Advertisement

ಕಾಲುವೆಯಲ್ಲಿ ವಾರಾಹಿ ನೀರು ಬಂದರೂ ಕೃಷಿಭೂಮಿಗಿಲ್ಲ! ಒಣಗುತ್ತಿದೆ ಬೆಳೆಗಳು

10:00 PM Mar 14, 2021 | Team Udayavani |

ತೆಕ್ಕಟ್ಟೆ: ಬೇಸಗೆಯಲ್ಲಿ ವಾರಾಹಿ ಕಾಲುವೆ ನೀರು ಹರಿದು ಬಂದು ಕೃಷಿಗೆ ಪ್ರಯೋಜನವಾಗುತ್ತದೆ ಎಂದು ಅಂದುಕೊಂಡಿದ್ದ ರೈತರಿಗೆ ಈ ಬಾರಿ ಕಣ್ಣೆದುರೇ ಬೆಳೆ ನಿರ್ನಾಮವಾಗುವ ಆತಂಕ. ಕಾರಣ ಕೈಗೆ ಬಂದಿದ್ದು ಬಾಯಿಗಿಲ್ಲ ಎನ್ನುವಂತೆ, ಇಲ್ಲಿ ವಾರಾಹಿ ನೀರು ಕಾಲುವೆಗೆ ಬಂದರೂ ಕೃಷಿಭೂಮಿಗೆ ಬಂದಿಲ್ಲ.

Advertisement

ಸಮಸ್ಯೆ ಏನು?
ವಾರಾಹಿ ಕಾಲುವೆ ನೀರು ಹೊಂಬಾಡಿ ಮಂಡಾಡಿ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಹರಿದು ಹೋಗುತ್ತದೆ. ಹೀಗೆ ಹರಿಯುವ ನೀರು ಹುಣ್ಸೆಮಕ್ಕಿಯ ತಲ್ಮಕ್ಕಿಯ ಮದಗಕ್ಕೆ ಹರಿದು ಅಲ್ಲಿಂದ ನೈಸರ್ಗಿಕ ತೋಡುಗಳ ಮೂಲಕ 15 ಕಿ.ಮೀ. ವ್ಯಾಪ್ತಿಯಲ್ಲಿ ಹೊಂಬಾಡಿ, ಕೊರ್ಗಿ, ಹೊಸಮಠ, ಶಾನಾಡಿ, ಬೇಳೂರು ಸುಳಿಗುಂಡಿಯಲ್ಲಿ ಕೃಷಿಗೆ ಪ್ರಯೋಜನಕಾರಿಯಾಗುತ್ತಿತ್ತು. ಜತೆಗೆ ಅಂತರ್ಜಲ ಮಟ್ಟ ಏರಿಕೆಯಾಗಿ ಎಪ್ರಿಲ್‌ವರೆಗೂ ಪ್ರಯೋಜನ ವಾಗುತ್ತಿತ್ತು.

ಆದರೆ ಈ ಬಾರಿ ನೀರು ಬಂದಿದ್ದೇನೋ ಸರಿ. ಆದರೆ ಈ ನೀರು ಕಾಲುವೆ ಗೇಟುಗಳಿಂದ ಹೊರಗೆ ಹೋಗಿಲ್ಲ. ಕಾಲುವೆಯಲ್ಲಿ ಒಳಹರಿವು ಸಾಕಷ್ಟು ಇಲ್ಲದೆ ಇರುವುದರಿಂದ ನೀರಿನ ಮಟ್ಟ ಗೇಟಿನವರೆಗೂ ಏರಿಕೆಯಾಗಿಲ್ಲ. ಇದರಿಂದ ಕಾಲುವೆ ಯಲ್ಲಿರುವ ನೀರು ಹಾಗೆಯೇ ಇದ್ದು ಪ್ರಯೋಜನವಿಲ್ಲವಾಗಿದೆ. ಹರಿದು ಬಂದ ನೀರು ಆವಿಯಾಗುತ್ತಿದೆ. ಜತೆಗೆ ಬದಿಯಲ್ಲಿ ನೀರಿಲ್ಲದೆ ಕೃಷಿ ಭೂಮಿ ಒಣಗುತ್ತಿದೆ.

ಸ್ಪಂದನೆ ಇಲ್ಲ
ಸದ್ಯ ನೀರಿನ ಒಳಹರಿವು ಕಡಿಮೆ ಆಗಿರುವುದರಿಂದ ಗೇಟಿನಿಂದ ಹೊರಹೋಗುತ್ತಿಲ್ಲ. ಇದಕ್ಕಾಗಿ ಖಾಸಗಿ ಜಾಗದಲ್ಲಿ ಸುಮಾರು 15 ಮೀಟರ್‌ ಸಬ್‌ ಚಾನೆಲ್‌ ಮೂಲಕ ನೈಸರ್ಗಿಕ ತೋಡಿಗೆ ನೀರು ಹಾಯಿಸುವ ಬಗ್ಗೆ ಜಾಗದ ಪಾಲಕರು ಸಮ್ಮತಿಸಿದ್ದಾರೆ. ಆದರೂ ನೀರಾವರಿ ನಿಗಮದ ಅಧಿಕಾರಿಗಳು ಈ ಬಗ್ಗೆ ನಿರಾಸಕ್ತಿ ತೋರಿಸುತ್ತಿದ್ದು ರೈತರ ಬೇಡಿಕೆಗೆ ಸ್ಪಂದಿಸುತ್ತಿಲ್ಲ ಎಂದು ಕೊರ್ಗಿ ರೈತ ಸಂಘದ ಅಧ್ಯಕ್ಷ ಕೊರ್ಗಿ ಶ್ರೀನಿವಾಸ ಶೆಟ್ಟಿ ಅವರು ಹೇಳುತ್ತಾರೆ.

Advertisement

ಕಬ್ಬು ಕೃಷಿಗೆ ಸಂಕಷ್ಟ
ವಾರಾಹಿ ನೀರು ನಂಬಿ ಕಬ್ಬು ಬೆಳೆದ ಕೃಷಿಕರಿಗೆ ಇದರಿಂದ ತೀವ್ರ ಹಿನ್ನಡೆಯಾಗಿದೆ. ನೀರಿಲ್ಲದೆ ಕಬ್ಬು ಒಣಗುತ್ತಿದ್ದು ಎರಡು ಆಲೆಮನೆಗಳು ಮುಚ್ಚುವ ಭೀತಿಯಲ್ಲಿವೆ. ಜತೆಗೆ ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಪುನಶ್ಚೇತನಕ್ಕೆ ಕೊಡಲಿ ಏಟು ಬೀಳಬಹುದು.
– ಉಮಾನಾಥ ಶೆಟ್ಟಿ ಶಾನಾಡಿ, ಉಪಾಧ್ಯಕ್ಷರು, ಬ್ರಹ್ಮಾವರ ಸಕ್ಕರೆ ಕಾರ್ಖಾನೆ

ಪರಿಹಾರಕ್ಕೆ ಯತ್ನ
ತಲ್ಮಕ್ಕಿ ಸಮೀಪ ಕಾಲುವೆಗೆ ತಾತ್ಕಾಲಿಕವಾಗಿ ಸ್ಯಾಂಡ್‌ ಬ್ಯಾಗ್‌ ಹಾಕುವ ಮೂಲಕ ಮದಗಕ್ಕೆ ನೀರು ಹರಿಸುವ ಕೆಲಸ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ರೈತರ ಬೇಡಿಕೆಗೆ ಅನುಗುಣವಾಗಿ ಮೇಲಧಿಕಾರಿಗಳ ಗಮನಕ್ಕೆ ತಂದು ಶಾಶ್ವತ ಪರಿಹಾರ ಕಲ್ಪಿಸುವ ಬಗ್ಗೆ ಪ್ರಾಮಾಣಿಕ ಪ್ರಯತ್ನ ಮಾಡಲಿದ್ದೇವೆ.
-ಜಿ. ಭೀಮಾ ನಾಯ್ಕ , ಅಧೀಕ್ಷಕ ಅಭಿಯಂತ, ವಾರಾಹಿ ಯೋಜನೆ.

ರೈತರು ಕಂಗಾಲು
ವಾರಾಹಿಯನ್ನೇ ನಂಬಿ ಬದುಕು ಕಟ್ಟಿಕೊಂಡಿರುವ ಅದೆಷ್ಟೋ ರೈತರು ನೂರಾರು ಎಕರೆ ವಿಸ್ತೀರ್ಣದಲ್ಲಿ ಕಬ್ಬು ಹಾಗೂ ಅಡಿಕೆಯನ್ನು ಬೆಳೆದಿದ್ದಾರೆ. ಈಗ ನೀರು ಲಭ್ಯವಿಲ್ಲದೇ ಇರುವುದರಿಂದ ಅವರೆಲ್ಲ ಕಂಗಾಲಾಗಿದ್ದಾರೆ. ತತ್‌ಕ್ಷಣವೇ ಹುಣ್ಸೆಮಕ್ಕಿ ಸಮೀಪ ತಲ್ಮಕ್ಕಿಯಲ್ಲಿ ಹಾದು ಹೋಗಿರುವ ಕಾಲುವೆ ನೀರನ್ನು ನೈಸರ್ಗಿಕ ತೋಡುಗಳಿಗೆ ಹಾಯಿಸಬೇಕು ಎಂದು ಕೆದೂರು
ರೈತ ಸಂಘದ ಅಧ್ಯಕ್ಷ ಶರತ್‌ ಕುಮಾರ್‌ ಹೆಗ್ಡೆ ಹೇಳುತ್ತಾರೆ.

– ಟಿ.ಲೋಕೇಶ್‌ ಆಚಾರ್ಯ ತೆಕ್ಕಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next