ನವದೆಹಲಿ: ಲಾಕ್‌ಡೌನ್ ಅನಂತರ ಲಕ್ಷಾಂತರ ಕಾರ್ಮಿಕರು ಹೆಚ್ಚಿನ ಅವಧಿಗೆ ಕೆಲಸ ಮಾಡಬೇಕಾದ ಅನಿವಾರ್ಯತೆ ಎದುರಿಸಲಿದ್ದಾರೆ.
ಸುಮಾರು 6 ರಾಜ್ಯಗಳು ಈ ಸಂಬಂಧ ಕಾನೂನು ರೂಪಿಸಿದ್ದು, ಕೆಲಸದ ಅವಧಿಯನ್ನು ಈಗಿನ 8 ಗಂಟೆಗಳ ಬದಲಾಗಿ 12 ಗಂಟೆಗಳಿಗೆ ವಿಸ್ತರಣೆ ಮಾಡಿವೆ. ಇದರಿಂದಾಗಿ ಕಂಪೆನಿಗಳು ಕಡಿಮೆ ಕಾರ್ಮಿಕರೊಂದಿಗೆ ಕೆಲಸ ನಿರ್ವಹಿಸಬಹುದು. ಜತೆಗೆ, ಶಿಫ್ಟ್ ಗಳ ಸಂಖ್ಯೆಯನ್ನು ಕಡಿಮೆ ಮಾಡಬಹುದು ಎಂಬುದು ಇದರ ಉದ್ದೇಶ.
ರಾಜಸ್ಥಾನ ಸರಕಾರ ಈ ಸಂಬಂಧ ಏ.11ರಂದು ಅಧಿಸೂಚನೆ ಹೊರಡಿಸಿದ್ದು, ಮುಂದಿನ 3 ತಿಂಗಳ ಅವಧಿಗೆ ಈ ಕೆಲಸದ ಅವಧಿ ವಿಸ್ತರಣೆ ಜಾರಿಗೊಳಿಸಿದೆ. ಇದರಿಂದಾಗಿ ಸಂಸ್ಥೆಗಳು ವಾರದಲ್ಲಿ 6 ದಿನ, ಶೇ.33ರಷ್ಟು ಕಾರ್ಮಿಕರ ಸಂಖ್ಯೆಯೊಂದಿಗೆ ಕೆಲಸ ನಿರ್ವಹಿಸಬಹುದು ಎಂದು ಸರಕಾರ ಹೇಳಿದೆ.
ಗುಜರಾತ್, ಹರಿಯಾಣ, ಮಧ್ಯಪ್ರದೇಶ, ಪಂಜಾಬ್ ಮತ್ತು ಹಿಮಾಚಲ ಪ್ರದೇಶ ಸರಕಾರಗಳು ಕೂಡ ಇಂತಹ ಆದೇಶ ಜಾರಿಗೊಳಿಸಿವೆ. ಹೆಚ್ಚಿನ 4 ಗಂಟೆಗಳ ಅವಧಿಯನ್ನು ‘ಓವರ್ ಟೈಮ್’ ಎಂದು ಪರಿಗಣಿಸಲಾಗುತ್ತದೆ ಎಂದು ರಾಜಸ್ಥಾನ ಸರಕಾರ ಹೇಳಿದೆ.
ಗುಜರಾತ್ ಸರಕಾರ ಎ. 17ರಂದು ಹೊರಡಿಸಿದ ಆದೇಶದಲ್ಲಿ, ಹೆಚ್ಚುವರಿ ಅವಧಿಗೆ ಸಮನಾದ ವೇತನವನ್ನು ಕಾರ್ಮಿಕರಿಗೆ ನೀಡಬೇಕು. 6 ಗಂಟೆ ಅನಂತರ ಕಾರ್ಮಿಕರಿಗೆ ಅಲ್ಪ ವಿರಾಮ ನೀಡಬೇಕು ಎಂದಿದೆ.