ಬೆಳ್ತಂಗಡಿ: ಧರ್ಮಸ್ಥಳ ವಿರುದ್ಧ ನ್ಯಾಯಾಲಯದ ಪ್ರತಿಬಂಧಕಾಜ್ಞೆಯನ್ನು ಉಲ್ಲಂಘಿಸಿ ವೃಥಾರೋಪ ಮಾಡಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಗುರುವಾಯನಕೆರೆ ನಾಗರಿಕ ಸೇವಾ ಟ್ರಸ್ಟ್ ಅಧ್ಯಕ್ಷ ಕೆ. ಸೋಮನಾಥ ನಾಯಕ್ ಅವರಿಗೆ ಇಲ್ಲಿನ ಹೆಚ್ಚುವರಿ ನ್ಯಾಯಾಲಯ ಸೋಮವಾರ ಸಂಜೆ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹಾಗೂ ಅವರ ಸಂಸ್ಥೆಗಳ ಕುರಿತು ಯಾವುದೇ ರೀತಿಯ ವೃಥಾರೋಪಗಳನ್ನು ಮಾಡದಂತೆ ಇಲ್ಲಿನ ಹೆಚ್ಚುವರಿ ನ್ಯಾಯಾಲಯ ಸೋಮನಾಥ ನಾಯಕ್ ವಿರುದ್ಧ ಪ್ರತಿಬಂಧಕಾಜ್ಞೆ ನೀಡಿತ್ತು. ಇದನ್ನು ಉಲ್ಲಂಘಿಸಿದ ಸೋಮನಾಥ ನಾಯಕ್ ಅವರು ಧರ್ಮಸೂಕ್ಷ್ಮ ಮೊದಲಾದ ಪುಸ್ತಕಗಳನ್ನು ಪ್ರಕಟಿಸಿ ಹೆಗ್ಗಡೆಯವರು ಹಾಗೂ ಅವರ ಶಿಕ್ಷಣ ಸಂಸ್ಥೆಗಳು ಮತ್ತು ಇತರ ಸಂಸ್ಥೆಗಳ ಕುರಿತು ಆರೋಪಗಳನ್ನು ಮಾಡಿ ಹಂಚಿದ್ದರು. ಇದರ ವಿರುದ್ಧ ಕ್ಷೇತ್ರದ ವತಿಯಿಂದ ನ್ಯಾಯಾಲಯದಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲಾಗಿತ್ತು. ವಾದ ವಿವಾದ ಆಲಿಸಿ, ಸಾಕ್ಷಿಗಳ ವಿಚಾರಣೆ ನಡೆಸಿದ ನ್ಯಾಯಾಲಯ ಸೋಮನಾಥ ನಾಯಕ್ ಅವರನ್ನು
ದೋಷಿ ಎಂದು ಪರಿಗಣಿಸಿ ತೀರ್ಪು ನೀಡಿದೆ.
ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶ ಆನಂದ್ ತೀರ್ಪು ನೀಡಿದ್ದು, ಪುಸ್ತಕಗಳ ಪ್ರಕಟನೆ ಹಾಗೂ ಆಪಾದನೆ ಎರಡು ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿ ತಲಾ 3 ತಿಂಗಳ ಜೈಲು ಶಿಕ್ಷೆ ವಿಧಿಸಿದ್ದಾರೆ. ಹಾಗೂ ಧರ್ಮಸ್ಥಳಕ್ಕೆ ಪರಿಹಾರ ರೂಪವಾಗಿ 4.93 ಲಕ್ಷ ರೂ. ನೀಡಬೇಕು. ನಾಯಕ್ ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಬೇಕು. ಪರಿಹಾರದ ಮೊತ್ತ ನೀಡದೇ ಇದ್ದಲ್ಲಿ ಆಸ್ತಿಯನ್ನು ಏಲಂ ಮಾಡಿ ಪರಿಹಾರ ಮೊತ್ತ ವಿತರಿಸಿ ಉಳಿಕೆ ಮೊತ್ತವನ್ನು ನ್ಯಾಯಾಲಯಕ್ಕೆ ಪಾವತಿಸಬೇಕು ಎಂದು ಆದೇಶದಲ್ಲಿ ವಿವರಿಸಲಾಗಿದೆ. ಆಸ್ತಿ ಮುಟ್ಟುಗೋಲು ಸಂಬಂಧ ನ್ಯಾಯಾಲಯದಿಂದ ತಹಶೀಲ್ದಾರರಿಗೂ ಸೂಚನೆ ನೀಡುವಂತೆ ಆದೇಶಿಸಲಾಗಿದೆ. ಕ್ಷೇತ್ರದ ಪರವಾಗಿ ಎನ್.ಡಿ. ರತ್ನವರ್ಮ ಬುಣ್ಣು ಹಾಗೂ ಬದರಿನಾಥ್ ಸಂಪಿಗೆತ್ತಾಯ ವಾದಿಸಿದ್ದರು.