ಉಡುಪಿ: ಜಿಲ್ಲಾಸ್ಪತ್ರೆ ಸಹಿತ ರಾಜ್ಯಾದ್ಯಂತ ಸ್ಕ್ಯಾನಿಂಗ್ ಹಾಗೂ ಎಂಆರ್‌ಐ ಸೇವೆ ಗುತ್ತಿಗೆ ಪಡೆದ ಕಂಪೆನಿಗೆ ರಾಜ್ಯ ಸರಕಾರ ಬಿಲ್ ಪಾವತಿಸದ ಕಾರಣ ರೋಗಿಗಳಿಗೆ ಸೇವೆ ಸಿಗದೆ ಸಂಕಷ್ಟ ಎದುರಾಗಿದೆ.
ಪ್ರಸ್ತುತ ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ತುರ್ತು ರೋಗಿಗಳಿಗೆ ಮಾತ್ರ ಎಂಆರ್‌ಐ ಸೇವೆ ನೀಡುತ್ತಿದ್ದು, ಇತರ ರೋಗಿಗಳಿಗೆ ವೈದ್ಯರು ಸಲಹೆ ನೀಡಿದರೂ ಸ್ಕ್ಯಾನಿಂಗ್ ಸೇವೆ ನೀಡುತ್ತಿಲ್ಲ. ಖಾಸಗಿ ಸಂಸ್ಥೆಗೆ 6 ತಿಂಗಳುಗಳಿಂದ ಬಿಲ್ ಪಾವತಿ ಬಾಕಿ ಇರುವ ಬಗ್ಗೆ ಸಂಸ್ಥೆ ಆರೋಪಿಸುತ್ತಿದೆ.
ಈ ಬಗ್ಗೆ ಸಂಸ್ಥೆಯು ಈಗಾಗಲೇ ಲಿಖೀತವಾಗಿ ಜಿಲ್ಲಾ ಸರ್ಜನ್‌ಗೂ ಮಾಹಿತಿ ನೀಡಿದೆ. ರಾಜ್ಯ ಸರಕಾರ ಹಣ ಬಿಡುಗಡೆ ಮಾಡಿದ ಕೂಡಲೇ ಪಾವತಿಗೆ ಕ್ರಮ ತೆಗೆದುಕೊಳ್ಳುವುದಾಗಿ ಜಿಲ್ಲಾ ಸರ್ಜನ್ ಡಾ| ಅಶೋಕ್ ಭರವಸೆ ನೀಡಿದ್ದು, ಅಲ್ಲಿಯವರೆಗೆ ತುರ್ತು ಸೇವೆಯಲ್ಲಿ ಯಾವುದೆ ವ್ಯತ್ಯಯ ಉಂಟಾಗದಂತೆ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದ್ದಾರೆ.
ಸರಕಾರ ಆರೋಗ್ಯ ಸಂಬಂಧಿತ ಸೇವೆಗಳ ವಿಚಾರದಲ್ಲಿ ಎಂದಿಗೂ ರಾಜಿ ಮಾಡದೆ ಜನಸಾಮಾನ್ಯರಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ರಾಜ್ಯ ಸರಕಾರ ಆದ್ಯತೆ ಮೇರೆಗೆ ಕ್ರಮ ಕೈಗೊಳ್ಳಬೇಕು. ತತ್‌ಕ್ಷಣ ಖಾಸಗಿ ಸಂಸ್ಥೆಗೆ ಬಾಕಿ ಮೊತ್ತ ಪಾವತಿಸಿ ವ್ಯತ್ಯಯವಾಗಿರುವ ಸೇವೆಯನ್ನು ಪರಿಹರಿಸುವಂತೆ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಆರೋಗ್ಯ ಸಚಿವರಿಗೆ ಮನವಿ ಮಾಡಿಕೊಂಡಿದ್ದಾರೆ.
ಪ್ರಸ್ತುತ ಜಿಲ್ಲಾಸ್ಪತ್ರೆಯಲ್ಲಿ ರೆಗ್ಯುಲರ್ ಎಂಆರ್‌ಐ ಹಾಗೂ ಸ್ಕ್ಯಾನಿಂಗ್ ಪ್ರಕ್ರಿಯೆಗಳು ನಡೆಯುತ್ತಿಲ್ಲ. ದಿನಂಪ್ರತಿ 30ರಷ್ಟು ರೋಗಿಗಳು ಇದರ ಸೇವೆ ಪಡೆಯುತ್ತಿದ್ದರು. ಪ್ರಸ್ತುತ ಸರಾಸರಿ 3ರಿಂದ 4 ತುರ್ತು ಸೇವೆಗಳನ್ನಷ್ಟೇ ಪರಿಗಣಿಸಲಾಗುತ್ತಿದೆ ಎಂದು ಜಿಲ್ಲಾ ಸರ್ಜನ್ ತಿಳಿಸಿದ್ದಾರೆ.