Advertisement
ಕಾಸರಗೋಡಿನ ಚೇರಂಗೈಯಲ್ಲಿ ಮತ್ತೆ ತೀವ್ರ ಕಡಲ್ಕೊರೆತ ಉಂಟಾಗಿದ್ದು, ಐದು ಮನೆಗಳಿಗೆ ಹಾನಿಯಾಗಿದೆ. ಈ ಹಿನ್ನೆಲೆಯಲ್ಲಿ ಚೇರಂಗೈ ಕಡಲ ಕಿನಾರೆ ಯಲ್ಲಿರುವ ಹಲವು ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ. ತೆಂಗಿನ ಮರಗಳು ಧರಾಶಾಯಿಯಾಗಿವೆೆ. ಕೋಟಿಕುಳಂ, ತೃಕ್ಕನ್ನಾಡ್ ಮಾಳಿಗೆವಳಪ್ಪು ಕಡಪ್ಪುರ ಮತ್ತು ಗೋಪಾಲ್‌ಪೇಟೆ ಕಡಪ್ಪುರ ಪರಿಸರದಲ್ಲಿ ತೀವ್ರ ಕಡಲ್ಕೊರೆತ ಉಂಟಾಗಿದ್ದು, ಈ ಹಿನ್ನೆಲೆಯಲ್ಲಿ ಈ ಪರಿಸರದ 25 ಕುಟುಂಬಗಳನ್ನು ಫಿಶರೀಸ್ ಶಾಲೆ ಮತ್ತು ಕೋಟಿಕುಳಂ ಸರಕಾರಿ ಯು.ಪಿ. ಶಾಲೆಗೆ ಸ್ಥಳಾಂತರಿಸಲಾಗಿದೆ.
ಮಂಜೇಶ್ವರ ಸಹಿತ ವಿವಿಧೆಡೆ ಸಮುದ್ರ ಕಿನಾರೆಯಲ್ಲಿ ಪೊಲೀಸರು ಹಾಗೂ ಕರಾವಳಿ ಪೊಲೀಸರು ಕಟ್ಟೆಚ್ಚರ ಪಾಲಿಸುತ್ತಿದ್ದಾರೆ. ಉಪ್ಪಳ ಬಳಿಯ ಹನುಮಾನ್ ನಗರ, ಮಣಿಮುಂಡ, ಮೂಸೋಡಿ, ಕಣ್ವತೀರ್ಥ ಮೊದಲಾದೆಡೆಗಳಲ್ಲಿ ಪೊಲೀಸರು ಗಸ್ತು ತೀವ್ರಗೊಳಿಸಿದ್ದಾರೆ. ಸಮುದ್ರಕ್ಕೆ ತೆರಳದಂತೆ ಬೆಸ್ತರಿಗೆ ಮುನ್ನೆಚ್ಚರಿಕೆ ನೀಡಿಲಾಗಿದೆ. ಈ ಸಮುದ್ರ ಕಿನಾರೆಯಲ್ಲಿ ಇತ್ತೀಚೆಗೆ ಭಾರೀ ಕಡಲ್ಕೊರೆತ ಉಂಟಾಗಿತ್ತು. ಕಾಸರಗೋಡು ಜಿಲ್ಲೆಯ ಬಹುತೇಕ ಹೊಳೆಗಳು ಉಕ್ಕಿ ಹರಿಯುತ್ತಿದ್ದು, ತಗ್ಗು ಪ್ರದೇಶಗಳೆಲ್ಲ ನೀರಿನಿಂದ ಆವೃತವಾಗಿವೆ. ಜಿಲ್ಲೆಯಲ್ಲಿ ಅಪಾಯಕಾರಿ ಸ್ಥಿತಿಯಿದ್ದು, ಮುಂಜಾಗ್ರತೆ ವಹಿಸುವಂತೆ ವಿನಂತಿಸಲಾಗಿದೆ. ದೋಣಿ ಮಗುಚಿ ಸಾವು
ಪಯ್ಯನ್ನೂರು ರಾಮಂತಳಿಯಲ್ಲಿ ಮೀನುಗಾರಿಕಾ ದೋಣಿ ಮಗುಚಿ ಮೀನುಗಾರಿಕೆ ನಡೆಸುತ್ತಿದ್ದ ರಾಮಂತಳಿ ಕುನ್ನುಂಪುರ ಕಂಡೋತ್ತ್ ಪಂಡಾರವಳಪ್ಪಿಲ್ ಭಾಸ್ಕರನ್ (55) ಸಾವಿಗೀಡಾದರು. ಆ.15 ರಂದು ರಾತ್ರಿ ಹೊಳೆಯಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾಗ ಅಪಾಯ ಸಂಭವಿಸಿದೆ. ಜತೆಯಲ್ಲಿದ್ದ ಬಾಲನ್ ಈಜಿ ದಡ ಸೇರಿ ದ್ದಾರೆ. ಹೊಳೆ ಬದಿಯಲ್ಲಿ ಭಾಸ್ಕರನ್ ಅವರ ಮೃತದೇಹ ಗುರುವಾರ ಬೆಳಗ್ಗೆ ಪತ್ತೆಯಾಯಿತು.
Related Articles
ಚಂದ್ರಗಿರಿ ಹೊಳೆ ಉಕ್ಕಿ ಹರಿಯುತ್ತಿದ್ದು ಈ ಹಿನ್ನೆಲೆಯಲ್ಲಿ ಹೊಳೆ ದಡದ ಸುಮಾರು 25 ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಕಾಸರಗೋಡು ಕೊರ ಕ್ಕೋಡಿನ ತಗ್ಗು ಪ್ರದೇಶದಲ್ಲಿ ವಾಸಿಸುವ 25 ಕುಟುಂಬಗಳನ್ನು ಕಂದಾಯ ಇಲಾಖೆ, ಪೊಲೀಸ್, ಅಗ್ನಿ ಶಾಮಕ ದಳ ಅಧಿಕಾರಿಗಳು ಸಂಯುಕ್ತವಾಗಿ ಸಂಬಂಧಿಕರ ಮನೆಗಳಿಗೆ ಸ್ಥಳಾಂತರಿಸಿದರು. ಕರ್ನಾಟಕದ ವಿವಿಧೆಡೆ ಭಾರೀ ಮಳೆಯಾಗುತ್ತಿರುವುದರಿಂದ ಚಂದ್ರಗಿರಿ ಹೊಳೆಯಲ್ಲಿ ಮಳೆ ನೀರು ಉಕ್ಕಿ ಹರಿಯುತ್ತಿದೆ. ಚಂದ್ರಗಿರಿ ಹೊಳೆಯ ಇಕ್ಕೆಡೆಗಳಲ್ಲಿ ವಾಸಿಸುವ ಕುಟುಂಬಗಳಿಗೆ ಜಾಗೃತೆ ಪಾಲಿಸುವಂತೆಯೂ ಸೂಚನೆ ನೀಡಲಾಗಿದೆ. ತಳಂಗರೆ ಪಡಿಂಞಾರ್ ಪ್ರದೇಶದಲ್ಲೂ ನೀರಿನ ಮಟ್ಟ ಏರುತ್ತಿದ್ದು, ರಸ್ತೆ ನೀರಿನಲ್ಲಿ ಮುಳುಗಿದೆ.
Advertisement
ಮನೆ ಕುಸಿತ ಮಾನ್ಯದ ಲಕ್ಷಂವೀಡು ನಿವಾಸಿ ಸದಾನಂದ ಅವರ ಮನೆ ಕುಸಿದು ಬಿದ್ದಿದೆ. ಮನೆ ಕುಸಿಯುತ್ತಿರುವ ಸದ್ದು ಕೇಳಿ ಮನೆಯಿಂದ ಹೊರಗೆ ಓಡಿದ್ದರಿಂದ ಮನೆ ಮಂದಿ ಅಪಾಯದಿಂದ ಪಾರಾದರು. ಬೇಳ ಗ್ರಾಮಾಧಿಕಾರಿ ಮನೆ ಸಂದರ್ಶಿಸಿ ಪರಿಸ್ಥಿತಿಯನ್ನು ಅವಲೋಕಿಸಿದರು. ಹೊಸದುರ್ಗ ತಾಲೂಕಿನ ಕುನ್ನುಂಗೈ- ಚಿತ್ತಾರಿಕಲ್ ರಸ್ತೆ ಮತ್ತು ಕುನ್ನುಂಗೈ ಭೀಮ ನಡಿ ಸಂಪರ್ಕ ಪ್ರದೇಶದಲ್ಲಿ ಗುಡ್ಡ ಕುಸಿದು ರಸ್ತೆ ಮೇಲೆ ಬಿದ್ದು ಸಾರಿಗೆ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಕಾನತ್ತೂರಿನಲ್ಲಿ ಮರಗಳು ಉರುಳಿ ಮನೆ ಹಾಗೂ ಅಂಗಡಿಗೆ ಹಾನಿಗೀಡಾಗಿದೆ. ಅಲ್ಲಲ್ಲಿ ಮರಗಳು ಉರುಳಿಬಿದ್ದು ವಿದ್ಯುತ್ ಸಂಪರ್ಕ ಕಡಿದುಕೊಂಡಿದೆ.