ಉಡುಪಿ: ಭಗವಂತ ಶ್ರೀಕೃಷ್ಣನಿಗೆ ಬ್ರಹ್ಮಕಲಶಾಭಿಷೇಕ ನಡೆಸಿದರೆ ಭಗವಂತ ವರುಣಾಭಿಷೇಕ ನಡೆಸಿ ಮಳೆ, ಬೆಳೆ ಬರುವಂತೆ ಮಾಡುತ್ತಾನೆ ಎಂದು ವಿದ್ವಾಂಸ ಹಿರಣ್ಯ ವೆಂಕಟೇಶ ಭಟ್ ಹೇಳಿದರು.
ಶ್ರೀಕೃಷ್ಣಮಠದ ಬ್ರಹ್ಮಕಲಶೋತ್ಸವದ ಅಂಗವಾಗಿ ಸೋಮವಾರ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದ ಅವರು, ಕರಾವಳಿಯಲ್ಲಿ ಬ್ರಹ್ಮಕಲಶಾಭಿಷೇಕ ಎಂಬ ಹೆಸರು ಇದ್ದರೆ, ಇತರೆಡೆ ಕುಂಭಾಭಿಷೇಕ ಎಂಬ ಹೆಸರು ಇದೆ. ಬ್ರಹ್ಮ ಶಬ್ದದ ಹಿಂದೆ ಸಾಕಷ್ಟು ಅರ್ಥವಿಸ್ತಾರಗಳಿರುವುದರಿಂದ ಈ ಹೆಸರೇ ಸಮುಚಿತ ಎಂದರು.
ಪಾಂಚರಾತ್ರ ಆಗಮದಿಂದ ಆಗಮಶಾಸ್ತ್ರಗಳು ವಿಸ್ತಾರ ವಾಗುತ್ತಾ ಬಂದಿವೆ ಎಂದು ಶ್ರೀಮದ್ಭಾಗವತ ಪುರಾಣದಲ್ಲಿದೆ. ಇದು ಆಚಾರ್ಯತ್ರಯರಿಗೂ ಸಮ್ಮತವಾಗಿದೆ. ಧರ್ಮ ಶಬ್ದವನ್ನು ವಿಷ್ಣುಸಹಸ್ರನಾಮದಲ್ಲಿ ಭಗವಂತ ಎಂದು ಕರೆಯಲಾಗಿದೆ. ದೇಹಧರ್ಮ ಮತ್ತು ಜೀವಧರ್ಮ ಎಂಬ ಪ್ರಕಾರವೂ ಇದೆ. ಒಂದು ಶರೀರದಿಂದ ತನ್ನ ಉದ್ದೇಶ ಈಡೇರಲು ಸಾಧ್ಯವಿಲ್ಲವೆ ಎನ್ನುವಾಗ ಜೀವ ಅದನ್ನು ಬಿಟ್ಟು ಇನ್ನೊಂದು ಶರೀರ ಪ್ರವೇಶಿಸುತ್ತದೆ ಎಂದು ಗೀತೆಯಲ್ಲಿ ವರ್ಣಿಸಲಾಗಿದೆ. ಆದ್ದರಿಂದ ದೇಹಕ್ಕೆ ಅಲಂಕಾರ ಮಾಡುವುದೇ ಮೊದಲಾದ ದೇಹಧರ್ಮ ಭಯಂಕರವೂ, ಜೀವದ ವಿಕಾಸಕ್ಕಾಗಿ ಮಾಡುವ ಜೀವಧರ್ಮ ಶ್ರೇಯಸ್ಕರವೂ ಆಗಿದೆ ಎಂದು ಭಟ್ ವಿಶ್ಲೇಷಿಸಿದರು.
ಶಾಸಕ ವಿನಯಕುಮಾರ ಸೊರಕೆ ಅವರು ಪೇಜಾವರ ಶ್ರೀ ನಡೆಸಿದ ಶ್ರೀಕೃಷ್ಣಮಠದ ನವೀಕರಣ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದರು. ಶ್ರೀಸೋದೆ ಶ್ರೀ ಅಧ್ಯಕ್ಷತೆ ವಹಿಸಿದ್ದರು. ಪರ್ಯಾಯ ಶ್ರೀ ಪೇಜಾವರ ಉಭಯ ಶ್ರೀಗಳು, ಪ್ರಯಾಗ ಶ್ರೀ ಆಶೀರ್ವಚನ ನೀಡಿದರು. ಸಿ.ಎಚ್. ಬದರೀನಾಥಾಚಾರ್ಯ ನಿರ್ವಹಿಸಿದರು.
ಕಲಶ, ಹೊರೆಕಾಣಿಕೆ ಮೆರವಣಿಗೆ
ಮಂಗಳವಾರ ಅಪರಾಹ್ನ ಬ್ರಹ್ಮಕಲಶೋತ್ಸವದ ಕಲಶ, ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ. ಬಳಿಕ ನಡೆಯುವ ಸಭೆಯಲ್ಲಿ ಧರ್ಮಸ್ಥಳದ ಡಾ| ಡಿ. ವೀರೇಂದ್ರ ಹೆಗ್ಗಡೆ, ನಾಗಾಲ್ಯಾಂಡ್ ರಾಜ್ಯಪಾಲ ಪಿ.ಬಿ. ಆಚಾರ್ಯ, ಸಚಿವ ಯು.ಟಿ. ಖಾದರ್ ಪಾಲ್ಗೊಳ್ಳುವರು.