ಅಬುಧಾಬಿ: ಐಪಿಎಲ್ 14ನೇ ಆವೃತ್ತಿಯ ಯುಎಇ ಚರಣದ ತನ್ನ ಮೊದಲ ಪಂದ್ಯದಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಗ್ಗರಿಸಿದೆ. ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ವಿರಾಟ್ ಪಡೆ ಹೀನಾಯ ಸೋಲನುಭವಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿದ ಆರ್ ಸಿಬಿ ತಂಡ ವರುಣ್ ಚಕ್ರವರ್ತಿ ಮತ್ತು ಆಂದ್ರೆ ರಸೆಲ್ ದಾಳಿಗೆ ನಲುಗಿ ರನ್ ಗಳಿಸಲು ಪರದಾಡಿತು. ಸತತ ವಿಕೆಟ್ ಕಳೆದುಕೊಂಡ ತಂಡ 19 ಓವರ್ ಗಳಲ್ಲಿ ಕೇವಲ 92 ರನ್ ಗಳಿಗೆ ಆಲೌಟ್ ಆಯಿತು.
ಗುರಿ ಬೆನ್ನತ್ತಿದ ಕೆಕೆಆರ್ ತಂಡವು 10 ಓವರ್ ಗಳಲ್ಲಿ ಕೇವಲ ಒಂದು ವಿಕೆಟ್ ಕಳೆದುಕೊಂಡು ಜಯ ಸಾಧಿಸಿತು. ಕೆಕೆಆರ್ ಪರ ರಸೆಲ್ ಮತ್ತು ವರುಣ್ ಚಕ್ರವರ್ತಿ ತಲಾ ಮೂರು ವಿಕೆಟ್ ಕಿತ್ತರೆ, ಬ್ಯಾಟಿಂಗ್ ನಲ್ಲಿ ಶುಭ್ಮನ್ ಗಿಲ್ 48 ರನ್ ಮತ್ತು ವೆಂಕಟೇಶ್ ಐಯ್ಯರ್ 41 ರನ್ ಗಳಿಸಿದರು.
ಇದನ್ನೂ ಓದಿ:ಕೆಕೆಆರ್ ಚಕ್ರವರ್ತಿ, ರಸೆಲ್ ದಾಳಿಗೆ ಆರ್‌ಸಿಬಿ ಕಂಗಾಲು
ಪಂದ್ಯದ ಬಳಿಕ ಮಾತನಾಡಿದ ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿ, ಮಂದಿನ ತಿಂಗಳಿನಲ್ಲಿ ಆರಂಭವಾಗುವ ಟಿ20 ವಿಶ್ವಕಪ್ ನಲ್ಲಿ ವರುಣ್ ಚಕ್ರವರ್ತಿ ಭಾರತ ತಂಡದ ಪ್ರಮುಖ ಅಸ್ತ್ರವಾಗಲಿದ್ದಾರೆ ಎಂದರು.
ವರುಣ್ ಚಕ್ರವರ್ತಿ ಆಟ ಉತ್ತಮವಾಗಿತ್ತು. ಭಾರತ ತಂಡದಲ್ಲಿ ಈತ ಪ್ರಮುಖ ಅಸ್ತ್ರವಾಗಲಿದ್ದಾನೆ. ಯುವ ಆಟಗಾರರಲ್ಲಿ ಇಂತಹ ಪ್ರದರ್ಶನವನ್ನು ನಾನು ಕಾಣಲು ಇಚ್ಛಿಸುತ್ತೇನೆ. ಇದರಿಂದ ಭಾರತದ ತಂಡದ ಭವಿಷ್ಯ ಉತ್ತಮವಾಗಿರುತ್ತದೆ ಎಂದು ವಿರಾಟ್ ಕೊಹ್ಲಿ ಹೇಳಿದರು.