ಉಡುಪಿ: ಡೀಮ್ಡ್ ಫಾರೆಸ್ಟ್ ಪ್ರದೇಶದಲ್ಲಿ ವಾರಾಹಿ ನೀರಾವರಿ ಪೈಪ್‌ಲೈನ್ ಅಳವಡಿಸಲು ಅರಣ್ಯ ಇಲಾಖೆಯಿಂದ ಅನುಮತಿ ಸಿಕ್ಕಿದೆ. ಇದರಿಂದ ವರ್ಷಗಳಿಂದ ವಿಳಂಬವಾಗಿದ್ದ ಕಾಮಗಾರಿಗೆ ಇದೀಗ ವೇಗ ದೊರೆತಿದೆ. ಆದರೂ ಉಡುಪಿ ನಗರಕ್ಕೆ ವಾರಾಹಿ ನೀರು ಈ ಬೇಸಗೆಯಲ್ಲಿ ಸಿಗದು.
ರಾಜ್ಯ ಸರಕಾರ ಯೋಜನೆಯನ್ನು ಕಾಲಮಿತಿ ಯೊಳಗೆ ಪೂರ್ಣಗೊಳಿ ಸಲು ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಿದೆ. ಅದರಂತೆ ಜಿಲ್ಲಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೈಪ್‌ಲೈನ್ ಕಾಮಗಾರಿ ವೇಗವಾಗಿ ಸಾಗುತ್ತಿದೆ. ಆದರೆ ಹಾಲಾಡಿಯ ಭರತ್ಕಲ್ ಸಮೀಪ ನೀರು ಶುದ್ಧೀಕರಣ ಘಟಕ ಆಗಬೇಕಾಗಿದೆ. ಪೈಪ್‌ಲೈನ್ ಪೂರ್ಣಗೊಂಡು ಪ್ರಾಯೋಗಿಕವಾಗಿ ನೀರು ಹರಿಸುವ ಪ್ರಕ್ರಿಯೆ ಆರಂಭವಾದರೂ ಶುದ್ಧೀಕರಣ ಘಟಕ ಪೂರ್ಣವಾಗದೇ ಯೋಜನೆಯಡಿ ಮನೆ ಮನೆಗೆ ನೀರು ಒದಗಿಸಲು ಸಾಧ್ಯವಿಲ್ಲ.
ಹೀಗಾಗಿ ಮಳೆಗಾಲ ಆರಂಭದೊಳಗೆ ಪೈಪ್‌ಲೈನ್ ಕಾಮಗಾರಿ ಪೂರ್ಣಗೊಳ್ಳಲಿದೆ. ಆದರೆ ನೀರು ಶುದ್ಧೀಕರಣ ಘಟಕ ನಿರ್ಮಾಣಕ್ಕೆ ಇನ್ನಷ್ಟು ಕಾಲಾವಕಾಶ ಬೇಕಾಗಬಹುದು ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಯೋಜನೆಯ ಬಹುಪಾಲು ಪ್ರದೇಶದಲ್ಲಿ ಅರಣ್ಯ, ಸಂರಕ್ಷಿತ ಅರಣ್ಯ ಇರುವುದರಿಂದ ಕಾಮಗಾರಿಗೆ ತಾಂತ್ರಿಕ ಸಮಸ್ಯೆ ಎದುರಾಗಿತ್ತು. ಈ ಹಿನ್ನೆಲೆಯಲ್ಲಿ ಡೀಮ್ಡ್ಫಾರೆಸ್ಟ್ ಪ್ರದೇಶದಲ್ಲಿ ಕಾಮಗಾರಿಗೆ ಅನುಮತಿ ಕೋರಿ ಜಿಲ್ಲಾಡಳಿತದಿಂದ ಅರಣ್ಯ ಇಲಾಖೆಗೆ ಪತ್ರ ಬರೆಯಲಾಗಿತ್ತು. ಸುಮಾರು 4.50 ಕಿ.ಮೀ.
ವ್ಯಾಪ್ತಿಯಲ್ಲಿ ಈ ಕಾಮಗಾರಿ ಆಗಬೇಕಿರುವುದರಿಂದ ಅರಣ್ಯ ಇಲಾಖೆ ಈಗ ಅನುಮತಿ ಕಲ್ಪಿಸಿದೆ ಎಂದು ಮೂಲಗಳು ತಿಳಿಸಿವೆ.
ವಾರಾಹಿ ಯೋಜನೆ ಅನುಷ್ಠಾನಕ್ಕೆ ಸಮಸ್ಯೆಯಾಗಿದ್ದ ಡೀಮ್ಡ್ ಫಾರೆಸ್ಟ್ ಪ್ರದೇಶದ ಕಾಮಗಾರಿಗೆ ಇದೀಗ ಅರಣ್ಯ ಇಲಾಖೆ ಅನುಮತಿ ಸಿಕ್ಕಿದೆ. ಕಾಮಗಾರಿ ವೇಗ ಪಡೆಯುತ್ತಿದೆ. ಆದರೆ ಈ ಮಳೆಗಾಲ ಆರಂಭದೊಳಗೆ ವಾರಾಹಿ ನೀರು ಪೂರ್ಣವಾಗಿ ಉಡುಪಿಗೆ ಸಿಗುವುದು ಕಷ್ಟ.
-ಡಾ| ಕೆ. ವಿದ್ಯಾಕುಮಾರಿ,
ಜಿಲ್ಲಾಧಿಕಾರಿ, ಉಡುಪಿ