Advertisement

ವರ್ತೂರು ಪ್ರಕಾಶ್‌ಗೆ ಸಿಎಂ ಟೀಕಿಸುವಷ್ಟು ನೈತಿಕತೆ ಇಲ್ಲ

01:26 PM Dec 04, 2017 | Team Udayavani |

ತಿ.ನರಸೀಪುರ: ಸ್ಥಳೀಯ ಸಂಸ್ಥೆಗಳಲ್ಲಿ ಹಿಂ.ವರ್ಗಗಳಿಗೆ ಹಾಗೂ ಸಹಕಾರಿ ಕ್ಷೇತ್ರದಲ್ಲಿ ದಲಿತರಿಗೆ ಮೀಸಲಾತಿ ವಿಸ್ತರಣೆ ಮಾಡುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗಗಳಿಗೆ ರಾಜಕೀಯ ಪ್ರಾತಿನಿಧ್ಯ ಕೊಟ್ಟು, ದಲಿತರಿಗೂ ಸಹಕಾರಿ ಸಂಘಗಳಲ್ಲಿ ಪ್ರತಿನಿಧಿಗಳಾಗಲೂ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ ಎಂದು ಜಿಪಂ ಮಾಜಿ ಅಧ್ಯಕ್ಷ ಹಾಗೂ ಕೆಎಂಎಫ್ ನಿರ್ದೇಶಕ  ಕೆ.ಸಿ.ಬಲರಾಂ ಹೇಳಿದರು.

Advertisement

ಪಟ್ಟಣದ ಲೋಕೋಪಯೋಗಿ ಅತಿಥಿ ಗೃಹದಲ್ಲಿ ಭಾನುವಾರ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಹಿಂದ ಸಮುದಾಯಗಳ ಪರ ಹೋರಾಟದಿಂದಲೇ ರಾಜಕೀಯ ಅಧಿಕಾರ ಪಡೆದುಕೊಂಡ ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗಗಳಿಗೆ ಮೀಸಲಾತಿ ಸೌಲಭ್ಯ ಕಲ್ಪಿಸದಿದ್ದರಿಂದ ಕುರುಬ ಸಮುದಾಯಕ್ಕೆ ಹೆಚ್ಚಿನ ಅವಕಾಶಗಳು ಲಭ್ಯವಾಗಿವೆ. ಅಂತಹವರ ಹೆಸರಿನಿಂದಲೇ ಜಿಪಂ ಸದಸ್ಯರಾಗಿ ಶಾಸಕರಾದ ವರ್ತೂರು ಪ್ರಕಾಶ್‌ಗೆ ಮುಖ್ಯಮಂತ್ರಿಗಳನ್ನು ಟೀಕಿಸುವಷ್ಟು ನೈತಿಕತೆ ಇಲ್ಲವೆಂದು ಖಂಡಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂಗ್ರೆಸ್‌ನಿಂದ ಎಚ್‌.ವಿಶ್ವನಾಥ್‌ ಅವರನ್ನಾಗಲಿ ಅಥವಾ ವಿ.ಶ್ರೀನಿವಾಸ್‌ಪ್ರಸಾದ್‌ ಅವರನ್ನು ಹೊರ ಹಾಕಲಿಲ್ಲ. ಅವರಾಗಿಯೇ ಪಕ್ಷವನ್ನು ತ್ಯಜಿಸಿದ್ದಾರೆ. ಸಮುದಾಯದ ಮುಖಂಡ ಎಂದು ಕೊಂಡು ಕುರುಬ ಸಮುದಾಯದ ಜನರು ವರ್ತೂರು ಸಭೆಗೆ ಹೋಗಿದ್ದಾರೆ. ಸಭೆಯಲ್ಲಿ ಸಿಎಂ ಅವರನ್ನು ಬಹಿರಂಗವಾಗಿ ಟೀಕಿಸಿದ್ದಕ್ಕೆ ಎಲ್ಲರಿಗೂ ಬೇಸರವಾಗಿದೆ ಎಂದು ಹೇಳಿದರು. 

ತಾಲೂಕು ಕುರುಬರ ಸಂಘದ ಅಧ್ಯಕ್ಷ ಟಿ.ಎಸ್‌.ಪ್ರಶಾಂತ್‌ಬಾಬು, ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಶಾಸಕ ವರ್ತೂರ್‌ ಪ್ರಕಾಶ್‌ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬ್ಯಾನರ್‌ನಡಿ ಭಾವಚಿತ್ರ ಹಾಕಿಕೊಂಡು ತಾನೂ ಕುರುಬ ಸಮುದಾಯದ ರಾಜಕಾರಣಿ ಎಂಬುದಾಗಿ ಗುರುತಿಸಿಕೊಂಡರು. ಕೋಲಾರದಲ್ಲಿಯೂ ಸಿಎಂ ಹೆಸರನ್ನು ಬಳಕೆ ಮಾಡಿಕೊಂಡು ಶಾಸಕರಾದರು.

ಕೆಲವು ದಿನಗಳ ಹಿಂದೆಯಷ್ಟೇ ಸಿದ್ದರಾಮಯ್ಯ ಅವರೇ ಮುಂದೆಯೂ ಮುಖ್ಯಮಂತ್ರಿ ಆಗುತ್ತಾರೆಂಬ ಹೇಳಿಕೆ ಕೊಟ್ಟು ರಾಜಕೀಯ ದುರುದ್ದೇಶದಿಂದ ಸಮುದಾಯವನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆಂದು ದೂರಿದರು. ಹೊಸ ರಾಜಕೀಯ ಪಕ್ಷವನ್ನು ಕಟ್ಟಲಿಕ್ಕೆ ಸಿದ್ದರಾಮಯ್ಯ ಅವರನ್ನು ತೇಜೋವಧೆ ಮಾಡಬಾರದು. ವರ್ತೂರು ಪ್ರಕಾಶ್‌ ವರ್ತನೆ ಹೀಗೆ ಮುಂದುವರೆದಲ್ಲಿ ಅವರ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

Advertisement

 ತಾಲೂಕು ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ಕೊತ್ತೇಗಾಲ ಬಸವರಾಜು, ತಾಪಂ ಮಾಜಿ ಉಪಾಧ್ಯಕ್ಷ ಬಿ.ಮರಯ್ಯ, ಕಾರ್ಮಿಕ ಕಾಂಗ್ರೆಸ್‌ ಮಾಜಿ ಜಿಲ್ಲಾಧ್ಯಕ್ಷ ಜಿ.ಎನ್‌.ಗೋಪಾಲರಾಜು, ಟಿಎಪಿಸಿಎಂಎಸ್‌ ನಿರ್ದೇಶಕ ಬಿ.ಮಹದೇವ, ಗಗೇಶ್ವರಿ ಪಿಎಸಿಸಿಎಸ್‌ ಉಪಾಧ್ಯಕ್ಷ ಮಸೂರ್‌ ಅಹಮ್ಮದ್‌, ಗ್ರಾಪಂ ಮಾಜಿ ಅಧ್ಯಕ್ಷ ಶಿವರಾಮು, ಮುದ್ದಬೀರನಹುಂಡಿ ಗುರುಸ್ವಾಮಿ, ಯುವ ಕಾಂಗ್ರೆಸ್‌ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರುಣ್‌ಕುಮಾರ್‌, ಮುಖಂಡರಾದ ಎಂ.ವೆಂಕಟೇಶ್‌(ವೆಂಕಿ), ಮಂಜುನಾಥ್‌ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next