ಈ ಹೋಟೆಲಿನ ವಿಳಾಸ ಹುಡುಕುವುದು ಎಷ್ಟು ಸುಲಭವೆಂದರೆ, ಬನಶಂಕರಿ ಬಸ್‌ಸ್ಟಾಂಡ್‌ನ ಬಳಿ ಹೋದರೆ ಸಾಕು, ಇಡೀ ರೋಡಿನ ತುಂಬೆಲ್ಲಾ ಪಸರಿಸಿದ ಬಿರಿಯಾನಿ ಘಮ ನಿಮ್ಮನ್ನು ಕೈ ಹಿಡಿದು ಕರೆದುಕೊಂಡು ಹೋಗಿ ಶಿವಾಜಿ ಮಿಲಿಟರಿ ಹೋಟೆಲ್ನ ಮುಂದೆ ನಿಲ್ಲಿಸುತ್ತದೆ. ಈ ಬಿರಿಯಾನಿಯ ಇತಿಹಾಸ ಹುಡುಕುತ್ತಾ ಹೊರಟಾಗ ಸಿಕ್ಕ ಮಾಹಿತಿಗಳು ನಿಮಗಾಗಿ…
ಶತಮಾನದ ಇತಿಹಾಸ: ಸುಮಾರು 110 ವರ್ಷಗಳ ಇತಿಹಾಸ ಹೊಂದಿರುವ “ಶಿವಾಜಿ ಮಿಲಿಟರಿ ಹೋಟೆಲ್’ ಮೊದಲು ಶುರುವಾಗಿದ್ದು ಬೆಂಗಳೂರಿನ ನಗರ್ತಪೇಟೆಯಲ್ಲಿ. ಮನ್ನಾಜೇ ರಾವ್ ಎನ್ನುವವರು ಈ ಹೋಟೆಲ್ ಅನ್ನು ಪ್ರಾರಂಭಿಸಿದರು. ನಂತರ ಅವರ ಮಗ ಎಂ. ಲಕ್ಷ್ಮಣ್ ರಾವ್ ಅದನ್ನೇ ಮುಂದುವರಿಸುತ್ತಾ ಹೋದರು. ಈಗ ಈ ಹೋಟೆಲಿನ ಆಡಳಿತವನ್ನು ಮೂರನೇ ತಲೆಮಾರಿನ, ಲಕ್ಷ್ಮಣ್ ರಾವ್‌ರವರ ಮಕ್ಕಳಾದ ರಾಜೀವ್ ಮತ್ತು ಲೋಕೇಶ್ ನಡೆಸುತ್ತಿದ್ದಾರೆ.
ನಗರ್ತಪೇಟೆಯಿಂದ ಬನಶಂಕರಿ ಬಸ್ ನಿಲ್ದಾಣದ ಬಳಿಗೆ ಹೋಟೆಲ್ ಸ್ಥಳಾಂತರವಾಗಿ 25 ವರ್ಷಗಳೇ ಆಗಿವೆ. ತಲತಲಾಂತರಗಳಿಂದ ಹೋಟೆಲ್ ಉದ್ಯಮವನ್ನೇ ನಡೆಸಿ ಯಶಸ್ಸನ್ನು ಕಂಡಿರುವ ಇವರಿಗೆ, “ನಿಮ್ಮ ಯಶಸ್ಸಿನ ಗುಟ್ಟೇನು?’ ಎಂದು ಕೇಳಿದರೆ- “ನಾವು ದುಡ್ಡಿಗಾಗಿ ಹೋಟೆಲ್ ನಡೆಸುತ್ತಿಲ್ಲ. ನಮ್ಮ ಹೋಟೆಲ್‌ನಲ್ಲಿ ಊಟ ಮಾಡಿದವರು ಸಂತೋಷ ಪಡಬೇಕು ಎಂಬುದಷ್ಟೇ ನಮ್ಮ ಉದ್ದೇಶ’ ಎಂದು ಮುಗುಳ್ನಗುತ್ತಾರೆ.
ಲಿಮಿಟೆಡ್ ವೆರೈಟಿ: ಇತರೆ ಹೋಟೆಲ್‌ಗಳಂತೆ ನಿಮಗೆ ಇಲ್ಲಿ ಹಲವಾರು ವಿಧದ ಖಾದ್ಯಗಳು ಲಭ್ಯವಿಲ್ಲ. ಇಲ್ಲಿ ಸಿಗುವುದು ಕೇವಲ 13 ವೆರೈಟಿಗಳು ಮಾತ್ರ. ರೈಸ್‌ನಲ್ಲಿ ಸಿಗುವುದು ಮಟನ್ ಬಿರಿಯಾನಿ, ಚಿಕನ್ ಬಿರಿಯಾನಿ ಮತ್ತು ಘೀ ರೈಸ್ ಮಾತ್ರ. ಇನ್ನುಳಿದಂತೆ ಮಟನ್ ಚಾ±Õ…, ಮಟನ್ ಡ್ರೈ , ಮಟನ್ ಲಿವರ್ ಮತ್ತು ಕೈಮಾ ದೊರೆಯುತ್ತದೆ. ಚಿಕನ್ ಖಾದ್ಯಗಳಲ್ಲಿ ಚಿಲ್ಲಿ ಚಿಕನ್, ಲೆಮನ್ ಚಿಕನ್, ಚಿಕನ್ ಡ್ರೈ, ಚಿಕನ್ ಲೆಗÕ… ಮತ್ತು ಚಿಕನ್ ಚಾಪ್ಸ್ ದೊರೆಯುತ್ತದೆ. ನೀವು ಬೆಳಗಿನ ತಿಂಡಿಗೆ ಬಂದರೆ ದೋಸೆ, ಕಾಲುಸೂಪು, ಮಟನ್ ಬಿರಿಯಾನಿ ಮತ್ತು ಕೈಮಾ ದೊರೆಯುತ್ತದೆ.
ಮಟನ್ ಬಿರಿಯಾನಿಯೇ ಸ್ಪೆಷಲ್: ಈ ಹೋಟೆಲಿನಲ್ಲಿ ಊಟ ಮಾಡಬೇಕೆಂದರೆ ಕ್ಯೂನಲ್ಲಿ ಕಾಯಲೇಬೇಕು. ಯಾಕೆಂದರೆ ಇಲ್ಲಿನ ಬಿರಿಯಾನಿ ರುಚಿಗೆ ಮಾರುಹೋದವರ ಸಂಖ್ಯೆ ದೊಡ್ಡದು. ಹಲವಾರು ಸೆಲೆಬ್ರಿಟಿಗಳು ಈ ಹೋಟೆಲ್‌ನ ಅಡಿಗೆಯ ರುಚಿಗೆ ಮನಸೋತಿದ್ದಾರೆ.
ಬೇಗ ಬರಬೇಕು: ಈ ಹೋಟೆಲ್‌ನ ಸಮಯ ಬೆಳಗ್ಗೆ 8- 3.30 ರವರೆಗೆ. ಆದರೆ, ಸುಮಾರು ಎರಡು ಗಂಟೆಯ ಹೊತ್ತಿಗೆ ಊಟ ಖಾಲಿಯಾಗಿಬಿಡುತ್ತೆ. ತಡವಾಗಿ ಬಂದರೆ ಹಸಿವಿನಿಂದ ವಾಪಸ್ ಹೋಗಬೇಕಾದೀತು. ಅದರಲ್ಲೂ ಶುಕ್ರವಾರದಂದು ಇಲ್ಲಿ ಕಾಲಿಡಲೂ ಜಾಗವಿರುವುದಿಲ್ಲ.
ಮೆಚ್ಚುಗೆ, ಮನ್ನಣೆ: ಜಸ್ಟ್ ಡಯಲ್, ಜೊಮ್ಯಾಟೋ, ಎನ್ ಡಿ ಟಿ.ವಿ, ಗುಡ್ ಟೈಮ್ಸ್‌ನಂಥ ಪ್ರತಿಷ್ಠಿತ ಸಂಸ್ಥೆಗಳು ಇಲ್ಲಿನ ರುಚಿಗೆ ಫುಲ್ ಮಾರ್ಕ್ಸ್ ನೀಡಿ ಸರ್ಟಿಫಿಕೇಟ್ ಕೂಡಾ ನೀಡಿವೆ. ಇಲ್ಲಿ ಹೋಂ ಡೆಲಿವರಿ ಲಭ್ಯವಿಲ್ಲ. ಸೋಮವಾರ ಹೋಟೆಲ್‌ಗೆ ರಜೆ ಇರುತ್ತದೆ. ಇಲ್ಲಿ ಕ್ಯಾಟರಿಂಗ್ ಮತ್ತು ಪಾರ್ಟಿ ಹಾಲ್ ಸೌಲಭ್ಯ ಕೂಡಾ ಲಭ್ಯ. ಬನಶಂಕರಿಯಲ್ಲಿ ಮಾತ್ರ ಈ ಹೋಟೆಲ್ ಇದ್ದು ಬೇರೆಲ್ಲೂ ಶಾಖೆಗಳಿಲ್ಲ.
ಎಲ್ಲಿದೆ?: ಶಿವಾಜಿ ಮಿಲಿಟರಿ ಹೋಟೆಲ್, #718, 1ನೇ ಸಿ ಮೇನ್, ಎಂಟನೇ ಬ್ಲಾಕ್ ಜಯನಗರ
ಸಂಪರ್ಕ: 9845149217, 9980739217
* ಸ್ವಾತಿ ಕೆ.ಎಚ್.