬೆಂಗಾಡಾಗಿರುವ ಜಿಲ್ಲೆಯನ್ನು ಹಸರೀಕರಣಗೊಳಿಸಲು ಶ್ರಮಿಸಬೇಕಾಗಿದೆ.
ಶಂಕರ ಜಲ್ಲಿ