Advertisement
ತಾಲೂಕಿನ ತೊಗರಿ ಬೆಳೆಗಾರರು ಈಗ ಭಾರಿ ಪ್ರಮಾಣ ನೀರಿನ ಕೊರತೆಯಿಂದ ಬಾಡುತ್ತಿರುವ ತಮ್ಮ ಜಮೀನಿನಲ್ಲಿನ ತೊಗರಿ ಬೆಳೆಯನ್ನು ರಕ್ಷಿಸಿಕೊಳ್ಳಲು ಹರಸಾಹಸ ನಡೆಸಿದ್ದಾರೆ. ತಾಲೂಕಿನ ವಿವಿಧ ಗ್ರಾಮಗಳಲ್ಲಿ ಮಳೆ ಆಶ್ರಿತ ಕೆಲ ರೈತರು ಸಾಲ-ಸೂಲ ಮಾಡಿ ಗೊಬ್ಬರ ತೊಗರಿ ಬೀಜ ಖರೀದಿಸಿ ಬಿತ್ತನೆ ಮಾಡಿದ್ದಾರೆ. ಈ ಬೆಳೆ ಈಗ ಕೆಲವೆಡೆ ಹೂ ಕಟ್ಟುವ ಹಂತ ತಲುಪಿದರೆ, ಮತ್ತೆ ಕೆಲವೆಡೆ ಹೂ ಕಟ್ಟುವ ಮುನ್ನವೆ ತೇವಾಂಶದ ಕೊರತೆಯಿಂದಾಗಿ ಗಿಡದ ಎಲೆ ಉದುರುತ್ತಿರುವ ನೋಟ ಕಂಡು ಬಂದಿದ್ದು, ಮಳೆ ನಿರೀಕ್ಷೆಯಲ್ಲಿಯೇ ರೈತರು ದಿನ ದೂಡುತ್ತಿದ್ದಾರೆ.
Related Articles
Advertisement
ಒಂದೆಡೆ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರು ಇಂಡಿ ಕ್ಷೇತ್ರವನ್ನು ನಿರ್ಲಕ್ಷಿಸಿದ್ದಾರೆ ಎಂದು ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ. ಮತ್ತೂಂದೆಡೆ ತೋಟಗಾರಿಕೆ ಸಚಿವ ಎಂ.ಸಿ. ಮನಗೂಳಿ ಅವರು ಕೇವಲ ಸ್ವಕ್ಷೇತ್ರದತ್ತ ಮಾತ್ರ ಗಮನ ಹರಿಸುತ್ತಾರೆ. ಕಳೆದ ಬಾರಿ ಕೇವಲ ಮೂರು ಪಂಪ್‌ಸೆಟ್ ಬಳಸಿ ನೀರು ಹರಿಸಲಾದ ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆಯ ಕಾಲುವೆಗೆ ಈ ಬಾರಿ ಐದು ಪಂಪ್‌ಸೆಟ್ ಬಳಸಿ ನೀರು ಹರಿಸಿ, ಇಂಡಿ ಶಾಖಾ ಕಾಲುವೆಯನ್ನು ನಿರ್ಲಕ್ಷಿಸಿದ್ದಾರೆ ಎಂಬ ಆರೋಪವೂ ಈ ಭಾಗದ ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಮತ್ತೂಂದೆಡೆ ಸಂಬಂಧಿಸಿದ ಯುಕೆಪಿ ಅಧಿಕಾರಿಗಳು ಕಾಲುವೆಗೆ ಸಮರ್ಪಕ ನೀರು ಹರಿಸುವಲ್ಲಿ ವಿಫಲರಾಗಿದ್ದಾರೆ. ಸರ್ಕಾರ ಕೂಡಲೆ ಇನ್ನಾದರೂ ಎಚ್ಚೆತ್ತು ಇಂಡಿ ಶಾಖಾ ಕಾಲುವೆಗೆ ನೀರು ಹರಿಸಬೇಕು. ಈ ಮೂಲಕ ನೀರಿಲ್ಲದೆ ಬಾಡುತ್ತಿರುವ ತೊಗರಿ ಬೆಳೆಯನ್ನು ರಕ್ಷಿಸಬೇಕು. ಇಲ್ಲವಾದರೆ
ಮುಂಬರುವ ದಿನಗಳಲ್ಲಿ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಕಾಲುವೆ ಆಶ್ರಿತ ರೈತರು ಸರ್ಕಾರಕ್ಕೆ ಎಚ್ಚರಿಸಿದ್ದಾರೆ. ಉಮೇಶ ಬಳಬಟ್ಟಿ