Advertisement

ಆಷಾಢ ತಿಂಗಳ ವಿವಿಧ ಅಡುಗೆಗಳು

06:00 AM Aug 10, 2018 | |

ಆಟಿ ತಿಂಗಳಲ್ಲಿ ಹೆಚ್ಚಾಗಿ ಮನೆಯ ಸುತ್ತಮುತ್ತ ಬೆಳೆಯುವ ಚಗ್ತಿಸೊಪ್ಪು , ಒಂದೆಲಗ, ಕೆಸುವಿನೆಲೆ, ನುಗ್ಗೆ ಸೊಪ್ಪು, ಅರಸಿನ ಎಲೆ ಇತ್ಯಾದಿ ವಿವಿಧ ಸೊಪ್ಪುಗಳಿಂದ ಅಡುಗೆ ತಯಾರಿಸಿ ಸವಿಯಬಹುದು. ಅಲ್ಲದೆ ಕಳಲೆ (ಎಳೆ ಬಿದಿರು) ಮರಕೆಸು, ಗೆಣಸು, ಮರಗೆಣಸಿನ ಖಾದ್ಯಗಳು, ಹಣ್ಣು ಸೌತೆ, ಉಪ್ಪಿನಲ್ಲಿ ಹಾಕಿಟ್ಟ ಮಾವಿನಕಾಯಿ, ಹೆಬ್ಬಲಸು, ಹಲಸಿನ ಸೊಳೆ ಇತ್ಯಾದಿಗಳ ವ್ಯಂಜನಗಳನ್ನು ತಯಾರಿಸಿ ಚಪ್ಪರಿಸಬಹುದು. ಆಯಾಯ ಋತುವಿನಲ್ಲಿ ಸಿಗುವ ಸೊಪ್ಪು ತರಕಾರಿ, ಹಣ್ಣು ತಿಂದು ಆರೋಗ್ಯ ಕಾಪಾಡಿಕೊಳ್ಳಬಹುದು.

Advertisement

ಮರಕೆಸುವಿನ ಪೋಡಿ
ಬೇಕಾಗುವ ಸಾಮಗ್ರಿ: ಮರಕೆಸು 8-10, ಅಕ್ಕಿ- 1/2 ಕಪ್‌, ಉದ್ದಿನಬೇಳೆ 4 ಚಮಚ, ಉಪ್ಪು ರುಚಿಗೆ, ಹುಣಸೆಹಣ್ಣು – 2 ಗೋಲಿಗಾತ್ರ, ಒಣ ಮೆಣಸಿನಕಾಯಿ 8-10, ಇಂಗು ಸ್ವಲ್ಪ , ಕರಿಯಲು ಎಣ್ಣೆ.

ತಯಾರಿಸುವ ವಿಧಾನ: ಮರಕೆಸುವಿನ ಎಲೆ ತೊಳೆದು ನೀರು ಒರೆಸಿಡಿ. ಅಕ್ಕಿಯನ್ನು ಒಂದು ಗಂಟೆ ನೀರಿನಲ್ಲಿ ನೆನೆಸಿಡಿ. ಉದ್ದಿನಬೇಳೆ ಹುರಿದಿಡಿ. ನೀರು ಬಸಿದು ಅಕ್ಕಿ, ಉದ್ದಿನಬೇಳೆ, ಹುಣಸೆಹಣ್ಣು , ಉಪ್ಪು ಒಟ್ಟಿಗೆ ನಯವಾಗಿ ರುಬ್ಬಿ ಇಂಗಿನಪುಡಿ ಹಾಕಿ ಬೆರೆಸಿ ತೆಗೆಯಿರಿ. ಹಿಟ್ಟು ತೆಳುವಾಗಿರಬಾರದು. ಮರಕೆಸುವಿನ ಹಿಂಭಾಗದಲ್ಲಿ ತೆಳುವಾಗಿ ಸವರಿ ಒಂದರ ಮೇಲೆ ಒಂದರಂತೆ ಮೂರು ಎಲೆ ಇಟ್ಟು ಹಾಸಿಗೆ ಮಡಚಿದಂತೆ ಮಡಚಿ ಅಡ್ಡಕ್ಕೆ ತೆಳುವಾಗಿ ತುಂಡರಿಸಿಡಿ. ಬಾಣಲೆಯಲ್ಲಿ ಎಣ್ಣೆ ಕಾದ ಮೇಲೆ ನಾಲ್ಕೈದು ಪೋಡಿ ಹಾಕಿ ಹದ ಉರಿಯಲ್ಲಿ ಎರಡೂ ಬದಿ ಕಾಯಿಸಿ ತೆಗೆಯಿರಿ. ಮರಕೆಸುವನ್ನು ಎಣ್ಣೆಯಲ್ಲಿ ಕಾಯಿಸುವ ಬದಲು ಹಬೆಯ ಪಾತ್ರೆಯಲ್ಲಿ ನೀರು ಕಾದ ಮೇಲೆ ಪತ್ರೋಡೆ ಇಟ್ಟು ಬೇಯಿಸಿರಿ, ತೆಂಗಿನೆಣ್ಣೆ ಹಾಕಿ ಸವಿಯಿರಿ.

ಚಗತೆ ಸೊಪ್ಪು (ಅಂಬಡೆ) ಡಾಂಗರ
ಬೇಕಾಗುವ ಸಾಮಗ್ರಿ:
ಚಗತೆ ಸೊಪ್ಪು- 2 ಕಪ್‌, ಅಕ್ಕಿರವೆ- 1 ಕಪ್‌, ಅಚ್ಚ ಖಾರದ ಪುಡಿ 3-4 ಚಮಚ, ರುಚಿಗೆ ಉಪ್ಪು , ಕೊತ್ತಂಬರಿ ಹುಡಿ- 1 ಚಮಚ, ಕರಿಯಲು ಎಣ್ಣೆ.

ತಯಾರಿಸುವ ವಿಧಾನ: ಚಗತೆ ಸೊಪ್ಪನ್ನು ತೊಳೆದು ಚಿಕ್ಕದಾಗಿ ಹೆಚ್ಚಿಡಿ. ಅಕ್ಕಿರವೆ, ಅಚ್ಚಖಾರದ ಪುಡಿ, ಉಪ್ಪು, ಕೊತ್ತಂಬರಿ ಹುಡಿ, ಚಗತೆ ಸೊಪ್ಪು ಹಾಕಿ ಸ್ವಲ್ಪ ನೀರು ಬೆರೆಸಿ ಉಂಡೆ ಮಾಡಿ. ಬಾಣಲೆಯಲ್ಲಿ ಎಣ್ಣೆ ಕಾದ ಮೇಲೆ ಚಗತೆ ಅಂಬಡೆಯನ್ನು ಸ್ವಲ್ಪ ಚಪ್ಪಟೆ ಮಾಡಿ ಎಣ್ಣೆಯಲ್ಲಿ ಹಾಕಿ ಕರಿದು ತೆಗೆಯಿರಿ. ಊಟದ ಹೊತ್ತಿಗೆ ಅಥವಾ ಸಂಜೆ ಟಿಫಿನ್‌ಗೆ ಬಲು ರುಚಿ.

Advertisement

ಕಳಲೆ ಅಂಬಡೆ
ಬೇಕಾಗುವ ಸಾಮಗ್ರಿ:
ಕಳಲೆ ಚೂರು- 1 ಕಪ್‌, ಬೆಳ್ತಿಗೆ ಅಕ್ಕಿ- 1 ಕಪ್‌, ಉಪ್ಪು ರುಚಿಗೆ, 8-10 ಒಣಮೆಣಸಿನ ಕಾಯಿ, ತೆಂಗಿನ ತುರಿ- 4 ಚಮಚ, ಹುಣಸೆಹಣ್ಣು- ಗೋಲಿ ಗಾತ್ರ, ಕರಿಯಲು ಎಣ್ಣೆ.

ತಯಾರಿಸುವ ವಿಧಾನ: ಕಳಲೆ ಚೂರನ್ನು ನೀರಿನಲ್ಲಿ ನೆನೆಸಿಡಿ. ಬೆಳ್ತಿಗೆ ಅಕ್ಕಿಯನ್ನು ಎರಡು ಗಂಟೆ ನೆನೆಸಿಡಿ. ನಂತರ ಬಸಿದು ಒಣಮೆಣಸಿನಕಾಯಿ, ತೆಂಗಿನ ತುರಿ, ಹುಣಸೆ ಹಣ್ಣು, ಉಪ್ಪು ಹಾಕಿ ಸ್ವಲ್ಪ ತರಿ ತರಿ ರುಬ್ಬಿ ತೆಗೆದು ಪಾತ್ರೆಗೆ ಹಾಕಿ ಕಳಲೆ ಚೂರು ಬೆರೆಸಿ ಉಂಡೆ ಮಾಡಿ ಚಪ್ಪಟೆ ಮಾಡಿಡಿ. ಬಾಣಲೆಯಲ್ಲಿ ಎಣ್ಣೆ ಕಾದ ನಂತರ ಕಳಲೆೆ ಅಂಬಡೆ ಹಾಕಿ ಕರಿದು ತೆಗೆಯಿರಿ. ಘಮಘಮ ಕಳಲೆ ಅಂಬಡೆ ತಯಾರು.

ಬಸಳೆಸೊಪ್ಪಿನ ತಂಬುಳಿ
ಬೇಕಾಗುವ ಸಾಮಗ್ರಿ:
ಬಸಳೆ ಎಲೆ- 20, ಹಸಿಮೆಣಸಿನಕಾಯಿ- 1, ಮೊಸರು- 1 ಕಪ್‌, ತೆಂಗಿನತುರಿ- 1/2 ಕಪ್‌, ತುಪ್ಪ- 1 ಚಮಚ, ಉಪ್ಪು ರುಚಿಗೆ, ಜೀರಿಗೆ- 1 ಚಮಚ.

ತಯಾರಿಸುವ ವಿಧಾನ: ಬಸಳೆ ಸೊಪ್ಪು ತೊಳೆದು ಚಿಕ್ಕದಾಗಿ ಹೆಚ್ಚಿಡಿ. ಬಾಣಲೆಯಲ್ಲಿ ತುಪ್ಪ ಹಾಕಿ ಜೀರಿಗೆ, ಬಸಳೆಸೊಪ್ಪು , ಮೆಣಸಿನಕಾಯಿ ಹಾಕಿ ಸ್ವಲ್ಪ ಹೊತ್ತು ಬಾಡಿಸಿ ಕಾಯಿತುರಿಯೊಂದಿಗೆ ರುಬ್ಬಿ. ಉಪ್ಪು , ಮೊಸರು ಸೇರಿಸಿ ಬೆರೆಸಿಡಿ. ಬಸಳೆ ತಂಬುಳಿ ಸಿದ್ಧ.
ಬಸಳೆ ಇಲ್ಲದಿದ್ದರೆ ಪಾಲಕ್‌ ಸೊಪ್ಪಿನಿಂದ ತಂಬುಳಿ ಮಾಡಿ ಸವಿಯಿರಿ.

ಒಂದೆಲಗ (ಬ್ರಾಹ್ಮಿ) ಚಟ್ನಿ
ಬೇಕಾಗುವ ಸಾಮಗ್ರಿ:
ಒಂದೆಲಗದ ಎಲೆ- 1 ಕಪ್‌, ತೆಂಗಿನ ತುರಿ- 1/2 ಕಪ್‌, ಉಪ್ಪು ರುಚಿಗೆ, ಬೆಲ್ಲ- ಗೋಲಿ ಗಾತ್ರ, ಮೆಣಸಿನಕಾಯಿ- 2, ಜೀರಿಗೆ- 1 ಚಮಚ.

ತಯಾರಿಸುವ ವಿಧಾನ: ಒಂದೆಲಗದ ಎಲೆ ತೊಳೆದು ತೆಂಗಿನತುರಿ, ಮೆಣಸಿನಕಾಯಿ, ಬೆಲ್ಲ, ಜೀರಿಗೆ, ಉಪ್ಪು ಹಾಕಿ ಗಟ್ಟಿಯಾಗಿ ನಯವಾಗಿ ರುಬ್ಬಿ ತೆಗೆಯಿರಿ. ಇದು ದೇಹಕ್ಕೆ ತಂಪು ನೀಡುವುದು.

ಎಸ್‌. ಜಯಶ್ರೀ ಶೆಣೈ

Advertisement

Udayavani is now on Telegram. Click here to join our channel and stay updated with the latest news.

Next